ಜಗತ್ತಿನ ಎಲ್ಲ ಮಹಾನ್ ಸಾಧಕರು ಸಮಯಕ್ಕೆ ಮತ್ತು ಕರ್ತವ್ಯ ನಿಷ್ಠೆಗೆ ಬೆಲೆ ಕೊಟ್ಟಿದ್ದರಿಂದ ಅವರ ಆದರ್ಶಗಳು ಎಂದೆಂದೂ ಅಮರವಾಗಿವೆ.

ಕನ್ನಡಪ್ರಭ ವಾರ್ತೆ, ತುಮಕೂರು

ಆಧುನಿಕ ಕಾಲದಲ್ಲಿ ಮಾಧ್ಯಮಗಳ ಹಾವಳಿ, ಮೊಬೈಲ್ ಅತಿ ಬಳಕೆಯಿಂದ ಯುವಜನತೆ ದಾರಿ ತಪ್ಪುತ್ತಿದ್ದು ಆತಂಕಕ್ಕೀಡುಮಾಡುತ್ತಿದೆ ಎಂದು ಡಾ. ಸೋಮಶೇಖರಯ್ಯ ಅಭಿಪ್ರಾಯಪಟ್ಟರು.ತುಮಕೂರು ಜಿಲ್ಲಾ ಮತ್ತು ತಾಲೂಕು ಶರಣ ಸಾಹಿತ್ಯ ಪರಿಷತ್ತಿನ ವತಿಯಿಂದ ನಗರದ ಗುರುಕುಲ ವಿದ್ಯಾರ್ಥಿ ನಿಲಯದಲ್ಲಿ ನಡೆದ ಲಿಂ. ಸಿದ್ಧವೀರಮ್ಮ, ನಂಜಣ್ಣ ಬಸವರಾಜಪ್ಪ ದತ್ತಿಯಲ್ಲಿ `ಯುವ ಜಗತ್ತಿಗೆ ವಚನಗಳ ಸಂದೇಶ ವಿಷಯವಾಗಿ ಮಾತನಾಡುತ್ತಾ, ಕನ್ನಡ ಸಾಹಿತ್ಯದಲ್ಲಿ ಕವಿಗಳು, ಶರಣರು, ದಾಸರು, ಸಾಧುಸಂತರು, ಮಹಾತ್ಮರ ದಿವ್ಯ ಸಂದೇಶಗಳನ್ನು ಯುವ ಜನಾಂಗಕ್ಕೆ ತಿಳಿಸುವ ಕಾರ್ಯ ಆದಾಗ ಯುವಕರು ದಾರಿ ತಪ್ಪುವುದಿಲ್ಲ. ಒಳ್ಳೆ ಪ್ರಜೆಗಳಾಗಿ ದೇಶವನ್ನು ಕಟ್ಟುತ್ತಾರೆ ಎಂದು ಹೇಳಿದರು.

ಕಾರ್ಯಕ್ರಮ ಉದ್ಘಾಟಿಸಿದ ಗುರುಕುಲ ವಿದ್ಯಾರ್ಥಿ ನಿಲಯದ ಕಾರ್ಯದರ್ಶಿ ಮಲ್ಲಿಕಾರ್ಜುನಯ್ಯ, ಶರಣರ ವಚನಗಳು 900 ವರ್ಷಗಳಾದರೂ ದಾರಿದೀಪವಾಗಿವೆ ಎಂದರು.

ಮುಖ್ಯ ಅತಿಥಿ ಕದಳಿ ಮಹಿಳಾ ವೇದಿಕೆ ಅಧ್ಯಕ್ಷರಾದ ಶಿವಲಿಂಗಮ್ಮ, ವಚನ ಯುಗ ನಮ್ಮ ನಾಡಿನ ಶರಣ ಯುಗವೆಂದು ವಚನಗಳನ್ನು ದೃಷ್ಟಾಂತವಾಗಿ ವಿವರಿಸಿದರು.

ಅಧ್ಯಕ್ಷತೆ ವಹಿಸಿದ್ದ ಗಮಕ ಕಲಾಶ್ರೀ ವಿದ್ವಾನ್ ಎಂ.ಜಿ.ಸಿದ್ಧರಾಮಯ್ಯ ಮಾತನಾಡುತ್ತಾ ಜಗತ್ತಿನ ಎಲ್ಲ ಮಹಾನ್ ಸಾಧಕರು ಸಮಯಕ್ಕೆ ಮತ್ತು ಕರ್ತವ್ಯ ನಿಷ್ಠೆಗೆ ಬೆಲೆ ಕೊಟ್ಟಿದ್ದರಿಂದ ಅವರ ಆದರ್ಶಗಳು ಎಂದೆಂದೂ ಅಮರವಾಗಿವೆ ಎಂದರು. ನಡೆದಾಡುವ ದೇವರೇ ಆಗಿದ್ದ ಡಾ. ಶಿವಕುಮಾರ ಮಹಾಸ್ವಾಮೀಜಿಯವರು 111 ವರ್ಷಗಳು ಬದುಕಿದ್ದು, ಅವರು ಎಲ್ಲರಿಗೂ ಆದರ್ಶವೆಂದರು.

ಮಿಮಿಕ್ರಿ ಈಶ್ವರಯ್ಯ, ರುದ್ರಮೂರ್ತಿ ಎಲೆರಾಂಪುರ ಹಾಗೂ ನಿಲಯದ ವಿದ್ಯಾರ್ಥಿಗಳು ವಚನ ಗಾಯನ ನಡೆಸಿಕೊಟ್ಟರು. ಪ್ರಾಸ್ತಾವಿಕವಾಗಿ ರಾಜಶೇಖರಯ್ಯ ಈಚನೂರು ಮಾತನಾಡಿದರು. ಮಿಮಿಕ್ರಿ ಈಶ್ವರಯ್ಯ ನಿರೂಪಿಸಿ, ವಂದಿಸಿದರು. ಬೆಣಚಿಗೆರೆ ರಾಜಶೇಖರಯ್ಯ ಸ್ವಾಗತಿಸಿದರು.

ವೇದಿಕೆಯಲ್ಲಿ ಪಂಚಾಕ್ಷರಯ್ಯ, ಗುರುಮಲ್ಲಪ್ಪ, ಭವಾನಮ್ಮ, ರಾಜಶೇಖರಯ್ಯ, ಎಂ.ಜಿ.ಸಿದ್ಧರಾಮಯ್ಯ, ಮಲ್ಲಿಕಾರ್ಜುನಯ್ಯ, ಉಮಾಪತಿ, ಮಂಜಣ್ಣ, ಬಿ.ರಾಜಶೇಖರಯ್ಯ ಹಾಗೂ ಇತರರು ಉಪಸ್ಥಿತರಿದ್ದರು. ಡಾ. ಸೋಮಶೇಖರಯ್ಯ ಅವರನ್ನು ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ವತಿಯಿಂದ ಸನ್ಮಾನಿಸಲಾಯಿತು. ನಂತರ ಪ್ರಸಾದ ವಿನಿಯೋಗವಾಯಿತು.