ಮುಂದಿನ ಪೀಳಿಗೆಗಾಗಿ ನೀರಿನ ಸಂರಕ್ಷಣೆ ಎಲ್ಲರ ಹೊಣೆ

| Published : Mar 24 2024, 01:44 AM IST

ಸಾರಾಂಶ

ಮನುಷ್ಯನ ದುರಾಸೆಗಾಗಿ ಕಾಡುಗಳು ಮಾಯವಾಗಿ ನಾಡೆಲ್ಲ ಕಾಂಕ್ರಿಟ್‌ಮಯವಾಗುತ್ತಿರುವುದರಿಂದ ಜೀವ ಜಲಕ್ಕೆ ಹಾಹಾಕಾರ ಎದ್ದಿದೆ. ಮನುಷ್ಯನ ಮುರ್ಖತನದಿಂದ ಕಾಡುಗಳು ಬರಿದಾಗಿ, ಕೆರೆ ಕಟ್ಟೆಗಳು ಮಾಯವಾಗಿ ಕುಡಿಯಲು ನೀರು ಲಭ್ಯವಿಲ್ಲದ ಪರಿಸ್ಥಿತಿ ಒದಗಿ ಬಂದಿದೆ

ಕನ್ನಡಪ್ರಭ ವಾರ್ತೆ ಕೆಜಿಎಫ್

ನೀರು ಜೀವ ಸೆಲೆಯಾಗಿದ್ದು ಒಂದೊಂದು ಹನಿಯೂ ಸಹ ಅಮೃತವಿದ್ದಂತೆ, ಹಾಗಾಗಿ ನೀರನ್ನು ಮಿತವಾಗಿ ಬಳಸುವ ಮೂಲಕ ಮುಂದಿನ ಪೀಳಿಗೆಗೆ ಸಂರಕ್ಷಿಸಿಕೊಂಡು ಹೋಗಬೇಕಾದುದು ಎಲ್ಲರ ಕರ್ತವ್ಯ ಎಂದು ೩ನೇ ಅಪರ ಜಿಲ್ಲಾ ಸತ್ರ ನ್ಯಾಯಾಧೀಶ ಗಣಪತಿ ಗುರುಸಿದ್ದ ಬಾದಾಮಿ ಹೇಳಿದರು.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಮತ್ತು ವಕೀಲರ ಸಂಘದಿಂದ ನಗರದ ಸಂತ ತೆರೆಸಾ ಮಹಿಳಾ ಕಾಲೇಜಿನಲ್ಲಿ ವಿಶ್ವ ಜಲ ದಿನ ಕಾರ್ಯಕ್ರಮದಲ್ಲಿ ಮಾತನಾಡಿದರು.

ನೀರಿಗೆ ಹಾಹಾಕಾರ

ಮನುಷ್ಯನ ದುರಾಸೆಗಾಗಿ ಕಾಡುಗಳು ಮಾಯವಾಗಿ ನಾಡೆಲ್ಲ ಕಾಂಕ್ರಿಟ್‌ಮಯವಾಗುತ್ತಿರುವುದರಿಂದ ಜೀವ ಜಲಕ್ಕೆ ಹಾಹಾಕಾರ ಎದ್ದಿದೆ. ಮನುಷ್ಯನ ಮುರ್ಖತನದಿಂದ ಕಾಡುಗಳು ಬರಿದಾಗಿ, ಕೆರೆ ಕಟ್ಟೆಗಳು ಮಾಯವಾಗಿ ಕುಡಿಯಲು ನೀರು ಲಭ್ಯವಿಲ್ಲದ ಪರಿಸ್ಥಿತಿ ಒದಗಿ ಬಂದಿದೆ. ನಮ್ಮ ಭೂಮಿಯಲ್ಲಿ ಕುಡಿಯಲು ಯೋಗ್ಯವಾದ ನೀರು ಒಂದು ಭಾಗ ಮಾತ್ರ ಲಭ್ಯವಿದೆ. ಆದ್ದರಿಂದ ಆದಷ್ಟು ನೀರನ್ನು ಅಗತ್ಯವಿದ್ದಷ್ಟು ಮಾತ್ರ ಬಳಕೆ ಮಾಡಬೇಕೆಂದರು. ನೀರು ಅಮೃತಕ್ಕೆ ಸಮಾನ

ನ್ಯಾಯಾಧೀಶರಾದ ಮುಜಫರ್ ಮಾಂಜರಿ ಮಾತನಾಡಿ, ಕುಡಿಯುವ ನೀರು ಅಮೃತಕ್ಕೆ ಸಮಾನವಾಗಿದ್ದು, ದಿನನಿತ್ಯದ ಬದುಕಿಗೆ ಅತ್ಯಗತ್ಯವಾಗಿದೆ, ಮನುಷ್ಯನ ಜೀವನದ ಪ್ರತಿಯೊಂದು ಹಂತದಲ್ಲೂ ಕುಡಿಯುವುದರಿಂದ ಹಿಡಿದು ದಿನ ನಿತ್ಯದ ಕೆಲಸ ಕಾರ್ಯಗಳಿಗೆ ಎಲ್ಲಡೆ ನೀರಿನ ಅಗತ್ಯವಿರುತ್ತದೆ. ಹಾಗಾಗಿ ನೀರು ಇಲ್ಲದೆ ಬದುಕುವುದನ್ನು ಉಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ನ್ಯಾಯಾಧೀಶರಾದ ಮಂಜುನಾಥ್ ಮಾತನಾಡಿ, ಸಕಲ ಜೀವರಾಶಿಗಳಿಗೆ ಆಹಾರ, ಗಾಳಿ ಎಷ್ಟು ಮುಖ್ಯವೋ ನೀರು ಕೂಡ ಅಷ್ಟೇ ಮುಖ್ಯವಾಗಿದ್ದು, ನೀರು ಇಲ್ಲದಿದ್ದರೆ ಬದುಕಲು ಸಾಧ್ಯವಿಲ್ಲ. ಕಾಡಿನ ಮಾರಣ ಹೋಮದಿಂದಾಗಿ ಸರಿಯಾದ ಸಮಯಕ್ಕೆ ಮಳೆ ಬಾರದೆ ಹಳ್ಳಕೊಳ್ಳ ಸೇರಿದಂತೆ ನೀರಿನ ಮೂಲಗಳು ಬತ್ತಿ ಹೋಗಿವೆ ಎಂದರು.

ನೀರಿನ ಮೂಲ ರಕ್ಷಿಸಬೇಕು

ಸಂಪನ್ಮೂಲ ವ್ಯಕ್ತಿ ಕೃಷ್ಣಪ್ಪ ಮಾತನಾಡಿ, ವಿಶ್ವ ಜಲ ದಿನವನ್ನು ಆಚರಿಸುವುದರ ಹಿಂದಿನ ಉದ್ದೇಶವೇನೆಂದರೆ ಸಿಹಿ ನೀರಿನ ಮೂಲಗಳನ್ನು ಕಾಪಾಡುವ ಮತ್ತು ಮುಂದಿನ ಪೀಳಿಗಾಗಿ ನೀರನ್ನು ಒದಗಿಸುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ಉದ್ದೇಶದಿಂದ ವಿಶ್ವ ಜಲ ದಿನ ದಿನಾಚರಣೆ ಆಚರಿಸಿಕೊಂಡು ಬರಲಾಗುತ್ತಿದೆ ಎಂದರು.

ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲಗೌಡ, ಉಪಾಧ್ಯಕ್ಷ ಮಣಿವಣ್ಣನ್, ನಗರ ನೀರು ಸರಬರಾಜು ಮತ್ತು ಒಳಚರಂಡಿ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ಚಂದ್ರಶೇಖರ್, ಎಇಇ ಶಿವಕುಮಾರ ಇದ್ದರು.