ಸಾರಾಂಶ
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಡಯಾಲಿಸಿಸ್ ಮಾಡಿಸಿಕೊಳ್ಳಲು ಹೋದವರಿಗೆ ಎಚ್.ಸಿ.ವಿ. ಹರಡುತ್ತಿದ್ದು, ಗಾಯದ ಮೇಲೆ ಬರೆ ಎಂಬಂತಾಗಿದೆ ಇಲ್ಲಿನ ಪರಿಸ್ಥಿತಿ. ಸಕಾಲಕ್ಕೆ ಸೂಕ್ತ ಚಿಕಿತ್ಸೆ ಸಿಗದಿದ್ದಲ್ಲಿ ಸರಣಿ ಸಾವು ಸಂಭವಿಸುವ ಸಾಧ್ಯತೆ ಇದೆ.ಈ ಸ್ಥಿತಿ ನಿರ್ಮಾಣವಾಗಿರುವುದು ಬೆಳ್ತಂಗಡಿ ಸರ್ಕಾರಿ ಆಸ್ಪತ್ರೆಯಲ್ಲಿ.ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ಹೆಪಟೈಟಿಸ್ ಸಿ ವೈರಸ್ ಹರಡುತ್ತಿದ್ದು, ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಕಂಗಾಲಾಗಿದ್ದಾರೆ. ಈ ಬಗ್ಗೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳು ಮಾಜಿ ಶಾಸಕ ವಸಂತ ಬಂಗೇರ ಅವರ ಗಮನಕ್ಕೆ ತಂದಿದ್ದು, ಅವರು ಸೋಮವಾರ ತಾಲೂಕು ಆಸ್ಪತ್ರೆಗೆ ಭೇಟಿ ನೀಡಿದರು.ಈ ವೇಳೆ ಮಾತನಾಡಿದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಮಂದಿ, ಕೇಂದ್ರದಲ್ಲಿ ಯಾವುದೇ ಅಗತ್ಯ ವ್ಯವಸ್ಥೆಗಳು ಇಲ್ಲ. ಎಸಿ, ಫ್ಯಾನ್ ಇತ್ಯಾದಿ ಇತ್ತೀಚೆಗಷ್ಟೇ ದುರಸ್ತಿ ಪಡಿಸಲಾಗಿದೆ. ವಿದ್ಯುತ್ ಸಮಸ್ಯೆ ಸದಾ ಕಾಡುತ್ತಿದೆ. ರಕ್ತ ಪರೀಕ್ಷೆಗೆ ಶುಲ್ಕ ವಿಧಿಸಲಾಗುತ್ತಿದೆ. ಶುಚಿತ್ವವನ್ನು ಕಾಪಾಡದ ಕಾರಣದಿಂದ ಇಲ್ಲಿನ ಅರ್ಧಾಂಶ ರೋಗಿಗಳಿಗೆ ಹೆಪಟೈಟಿಸ್ ಸಿ ವೈರಸ್ ಹರಡಿದ್ದು, ಇದರಿಂದ ನಮಗೆ ಹೆಚ್ಚಿನ ತೊಂದರೆಯಾಗಿದೆ. ಈ ಬಗ್ಗೆ ಸಂಬಂಧಪಟ್ಟವರಿಗೆ ಸಾಕಷ್ಟು ಮನವಿ ಮಾಡಿದ್ದರೂ ಯಾವುದೇ ರೀತಿಯ ಪರಿಹಾರ ಕಂಡುಬಂದಿಲ್ಲ ಎಂದು ದೂರಿದರು.
* ಇಂದು ಡಿಎಚ್‌ಒ ಭೇಟಿವಸಂತ ಬಂಗೇರ ಅವರು ತಕ್ಷಣ ಡಿಎಚ್‌ಒ ಡಾ.ತಿಮ್ಮಯ್ಯ ಅವರಿಗೆ ಕರೆ ಮಾಡಿ ಇಲ್ಲಿನ ಡಯಾಲಿಸಿಸ್ ಕೇಂದ್ರದ ಅವ್ಯವಸ್ಥೆ ಕುರಿತು ವಿವರಿಸಿದರು. ತಾನು ಬೆಂಗಳೂರಿನಲ್ಲಿದ್ದು, ಮಂಗಳವಾರ ಬೆಳಗ್ಗೆ 10.30ಕ್ಕೆ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸುವುದಾಗಿ ಭರವಸೆ ನೀಡಿದರು. ಮನೋಹರ ಇಳಂತಿಲ, ಜಯ ವಿಕ್ರಮ ಕಲ್ಲಾಪು ಉಪಸ್ಥಿತರಿದ್ದರು.
* ಏನಿದು ಎಚ್‌ಸಿವಿ?ಹೆಪಟೈಟಿಸ್ ಸಿ ವೈರಸ್ ರಕ್ತದ ಮೂಲಕ ಹರಡುವ ಸೋಂಕು. ಡಯಾಲಿಸಿಸ್ ವಿಭಾಗದಲ್ಲಿ ಚಿಕಿತ್ಸೆಗೆ ಸಂಬಂಧಪಟ್ಟ ಚುಚ್ಚುಮದ್ದನ್ನು ನೀಡುವ ವೇಳೆ ಶುಚಿತ್ವವನ್ನು ಕಾಪಾಡುವುದು ಅಗತ್ಯ. ಆದರೆ ಬೆಳ್ತಂಗಡಿ ಕೇಂದ್ರದಲ್ಲಿ ಸರಿಯಾದ ಸಲಕರಣೆಗಳಿಲ್ಲದೆ ಇದು ಸಾಧ್ಯವಾಗುತ್ತಿಲ್ಲ. ಈ ಕಾರಣದಿಂದ ರೋಗಿಗೆ ಚುಚ್ಚುಮದ್ದನ್ನು ಯಂತ್ರದ ಮೂಲಕವೇ ನೀಡಲಾಗುತ್ತದೆ. ಈ ವೇಳೆ ಹೆಪಟೈಟಿಸ್ ಸಿ ಸಾಂಕ್ರಾಮಿಕವಾಗಿ ಹರಡುತ್ತದೆ. ಸಣ್ಣ ಗಾಯಗಳಿದ್ದರೂ ರೋಗಿಯ ರಕ್ತಕ್ಕೆ ವೈರಸ್ ತಾಗಿದಾಗ ಇದು ಹರಡುವ ಸಾಧ್ಯತೆ ಇದೆ. ಮೂರು ತಿಂಗಳ ಬಳಿಕ ಇದರ ಪರಿಣಾಮ ಗೊತ್ತಾಗುತ್ತದೆ ಹಾಗೂ ಇದು ನೇರವಾಗಿ ಲಿವರ್‌ಗೆ ತೊಂದರೆ ನೀಡುತ್ತದೆ. ಇದರ ಚಿಕಿತ್ಸೆಗೆ ಸಾವಿರಾರು ರು. ವೆಚ್ಚವೂ ಇದೆ ಹಾಗೂ ಇದು ಪ್ರಾಣಕ್ಕೂ ಅಪಾಯಕಾರಿ. ಇದು ಚಿಕಿತ್ಸೆ ಪಡೆಯುವವರ ಜತೆ ಚಿಕಿತ್ಸೆ ನೀಡುವವರಿಗೂ ಅವರನ್ನು ನೋಡಿಕೊಳ್ಳುವವರಿಗೂ ಹರಡುವ ಸಾಧ್ಯತೆ ಇದೆ ಎಂದು ಹಿರಿಯ ವೈದ್ಯರೊಬ್ಬರು ತಿಳಿಸಿದ್ದಾರೆ.
* ಎಚ್‌ಸಿವಿ ಪರೀಕ್ಷೆ ಮಾಡುತ್ತಿಲ್ಲಎಚ್ಸಿವಿ ಹರಡಿರುವುದು ದೃಢಪಟ್ಟಿದ್ದರೂ ತಾಲೂಕು ಆಸ್ಪತ್ರೆಯಲ್ಲಿ ಇದರ ಪರೀಕ್ಷೆ ಮಾಡುತ್ತಿಲ್ಲ. ನಾವು ಹೊರಗಡೆ ಪರೀಕ್ಷೆ ಮಾಡಿಸುವುದಾಗ ವೈರಸ್ ಹರಡಿರುವುದು ದೃಢಪಟ್ಟಿದೆ. ಇದಕ್ಕೆ ಸಾವಿರಾರು ರುಪಾಯಿ ಖರ್ಚಾಗುತ್ತಿದೆ ಎಂದು ರೋಗಿಗಳು ಅಲವತ್ತು ತೋಡಿಕೊಂಡಿದ್ದಾರೆ.
* ಕಣ್ಣೀರಿಟ್ಟ ಚಿಕಿತ್ಸೆ ಪಡೆಯುವ ರೋಗಿಮಾಜಿ ಶಾಸಕ ವಸಂತ ಬಂಗೇರ ಡಿಎಚ್‌ಒಗೆ ದೂರವಾಣಿ ಕರೆ ಮಾಡಿದ ಸಂದರ್ಭ ಅವರೊಂದಿಗೆ ಮಾತನಾಡಿದ ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವ ಉರುವಾಲಿನ ಅಡೆಂಜ ದಿನೇಶ್ ಶೆಟ್ಟಿ, ನಮ್ಮನ್ನು ಇಂಚಿಂಚಾಗಿ ಕೊಲ್ಲಬೇಡಿ. ಸರಿಯಾದ ಚಿಕಿತ್ಸೆಗೆ ವ್ಯವಸ್ಥೆ ಮಾಡಿ. ಜನಪ್ರತಿನಿಧಿಗಳು ನಮ್ಮ ಸಮಸ್ಯೆ ಬಗ್ಗೆ ಗಂಭೀರ ಕ್ರಮ ಕೈಗೊಳ್ಳುತ್ತಿಲ್ಲ. ಒಂದೋ ನಮಗೆ ಸರಿಯಾದ ಚಿಕಿತ್ಸೆ ನೀಡಿ ಅಥವಾ ದಯಾಮರಣಕ್ಕೆ ವ್ಯವಸ್ಥೆ ಮಾಡಿ ಎಂದು ಕಣ್ಣೀರಿಟ್ಟರು.
---ಜಿಲ್ಲೆಯ ಉಳಿದ ತಾಲೂಕುಗಳ ಡಯಾಲಿಸಿಸ್ ಕೇಂದ್ರಗಳಲ್ಲಿ ಇಂತಹ ಅವ್ಯವಸ್ಥೆಗಳಿಲ್ಲ. ಇದು ಬೆಳ್ತಂಗಡಿಯಲ್ಲಿ ಹಲವು ಕಾಲದಿಂದ ನಡೆಯುತ್ತಿದೆ. ಸರಿಯಾದ ಶೌಚಾಲಯ ವ್ಯವಸ್ಥೆ, ಇನ್‌ವರ್ಟರ್ ಕೂಡ ಇರುವುದಿಲ್ಲ. ಇಲ್ಲಿನ ಸಿಬ್ಬಂದಿ ಇರುವ ವ್ಯವಸ್ಥೆಯಲ್ಲಿ ಶಕ್ತಿಮೀರಿ ಚಿಕಿತ್ಸೆ ನೀಡುತ್ತಿದ್ದಾರೆ. ಆದರೆ ಸರಿಯಾದ ವ್ಯವಸ್ಥೆಗಳಿಲ್ಲದೆ ವೈರಸ್ ಹರಡುವಂತಾಗಿದೆ.
। ಪುರಂದರದಾಸ, ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿರುವವರು, ಪಿಲಿಚಾಮುಂಡಿಕಲ್ಲು, ಗುರುವಾಯನಕೆರೆ.