ವಿವೇಕಾನಂದರು ಪ್ರಭಾವಶಾಲಿ ತತ್ವಜ್ಞಾನಿ

| Published : Jan 13 2024, 01:33 AM IST

ಸಾರಾಂಶ

ಇಂದಿನ ಯುವ ಪೀಳಿಗೆಗೆ ಮಾದರಿ. ಅವರ ದೇಶಭಕ್ತಿ, ಚಿಂತನೆ, ಮಾನವೀಯ ಮೌಲ್ಯಗಳನ್ನು ಇಂದಿನ ಯುವ ಜನಾಂಗ ನಿತ್ಯ ಜೀವನದಲ್ಲಿ ಆಳವಡಿಸಿಕೊಳ್ಳಬೇಕು

ಕನ್ನಡಪ್ರಭ ವಾರ್ತೆ ಇಂಡಿ

ಭಾರತದ ಅತ್ಯಂತ ಪ್ರಸಿದ್ಧ ಮತ್ತು ಪ್ರಭಾವಶಾಲಿ ತತ್ವಜ್ಞಾನಿಗಳಲ್ಲಿ ಸ್ವಾಮಿ ವಿವೇಕಾನಂದರು ಒಬ್ಬರು. ನಿರ್ಭಯತೆ, ಆಶಾವಾದ ಮತ್ತು ಸಾಮಾಜಿಕ ಸಮಸ್ಯೆಗಳ ಬಗೆಗಿನ ವಿಶಾಲ ದೃಷ್ಟಿಯ ಸಂಕೇತವಾಗಿ ವಿವೇಕಾನಂದರು ಪರಿಗಣಿತರಾಗಿದ್ದಾರೆ. ಭಾರತ ದೇಶದ ಸಂಸ್ಕೃತಿ, ಪರಂಪರೆ ವಿಶ್ವ ಮಟ್ಟದಲ್ಲಿ ಬೆಳಗಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ ಎಂದು ತಹಸೀಲ್ದಾರ ಬಿ.ಎಸ್.ಕಡಕಬಾವಿ ಹೇಳಿದರು.

ಅವರು ಶುಕ್ರವಾರ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ ಸ್ವಾಮಿ ವಿವೇಕಾನಂದ ಯುವಶಕ್ತಿ ಸಂಘದ ಪದಾಧಿಕಾರಿಗಳು ಹಮ್ಮಿಕೊಂಡ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ವಿವೇಕಾನಂದ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ಅಮೆರಿಕದ ಚಿಕ್ಯಾಗೊದಲ್ಲಿ ನಡೆದ ವಿಶ್ವಸರ್ವಧರ್ಮ ಸಮ್ಮೇಳನದಲ್ಲಿ ವಿವೇಕಾನಂದರು ಮಾಡಿದ ಭಾಷಣ ಹುಬ್ಬೆರಿಸುವಂತೆ ಮಾಡಿತು. ವಿಶ್ವದ ಇತರ ದೇಶಗಳು ಭಾರತ ಎಂದಾಕ್ಷಣ ಆಧ್ಯಾತ್ಮಿಕ ತವರು ಎಂದು ಗುರುತಿಸಿದ ಶ್ರೇಷ್ಠ ತತ್ವಜ್ಞಾನಿ ವಿವೇಕಾನಂದರು. ಅವರು ಸರಳ ಬದುಕು, ಉತ್ಕೃಷ್ಠ ವಿಚಾರ, ವಿಶ್ವಭ್ರಾತೃತ್ವ ಮೈಗೂಡಿಸಿಕೊಂಡಿದ್ದರು ಎಂದು ಹೇಳಿದರು.

ಸಿದ್ದಸಿರಿ ಬ್ಯಾಂಕಿನ ನಿರ್ದೇಶಕ ಜಗದೀಶ ಕ್ಷತ್ರಿ ಮಾತನಾಡಿ, ಅಪಾರ ಜ್ಞಾನ ಶಕ್ತಿ ಹೊಂದಿದ ವಿವೇಕಾನಂದರು ಇಂದಿನ ಯುವ ಪೀಳಿಗೆಗೆ ಮಾದರಿ. ಅವರ ದೇಶಭಕ್ತಿ, ಚಿಂತನೆ, ಮಾನವೀಯ ಮೌಲ್ಯಗಳನ್ನು ಇಂದಿನ ಯುವ ಜನಾಂಗ ನಿತ್ಯ ಜೀವನದಲ್ಲಿ ಆಳವಡಿಸಿಕೊಳ್ಳಬೇಕು ಎಂದು ಹೇಳಿದರು.

ಸಂಘದ ಅಧ್ಯಕ್ಷ ರಾಮಸಿಂಗ ಕನ್ನೂಳ್ಳಿ, ಅವಿನಾಶ ಬಗಲಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖಂಡ ಸತೀಶ ಕುಂಬಾರ, ಶ್ರೀಕಾಂತ ಕುಡಿಗನೂರ, ವೆಂಕಟೇಶ ಕುಲಕರ್ಣಿ, ಮಲ್ಲಿಕಾರ್ಜುನ ಹತ್ತಿ, ಅರವಿಂದ ಪಾಟೀಲ, ಚಂದು ದೇವರ, ನಾಗರಾಜ ದಶವಂತ, ಆನಂದ ದೇವರ, ಬಾಳು ಮುಳಜಿ, ಪ್ರಕಾಶ ಬಿರಾದಾರ, ಸಂತೋಷ ಪಾಟೀಲ ಮೊದಲಾದವರು ಇದ್ದರು.