ಕನ್ನಡಪ್ರಭ ವಾರ್ತೆ ಬೆಂಗಳೂರು

ರಾಜಧಾನಿ ಬೆಂಗಳೂರಿನ ಸಮಸ್ಯೆಗಳಿಗೆ ಹಂತ ಹಂತವಾಗಿ ಪರಿಹಾರ ಕಂಡುಕೊಂಡು 2047ರ ವೇಳೆಗೆ ಎಲ್ಲ ಭಾಗೀದಾರ ಇಲಾಖೆ, ಸಂಸ್ಥೆಗಳ ಸಮನ್ವಯದಲ್ಲಿ ಸಮಗ್ರವಾಗಿ ಅಭಿವೃದ್ಧಿಪಡಿಸಲು ದೀರ್ಘ ಕಾಲದ ‘ವಿಜನ್‌ 47’ ಯೋಜನೆ ರೂಪಿಸುವ ಅಗತ್ಯವಿದೆ ಎಂದು ಬೆಂಗಳೂರಿನ ಇತಿಹಾಸ ಶಿಲ್ಪತಜ್ಞ ನರೇಶ್‌ ನರಸಿಂಹನ್‌ ಪ್ರತಿಪಾದಿಸಿದ್ದಾರೆ.

ಅಂಕಿತ ಪುಸ್ತಕ ಪ್ರಕಾಶನವು ಭಾನುವಾರ ನಗರದ ಜೆ.ಸಿ.ರಸ್ತೆಯ ಕ್ರಾಸ್‌ನ ಜೈನ್‌ ವಿಶ್ವವಿದ್ಯಾಲಯದ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತ ಟಿ.ಜೆ.ಎಸ್‌.ಜಾರ್ಜ್‌ ಅವರ ಇಂಗ್ಲೀಷ್‌ ಮೂಲದ ಆಸ್ಕ್ಯು ಪುಸ್ತಕವನ್ನು ಪ್ರೊ.ಕೆ.ಇ.ರಾಧಾಕೃಷ್ಣ ಅವರು ಕನ್ನಡಕ್ಕೆ ಅನುವಾದಿಸಿರುವ ‘ಆಸ್ಕ್ಯು ಓರೆ ಕೋರೆ’ ಪುಸ್ತಕ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಬೆಂಗಳೂರಿನ ಅಭಿವೃದ್ಧಿಗೆ ‘ವಿಜನ್‌ 47’ ಮಾಡಿಕೊಂಡಿದ್ದಾರೆ. ಆದರೆ, 10 ವರ್ಷಗಳಲ್ಲಿ ಆಮೂಲಾಗ್ರವಾದ ಬದಲಾವಣೆ, ಅಭಿವೃದ್ದಿ ತರಲು ಹೇಗೆ ಸಾಧ್ಯ. ದೇಶಕ್ಕೆ ಸ್ವಾತಂತ್ರ್ಯ ಬಂದು 100 ವರ್ಷ ತುಂಬುವ 2047ರ ವೇಳೆಗೆ ಬೆಂಗಳೂರನ್ನು ಎಲ್ಲ ಭಾಗೀದಾರ ಸಂಸ್ಥೆಗಳ ಸಮನ್ವಯದೊಂದಿಗೆ ಸಮಗ್ರವಾಗಿ ಅಭಿವೃದ್ಧಿಪಡಿಸಲು ದೀರ್ಘ ಕಾಲದ ‘ವಿಷಯನ್‌ 47’ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.

ನಾವು ಯಾವಾಗಲೂ ಪಾಶ್ಚಿಮಾತ್ಯ ಬರಗಾರರ ಕಡೆ ನೋಡುತ್ತೇವೆ. ಭಾರತೀಯ ಬರಹಗಾರರನ್ನೂ ಓದಬಹುದು. ಆದರೆ, ದಕ್ಷಿಣ ಏಷ್ಯಾದ ಸಾಹಿತ್ಯ ಹೇಗಿರುತ್ತದೆ ಎಂದು ತೋರಿಸಿಕೊಟ್ಟಿವರು ಟಿ.ಜೆ.ಎಸ್‌.ಜಾರ್ಜ್‌. ನಾನು ಹಾಂಕಾಂಗ್‌ನಲ್ಲಿದ್ದಾಗ ನನಗೆ ಒಂದಷ್ಟು ಪುಸ್ತಕಗಳನ್ನು ನೀಡಿ ಇದರ ಬಗ್ಗೆ ಆಸಕ್ತಿ ಬೆಳೆಸಿದರು. ಬೆಂಗಳೂರನ್ನು ವೇಗವಾಗಿ ಬೆಳೆಸುತ್ತಾ ಹೋಗುವುದಕ್ಕಿಂತ ಜನಜೀವನಕ್ಕೆ ಎಷ್ಟು ಯೋಗ್ಯ, ಸುರಕ್ಷಿತ ಎನ್ನುವುದು ಮುಖ್ಯವಾಗಬೇಕು. ಬೆಂಗಳೂರು ತನ್ನದೇ ಆದ ಯಶಸ್ಸಿನಿಂದ ತಾನು ಸಮಸ್ಯೆಗಳಿಂದ ತೊಳಲಾಡುತ್ತಿದೆ. ತನ್ನ ಅಭಿವೃದ್ಧಿಯಿಂದಲೇ ತಾವು ಸಂತ್ರಸ್ತವಾಗಿದೆ ಅಂತ ಟಿ.ಜೆ.ಎಸ್‌.ಜಾರ್ಜ್‌ ಅವರು ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ. 10 ವರ್ಷದ ಹಿಂದೆ ಅವರು ಬರೆದಿರುವುದು ಇಂದಿಗೂ ಪ್ರಸ್ತುತವಾಗಿದೆ. ನಗರದ ಜನರು ಮಾಲಿನ್ಯ, ಸಂಚಾರ ದಟ್ಟಣೆಯಂತಹ ಸಮಸ್ಯೆಗಳನ್ನು ಎದುರಿಸುವಂತಾಗಿದೆ ಎಂದರು.


ರಾಜಕಾಲುವೆಗಳು ತೀವ್ರವಾಗಿ ಹಾಳಾಗಿವೆ. ಕೆರೆಗಳಂತೆ ನಗರದ ರಾಜಕಾಲುವೆಗಳೂ ನಗರದ ಅಂತರ್ಜಲ ಮರುಪೂರ್ಣದ ಮೂಲಗಳು ಎನ್ನುವುದುನ್ನು ಮರೆತು ಹಾಳು ಮಾಡಿದ್ದೇವೆ. ನಗರದ ಡಬಲ್‌ ರಸ್ತೆಯ ರಾಜಕಾಲುವೆ ಮೇಲೆ ದೊಡ್ಡ ಪಾರ್ಕ್‌ ಮಾಡಿದ್ದೇವೆ. ಅಲ್ಲಿಂದ ಕೋರಮಂಗಲದವರೆಗೂ ಕಾಲುವೆಯೊಳಗೆ ಜನರು ನಡೆದೇ ಹೋಗಬಹುದು. ಯಾವ ವಾಹನ, ಸಂಚಾರ ದಟ್ಟಣೆಯ ಕಿರಿ ಕಿರಿ ಇಲ್ಲ. ಅದೇ ರೀತಿ ಎಲ್ಲ ಕಾಲುವೆಗಳನ್ನು ಪುನರ್‌ನವೀಕರಿಸಬೇಕು ಎಂದರು.

ಮಾಜಿ ಸಚಿವ, ಶಾಸಕ ಎಸ್‌.ಸುರೇಶ್‌ ಕುಮಾರ್‌ ಮಾತನಾಡಿ, ವೃತ್ತಿಯಲ್ಲಿ ಪ್ರಾಧ್ಯಾಪಕ ಪ್ರೊ.ಕೆ.ಇ.ರಾಧಾಕೃಷ್ಣ ಅವರು ಪುಸ್ತಕ ಬರವಣಿಗೆ ಸೇರಿದಂತೆ ಬೇರೆ ಬೇರೆ ಪ್ರವೃತ್ತಿಗಳನ್ನು ರೂಢಿಸಿಕೊಂಡಿರುವುದು ಉತ್ತಮ ಬೆಳವಣಿಗೆ. ಇದು ಅವರ 51ನೇ ಪುಸ್ತಕ. ಇದರಲ್ಲಿ ಟಿ.ಜೆ.ಎಸ್‌.ಜಾರ್ಜ್‌ ಅವರು ಕಂಡ ಬೆಂಗಳೂರನ್ನು ರಾಧಾಕೃಷ್ಣ ಅವರು ನಮಗೆ ಪರಿಚಯ ಮಾಡಿಸಿದ್ದಾರೆ. ನಗರಗಳಿಗೂ ಮೌಲ್ಯ ಇರುತ್ತದೆ, ಆದರೆ, ಇವತ್ತು ಆ ಮೌಲ್ಯಗಳು ಕಳೆದುಹೋಗುತ್ತಿವೆ ಎನ್ನುವ ಅಂಶ ಈ ಪುಸ್ತಕದಿಂದ ತಿಳಿದುಬರುತ್ತದೆ ಎಂದರು.

ವಿಶ್ರಾಂತ ನ್ಯಾ.ಎ.ವಿ.ಚಂದ್ರಶೇಖರ್‌ ಅವರು ಪುಸ್ತಕ ಬಿಡುಗಡೆ ಮಾಡಿದರು. ಸುಂದರ್‌ ಶಿವರಾಮ್‌, ಸುಂದರರಾಜ್‌, ಟಿ.ಜೆ.ಎಸ್‌.ಜಾರ್ಜ್‌ ಅವರ ಮೊಮ್ಮಗಳು ಶೀಬಾ, ಪುಸ್ತಕದ ಅನುವಾದಕ ಪ್ರೊ. ಕೆ.ಇ.ರಾಧಾಕೃಷ್ಣ ಹಾಜರಿದ್ದರು.