ಬರ: ನೀರು ಪೂರೈಸಲು ಖಾಸಗಿ ಬೋರ್‌ವೆಲ್‌ ಬಳಸಲು ಸೂಚನೆ

| Published : May 10 2024, 01:37 AM IST / Updated: May 11 2024, 11:24 AM IST

ಸಾರಾಂಶ

ತಾಲೂಕಿನಾದ್ಯಂತ ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆಯಾಗದಂತೆ ಪಶುಪಾಲನಾ ಮತ್ತು ಕೆಎಂಎಫ್ ಇಲಾಖೆಯಿಂದ ಗುತ್ತಿಗೆಯಾಗಿದ್ದು, ಸುಮಾರು 2618 ಕಿಟ್‌ಗಳನ್ನು ರೈತರಿಗೆ ನೀಡಲಾಗುವುದು.

 ಕೆಜಿಎಫ್  : ತಾಲೂಕಿನಾದ್ಯಂತ ಮೂರ್‍ನಾಲ್ಕು ಗ್ರಾಮಗಳನ್ನು ಹೊರತುಪಡಿಸಿದರೆ ಬೇರೆ ಯಾವುದೇ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ ಎಂದು ಜಿಪಂ ಯೋಜನಾ ನಿರ್ದೇಶಕ ಹಾಗೂ ಕೆಜಿಎಫ್ ತಾಪಂ ಆಡಳಿತಾಧಿಕಾರಿ ರವಿಚಂದ್ರ.ಎನ್ ಹೇಳಿದರು. ನಗರದ ತಾಪಂ ಸಭಾಂಗಣದಲ್ಲಿ ರೇಷ್ಮೆ, ತೋಟಗಾರಿಕೆ, ಕೃಷಿ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸೇರಿದಂತೆ ವಿವಿಧ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ನಡೆದ ನರೇಗಾ ಯೋಜನೆ ಮತ್ತು ಬರ ನಿರ್ವಹಣೆ ಕುರಿತ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.3-4 ಗ್ರಾಮದಲ್ಲಿ ನೀರಿನ ಕೊರತೆ

ಕುಡಿಯುವ ನೀರಿನ ಸಮಸ್ಯೆಯಿರುವ ಮೂರ್‍ನಾಲ್ಕು ಗ್ರಾಮಗಳಲ್ಲಿಯೂ ತಾಪಂ ಕಾರ್ಯನಿರ್ವಹಣಾಧಿಕಾರಿ ಮತ್ತು ಸಂಬಂಧಪಟ್ಟ ಗ್ರಾಪಂ ಪಿಡಿಒಗಳು ಖಾಸಗೀ ಕೊಳವೆ ಬಾವಿಗಳಿಂದ ಸಾರ್ವಜನಿಕರಿಗೆ ಕುಡಿಯುವ ನೀರಿಗೆ ತೊಂದರೆಯುಂಟಾಗದಂತೆ ಅಗತ್ಯವಾದ ಕ್ರಮಗಳನ್ನು ಕೈಗೊಂಡಿರುವುದಾಗಿ ತಿಳಿಸಿದರು. ತೋಟಗಾರಿಕಾ ಇಲಾಖೆಯಿಂದ ಬೆಳೆ ನಷ್ಟ ಪರಿಹಾರಕ್ಕೆ ಈಗಾಗಲೇ ಸರ್ಕಾರದಿಂದ ಪ್ರತಿ ಹೆಕ್ಟೇರ್‌ಗೆ ನಿಗದಿಪಡಿಸಿರುವ ಪರಿಹಾರ ಹಣವನ್ನು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ಸಮಿತಿ ತಯಾರಿಸಿರುವ ವರದಿ ಸರ್ಕಾರಕ್ಕೆ ಸಲ್ಲಿಸಿದ್ದು, ಸಂಬಂಧಪಟ್ಟ ರೈತರಿಗೆ ಡಿಬಿಟಿ ತಂತ್ರಾಂಶದ ಮೂಲಕ ನೇರವಾಗಿ ಹಣ ತಲುಪಲಿದೆ ಎಂದರು.

ಮೇವಿನ ಕೊರತೆ ಆಗದಿರಲಿ

ಬರ ಹಿನ್ನಲೆಯಲ್ಲಿ ತಾಲೂಕಿನಾದ್ಯಂತ ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆಯಾಗದಂತೆ ಪಶುಪಾಲನಾ ಮತ್ತು ಕೆಎಂಎಫ್ ಇಲಾಖೆಯಿಂದ ಗುತ್ತಿಗೆಯಾಗಿದ್ದು, ಸುಮಾರು ೨೬೧೮ ಕಿಟ್‌ಗಳನ್ನು ರೈತರಿಗೆ ನೀಡಲಾಗುವುದು. ಇದನ್ನು ಬಳಸಿಕೊಂಡು ಧನಕರುಗಳಿಗೆ ಮೇವು ಕೊರತೆಯಾಗದಂತೆ ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು.

ತಾಪಂ ಇಒ ಮಂಜುನಾಥ ಹರ್ತಿ, ಸಹಾಯಕ ನಿರ್ದೇಶಕ ರಾಜಾರಾಂ, ತೋಟಗಾರಿಕಾ ಇಲಾಖೆ ಸಹಾಯಕ ನಿರ್ದೇಶಕ ಶಿವಾರೆಡ್ಡಿ ಇದ್ದರು.