ಸಾರಾಂಶ
ಮಂಡ್ಯ ಮಂಜುನಾಥ
ಕನ್ನಡಪ್ರಭ ವಾರ್ತೆ ಮಂಡ್ಯಗ್ರಾಮ ಪಂಚಾಯ್ತಿ ವ್ಯಾಪ್ತಿಯ ಗ್ರಾಮಗಳ ಗ್ರಾಮಠಾಣಾ ಗಡಿ ವಿಸ್ತರಣೆ, ಪುನರ್ ನಿಗದಿಯಲ್ಲಿ ಕಂದಾಯ ಇಲಾಖೆ ಶೂನ್ಯ ಸಾಧನೆ ಮಾಡಿದೆ. ಸರ್ಕಾರ ಆದೇಶ ಮಾಡಿ ಏಳು ವರ್ಷಗಳಾಗಿದ್ದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಗ್ರಾಮ ವಿಸ್ತರಣೆಯಾಗಿರುವ ಪ್ರದೇಶಗಳಿಗೆ ಮೂಲ ಸೌಕರ್ಯ ಕಲ್ಪಿಸಲಾಗದೆ ಜನರು ತೊಂದರೆ ಅನುಭವಿಸುವಂತಾಗಿದೆ.
ಗ್ರಾಮ ಠಾಣಾ ಗಡಿಯನ್ನು ತುಂಬಾ ಹಿಂದೆ ನಿಗದಿಪಡಿಸಿದ್ದು, ಪ್ರಸ್ತುತ ವಿಸ್ತರಣೆಯಾಗಿರುವ ಪ್ರದೇಶವನ್ನು ಒಳಗೊಂಡಂತೆ ಹೊಸ ಸರ್ವೇ ಮಾಡಿಸಿ ಗ್ರಾಮ ಠಾಣಾವನ್ನು ಪುನರ್ ನಿಗದಿಪಡಿಸುವ ಬಗ್ಗೆ ೨೮ ಅಕ್ಟೋಬರ್ ೨೦೧೬ರಲ್ಲಿ ಸರ್ಕಾರ ಆದೇಶ ಹೊರಡಿಸಿತ್ತು. ಆದರೆ, ಇದುವರೆಗೆ ಗ್ರಾಮಠಾಣಾ ವಿಸ್ತರಣೆಗೆ ಗ್ರಾಮಗಳನ್ನೇ ಗುರುತಿಸದಿರುವುದು ಅಧಿಕಾರಿಗಳ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.ಸಾರ್ವಜನಿಕರಿಂದ ದೂರು, ಮನವಿ:
ಸಾರ್ವಜನಿಕವಾಗಿ ಗ್ರಾಮಠಾಣೆ ಗಡಿ ವಿಸ್ತರಣೆ, ಪುನರ್‌ನಿಗದಿ ಮಾಡುವ ಬಗ್ಗೆ, ಮೂಲ ಸೌಕರ್ಯಗಳನ್ನು ಕಲ್ಪಿಸುವ ಬಗ್ಗೆ ಸಾಕಷ್ಟು ದೂರು ಅರ್ಜಿಗಳು ಮತ್ತು ಮನವಿಗಳು ಬರುತ್ತಿವೆ. ಆದರೂ, ಅಧಿಕಾರಿಗಳು ಗ್ರಾಮಠಾಣೆ ವಿಸ್ತರಣೆಗೆ ಆಸಕ್ತಿಯನ್ನೇ ತೋರಿಸುತ್ತಿಲ್ಲ. ಗ್ರಾಮ ಠಾಣಾ ವ್ಯಾಪ್ತಿಯ ಸ್ಥಿತಿ-ಗತಿಯನ್ನು ಅಳತೆ ಮಾಡಿ ಖಚಿತಪಡಿಸಿಕೊಂಡು ಹಕ್ಕು, ದಾಖಲೆ, ಇ-ಸ್ವತ್ತು ನೀಡುವುದು, ಗ್ರಾಪಂ ಆಡಳಿತ ವ್ಯಾಪ್ತಿಯ ಅಧಿಕಾರ ವಿಸ್ತರಣೆ, ಕಂದಾಯ ನಿಗದಿ ಮತ್ತು ಮೂಲಸೌಕರ್ಯಗಳನ್ನು ಒದಗಿಸುವ ಉದ್ದೇಶವಿಟ್ಟುಕೊಂಡು ತುರ್ತಾಗಿ ಅಳತೆ ಮಾಡಿ ಹೊಸದಾಗಿ ಗ್ರಾಮಠಾಣಾ ವ್ಯಾಪ್ತಿಯನ್ನು ಕಾನೂನಾತ್ಮಕವಾಗಿ ಗುರುತಿಸಿ ಗೆಜೆಟ್ ಮೂಲಕ ಘೋಷಿಸಬೇಕಿದ್ದರೂ ಆ ಪ್ರಕ್ರಿಯೆಯಲ್ಲಿ ಒಂದು ಹೆಜ್ಜೆಯನ್ನೂ ಕಂದಾಯ ಇಲಾಖೆ ಮುಂದಿಟ್ಟಿಲ್ಲ.ಸಮಿತಿ ರಚಿಸಿದ್ದೆಷ್ಟು ಅಷ್ಟೇ:
ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರಕ್ಕೆ ಬಂದ ನಂತರದಲ್ಲಿ ತಾಲೂಕು ಮಟ್ಟದಲ್ಲಿ ತಹಸೀಲ್ದಾರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಭೂಮಾಪನ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಗ್ರಾಮ ಮಟ್ಟದಲ್ಲಿ ಗ್ರಾಪಂ ಅಧ್ಯಕ್ಷರು, ಪಂಚಾಯ್ತಿ ಅಭಿವೃದ್ಧಿ ಅಧಿಕಾರಿ, ರಾಜಸ್ವ ನಿರೀಕ್ಷಕರು, ಸರ್ವೇ ಸೂಪರ್‌ವೈಸರ್, ಗ್ರಾಮ ಆಡಳಿತ ಅಧಿಕಾರಿಯನ್ನು ನೇಮಕ ಮಾಡಿದ್ದಾರೆ. ಉಳಿದಂತೆ ಗ್ರಾಮಗಳ ಸರ್ವೇ ಕಾರ್ಯ ಮಾತ್ರ ನಡೆಯದಿರುವುದು ವಿಪರ್ಯಾಸದ ಸಂಗತಿಯಾಗಿದೆ.ಇ-ಸ್ವತ್ತು ಯೋಜನೆ ಅನುಷ್ಠಾನಕ್ಕೆ ಸಮಸ್ಯೆ:
ಗ್ರಾಪಂ ವ್ಯಾಪ್ತಿಯ ಗ್ರಾಮಗಳ ಗ್ರಾಮಠಾಣಾ ಗಡಿಯನ್ನು ತುಂಬಾ ಹಿಂದೆ ನಿಗದಿಪಡಿಸಲಾಗಿದೆ. ಪ್ರಸ್ತುತ ವಿಸ್ತರಣೆಯಾಗಿರುವ ಪ್ರದೇಶವನ್ನು ಒಳಗೊಂಡಂತೆ ಹೊಸದಾಗಿ ಸರ್ವೇ ಮಾಡಿಸಿ ಪುನರ್ ನಿಗದಿಪಡಿಸುವ ಬಗ್ಗೆ ೨೧.೯.೨೦೧೬ರಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರು ಮತ್ತು ಕಂದಾಯ ಸಚಿವರ ಸಮ್ಮುಖದಲ್ಲಿ ನಡೆದ ಇ-ಸ್ವತ್ತು ಯೋಜನೆ ಅನುಷ್ಠಾನದ ಬಗೆಗಿನ ಸಮಸ್ಯೆಗಳ ಬಗ್ಗೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿತ್ತು.ಯಾವ ರೀತಿ ಪ್ರಕ್ರಿಯೆ ನಡೆಯಬೇಕು?
ಗ್ರಾಪಂ ವ್ಯಾಪ್ತಿಯ ಗ್ರಾಮಗಳು ಮೂಲ ಗ್ರಾಮ ಠಾಣಾ ಜೊತೆಗೆ ಹೊಂದಿಕೊಂಡಂತೆ ಪ್ರಸ್ತುತ ವಿಸ್ತರಣೆಯಾಗಿರುವ ಪ್ರದೇಶವನ್ನು ಒಳಗೊಂಡಂತೆ ಹೊಸದಾಗಿ ಸರ್ವೇ ನಡೆಸಲು ಕ್ರಮ ವಹಿಸುವುದು. ಸರ್ವೇಯರ್‌ಗೆ ಗ್ರಾಪಂ ಕಾರ್ಯದರ್ಶಿ ಮತ್ತು ಗ್ರಾಮ ಲೆಕ್ಕಾಧಿಕಾರಿಗಳು ಸಹಕಾರ ನೀಡುವುದು.ಗ್ರಾಮಠಾಣಾ ಜೊತೆಗೆ ಹೊಂದಿಕೊಂಡಂತೆ ಪ್ರಸ್ತುತ ವಿಸ್ತರಣೆಯಾಗಿರುವ ಪ್ರದೇಶದ ಬಗ್ಗೆ ವಾರ್ಡ್ ಸಭೆ ಮತ್ತು ಗ್ರಾಮಸಭೆಗಳಲ್ಲಿ ಕಂದಾಯ ಇಲಾಖೆಯ ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು ಹಾಜರಾಗಿ ಚರ್ಚಿಸಿ ತೀರ್ಮಾನಿಸುವುದು. ಸರ್ವೇ ಮಾಡಿದ ಗ್ರಾಮಠಾಣಾ ವಿಸ್ತರಣೆ ಬಗ್ಗೆ ಸವಿವರವಾಗಿ ಗ್ರಾಪಂ ಸಭೆಯಲ್ಲಿ ಚರ್ಚಿಸಿ ನಿರ್ಣಯ ಕೈಗೊಂಡು ತಹಸೀಲ್ದಾರ್ ಮತ್ತು ತಾಪಂ ಇಒಗಳಿಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಲಾಗಿತ್ತು.
ತಹಸೀಲ್ದಾರ್ ಮತ್ತು ತಾಪಂ ಇಒಗಳು ಸ್ಥಳ ಪರಿಶೀಲನೆ ನಡೆಸಿ ವಿಸ್ತರಣೆಯಾಗಿರುವ ಪ್ರದೇಶವನ್ನು ಕ್ರಮಬದ್ಧ ಪಡಿಸಿಕೊಂಡು ತದನಂತರ ಉಪವಿಭಾಗಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸುವುದು. ಉಪವಿಭಾಗಾಧಿಕಾರಿಗಳು ಖಚಿತ ಪಡಿಸಿಕೊಂಡು ಭೂಮಾಪನ ವ್ಯವಸ್ಥೆ ಮತ್ತು ಭೂ ದಾಖಲೆಗಳ ಇಲಾಖೆ ಉಪ ನಿರ್ದೇಶಕರಿಗೆ ಸಲ್ಲಿಸಿದರೆ, ಅವರು ಜಿಲ್ಲಾಧಿಕಾರಿಗಳಿಗೆ ಸಲ್ಲಿಸುವುದು ಇವೆಲ್ಲಾ ಪ್ರಕ್ರಿಯೆಗಳನ್ನು ಪರಿಶೀಲಿಸಿ ಜಿಲ್ಲಾಧಿಕಾರಿಗಳು ಗ್ರಾಮಠಾಣಾ ವಿಸ್ತರಣೆ ಆದೇಶ ಹೊರಡಿಸುವಂತೆ ಸೂಚಿಸಲಾಗಿತ್ತು. ಒಮ್ಮೆ ಸರ್ವೇಯರ್‌ಗಳ ಲಭ್ಯತೆ ಇಲ್ಲದಿದ್ದರೆ ನಿವೃತ್ತ ಸರ್ವೇಯರ್‌ಗಳನ್ನು ನೇಮಿಸಿಕೊಳ್ಳುವಂತೆಯೂ ಆದೇಶದಲ್ಲಿ ತಿಳಿಸಲಾಗಿತ್ತು.ಒಂದು ಗ್ರಾಮದ ಗಡಿಯನ್ನೂ ಗುರುತಿಸಿಲ್ಲ
ಈ ಆದೇಶ ಹೊರಬಿದ್ದು ೭ ವರ್ಷಗಳಾದರೂ ಇದುವರೆಗೂ ಒಂದೇ ಒಂದು ಗ್ರಾಮಠಾಣಾ ವಿಸ್ತರಣೆಗೆ ಸಂಬಂಧಿಸಿದಂತೆ ಸರ್ವೇ ನಡೆದಿಲ್ಲ. ಆ ಕಾರ್ಯ ಪ್ರಗತಿಯಲ್ಲಿಯೂ ಇಲ್ಲ. ಜಿಲ್ಲಾಧಿಕಾರಿ ಡಾ.ಕುಮಾರ ಅವರು ಆಗಸ್ಟ್‌ನಲ್ಲೇ ಸಮಿತಿ ರಚನೆ ಮಾಡಿ ಪ್ರಥಮ ಹಂತದ ಗ್ರಾಮಗಳ ಸರ್ವೇ ಕಾರ್ಯ ನಡೆಸಿ ಪೂರ್ಣ ಪ್ರಮಾಣದ ಪ್ರಸ್ತಾವನೆಯನ್ನು ಸೆಪ್ಟೆಂಬರ್ ೧೫ರೊಳಗೆ ಸಲ್ಲಿಸುವಂತೆ ಆದೇಶ ಹೊರಡಿಸಿದ್ದರೂ ಇದುವರೆಗೂ ಅಧಿಕಾರಿಗಳು ಆ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗದಿರುವುದು ಕಂದಾಯ ಇಲಾಖೆ ಆಡಳಿತ ಕಾರ್ಯವೈಖರಿಗೆ ಸಾಕ್ಷಿಯಾಗಿದೆ.ಏಳು ವರ್ಷಗಳಿಂದ ಒಂದೇ ಒಂದು ಗ್ರಾಮದ ಸರ್ವೇ ನಡೆದಿಲ್ಲವೆಂದರೆ ಸರ್ಕಾರದ ಆದೇಶಕ್ಕೆ ಕಂದಾಯ ಇಲಾಖೆ ಅಧಿಕಾರಿಗಳು ನೀಡುತ್ತಿರುವ ಗೌರವಕ್ಕೆ ಸಾಕ್ಷಿಯಾಗಿದೆ. ಗ್ರಾಮಗಳು ವಿಸ್ತರಣೆಯಾಗಿವೆ. ಅವುಗಳಿಗೆ ಗಡಿ ಗುರುತಿಸಿ ಮೂಲಸೌಕರ್ಯ ಕಲ್ಪಿಸುವುದರೊಂದಿಗೆ ಇ-ಸ್ವತ್ತು ನಿಗದಿಪಡಿಸಬೇಕು. ಇಲ್ಲದಿದ್ದರೆ ಪಂಚಾಯ್ತಿಗಳಿಗೆ ಆದಾಯಮೂಲ ಸೃಷ್ಟಿಯಾಗುವುದು ಹೇಗೆ. ಇದರ ಬಗ್ಗೆ ಈಗಲಾದರೂ ಜಿಲ್ಲಾಧಿಕಾರಿಗಳು ಗಂಭೀರವಾಗಿ ಪರಿಗಣಿಸಬೇಕು.- ಮಧು ಜಿ.ಮಾದೇಗೌಡ, ವಿಧಾನ ಪರಿಷತ್ ಸದಸ್ಯರು;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))