ಸಾರಾಂಶ
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ, ಗೆಳತಿ ಸಮಾಗಮ ಕಾರ್ಯಕ್ರಮದಲ್ಲಿ ವೆಂಕಟೇಶ್ ಅಭಿಮತ
ಕನ್ನಡಪ್ರಭ ವಾರ್ತೆ ಚಿತ್ರದುರ್ಗ
ಹೆಣ್ಣು ಮಕ್ಕಳು ಕೀಳರಿಮೆಯನ್ನು ಬಿಟ್ಟು ತಮ್ಮಲ್ಲಿರುವ ಶಕ್ತಿ ಸಾಮರ್ಥ್ಯವನ್ನು ಅರಿತಾಗ ಸ್ವಾವಲಂಭಿಯಾಗಿಬದುಕಬಹುದು ಎಂದು ಬಜ್ ಇಂಡಿಯಾ ಟ್ರಸ್ಟ್, ಬಬ್-ವಿಮೆನ್ ಕಾರ್ಯಕ್ರಮ ವ್ಯವಸ್ಥಾಪಕ ಬೆಂಗಳೂರಿನ ಜಿ.ಎಸ್.ವೆಂಕಟೇಶ್ ಕರೆ ನೀಡಿದರು.
ನಗರದ ತರಾಸು ರಂಗಮಂದಿರದಲ್ಲಿ ಗುರುವಾರ ಬಜ್ ಇಂಡಿಯಾ ಟ್ರಸ್ಟ್, ಬಜ್-ವಿಮೆನ್ ಚಿತ್ರದುರ್ಗ ಸಹಯೋಗದೊಂದಿಗೆ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಗೆಳತಿ ಸಮಾಗಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಹಳ್ಳಿ ಹಳ್ಳಿಗೆ ಹೋಗಿ ಹೆಣ್ಣು ಮಕ್ಕಳನ್ನು ಒಂದು ಕಡೆ ಸೇರಿಸಿ ತರಬೇತಿ ಕೊಡುವುದು ಕಷ್ಟದ ಕೆಲಸ. ರಾಜ್ಯದ ಹದಿಮೂರು ಜಿಲ್ಲೆಗಳಲ್ಲಿ 6.5 ಲಕ್ಷ ಮಹಿಳೆಯರಿಗೆ ತರಬೇತಿ ನೀಡಲಾಗಿದೆ. 2012 ರಿಂದ ಇಲ್ಲಿಯವರೆಗೂ ನಮ್ಮ ಸಂಸ್ಥೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು, ಸಿಡಿಪಿಗಳು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು ಸಹಕಾರ ನೀಡುತ್ತ ಬರುತ್ತಿದ್ದಾರೆ. ಅಡುಗೆ ಮನೆಗಷ್ಟೆ ಮಹಿಳೆಯರು ಸೀಮಿತ ಎನ್ನುವ ತಪ್ಪು ಕಲ್ಪನೆ ಬೇಡ. ನಮ್ಮ ಸಂಸ್ಥೆಯಿಂದ ಸ್ಫೂರ್ತಿ ತರಬೇತಿ ನೀಡಿರುವುದರಿಂದ ಸಣ್ಣ ಪುಟ್ಟ ವ್ಯಾಪಾರಗಳನ್ನು ಮಾಡುವುದರ ಜೊತೆ ಹಣ ಉಳಿತಾಯ ಮಾಡುವ ಜಾಗೃತಿ ಮೂಡಿದೆ ಎಂದು ಹೇಳಿದರು.
ನಮ್ಮದು ಹಣ ಕೊಡುವ ಸಂಸ್ಥೆಯಲ್ಲ. ಸ್ವಾವಲಂಭಿಗಳಾಗಿ ಬದುಕುವ ಜ್ಞಾನ ನೀಡುತ್ತೇವೆ. 18 ಸಾವಿರ ಹಳ್ಳಿಗಳಿಂದ 15 ಸಾವಿರ ಹೆಣ್ಣು ಮಕ್ಕಳು ಸ್ವಯಂ ಸೇವಕಿಯರಾಗಿ ಕೆಲಸ ಮಾಡುತ್ತಿದ್ದಾರೆ. ಹಳ್ಳಿಗಳಲ್ಲಿ ಜೇನುಗೂಡು ಸಭೆಗಳನ್ನು ನಡೆಸುವಷ್ಟರ ಮಟ್ಟಿಗೆ ಮಹಿಳೆಯರು ಬುದ್ಧಿವಂತರಾಗಿದ್ದಾರೆ. ಕಲುಷಿತ ಆಹಾರ ಸೇವನೆಯಿಂದ ಪ್ರತಿಯೊಬ್ಬರು ರಕ್ತದೊತ್ತಡ, ಸಕ್ಕರೆ ಕಾಯಿಲೆಯಿಂದ ಹೃದಯಾಘಾತಕ್ಕೆ ಬಲಿಯಾಗುವುದು ಸರ್ವೆ ಸಾಮಾನ್ಯವಾಗಿದೆ. 2 ವರ್ಷಗಳಿಂದ ಸಂಸ್ಥೆಗೆ ಶಕ್ತಿ ಫಂಡ್ ನೀಡಲು ಸಿದ್ದರಾಗಿದ್ದೀರಿ. ಈ ಹಣ ಬಳಸಿಕೊಂಡು ಹೊಸ ಜಿಲ್ಲೆಗಳಲ್ಲಿ ಮಹಿಳೆಯರಿಗೆ ತರಬೇತಿ ನೀಡುತ್ತಿದ್ದೇವೆ. ಕೆಲವು ಹೊರ ದೇಶಗಳಲ್ಲಿಯೂ ಬಜ್ ಇಂಡಿಯಾ ಸಂಸ್ಥೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿದೆ ಎಂದರು.ಮಳೆ ನೀರು ಕೊಯ್ಲು ತಜ್ಞ ಎನ್.ಜೆ.ದೇವರಾಜರೆಡ್ಡಿ ಮಾತನಾಡಿ, ಬಜ್ ಇಂಡಿಯಾ ಸಂಸ್ಥೆ ಚಿತ್ರದುರ್ಗ ಜಿಲ್ಲೆಯಲ್ಲಿ ಇಷ್ಟೊಂದು ಮಹಿಳಾ ಪಡೆಯನ್ನು ಕಟ್ಟಿರುವುದು ಸುಲಭದ ಕೆಲಸವಲ್ಲ. ಮಾ.22 ವಿಶ್ವ ಜಲ ದಿನಾಚರಣೆ ಆಚರಿಸುತ್ತಿರುವುದರಿಂದ ಮಹಿಳೆಯರು ನೀರಿನ ಮಹತ್ವ ಅರಿಯಬೇಕು. ನೀರು ಮತ್ತು ನಾರಿಯರಿಗೆ ಸಾವಿರಾರು ವರ್ಷಗಳ ಅವಿನಾಭಾವ ಸಂಬಂಧವಿದೆ ಎಂದು ಹೇಳಿದರು.
ಮಳೆ ನೀರು ವ್ಯರ್ಥವಾಗಿ ಹರಿದು ಹೋಗಲು ಬಿಡದೆ ಹೇಗೆ ಸಂಗ್ರಹಿಸಿ ಮಿತವಾಗಿ ಬಳಸಬೇಕು ಎನ್ನುವುದರ ಕುರಿತು ಮಹಿಳೆಯರಲ್ಲಿ ಅರಿವಿರಬೇಕು. ಇತ್ತೀಚಿನ ದಿನಗಳಲ್ಲಿ ಎಲ್ಲಾ ನೀರು ಕಲುಷಿತಗೊಂಡಿರುವುದರಿಂದ ಸದ್ಯದ ಪರಿಸ್ಥಿತಿಯಲ್ಲಿ ಪರಿಶುದ್ಧವಾದ ನೀರು ಯಾವುದಾದರೂ ಇದ್ದರೆ ಅದು ಮಳೆ ನೀರು ಮಾತ್ರ. ಮಳೆ ನೀರು ಕೊಯ್ಲಿಗೆ ಹೆಚ್ಚಿನ ಒತ್ತು ಕೊಟ್ಟು ಅಡುಗೆಗೆ ಬಳಸಿದರೆ ಆರೋಗ್ಯದ ಮೇಲೆ ಒಳ್ಳೆಯ ಪರಿಣಾಮ ಬೀರುತ್ತದೆ. ಮನೆಯ ಛಾವಣಿ ಮೇಲೆ ಬೀಳುವ ಮಳೆ ನೀರನ್ನು ಸಂಗ್ರಹಿಸಿಟ್ಟುಕೊಂಡರೆ ಒಳ್ಳೆಯದು ಎಂದು ತಿಳಿಸಿದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಎಸಿಡಿಪಿಒ ಮಂಜುಳ ಮಾತನಾಡಿ, ಮಹಿಳೆಯರನ್ನು ಆರ್ಥಿಕವಾಗಿ
ಸಬಲೀಕರಣಗೊಳಿಸುವುದು ಮುಖ್ಯ. ಸ್ತ್ರೀಶಕ್ತಿ ಗುಂಪುಗಳನ್ನು ರಚಿಸುವುದು ಸುಲಭವಲ್ಲ. ಸ್ವ-ಉದ್ಯೋಗದ ಮೂಲಕ ದುಡಿಮೆಯ ದಾರಿ ಕಂಡುಕೊಂಡು ಸ್ವಾವಲಂಭಿಗಳಾಗಿ ಬದುಕಲು ಬಜ್ ಇಂಡಿಯಾ ಸಂಸ್ಥೆ ಶ್ರಮಿಸುತ್ತಿದೆ. ಇದರ ಜೊತೆ ನಮ್ಮ ಇಲಾಖೆ ಕೂಡ ಕೈಜೋಡಿಸುತ್ತಿದೆ ಎಂದು ಹೇಳಿದರು.ಎನ್‌ಆರ್‌ಎಂಎಲ್‌ನ ಯೋಗೇಶ್, ಸಾಹಿತಿ ಶರಿಫಾಬಿ, ಬಸವೇಶ್ವರ ವಿದ್ಯಾಸಂಸ್ಥೆಯ ಅಧ್ಯಕ್ಷೆ ಪ್ರಭಾವತಿ ಶಂಕರಪ್ಪ
ವೇದಿಕೆಯಲ್ಲಿದ್ದರು.