ರೈತರ ಖಾತೆಗೆ ₹1.19 ಕೋಟಿ ಪರಿಹಾರ ಜಮಾ

| Published : Sep 28 2024, 01:28 AM IST

ರೈತರ ಖಾತೆಗೆ ₹1.19 ಕೋಟಿ ಪರಿಹಾರ ಜಮಾ
Share this Article
  • FB
  • TW
  • Linkdin
  • Email

ಸಾರಾಂಶ

ಗುಂಡ್ಲುಪೇಟೆಯಲ್ಲಿ ಕಳೆದ 14 ದಿನಗಳಿಂದ ನಡೆಯುತ್ತಿದ್ದ ರೈತರ ಹೋರಾಟ ಕೈ ಬಿಡಿ ಎಂದು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಮನವಿ ಮಾಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಗಾಳಿ, ಮಳೆಗೆ ಬಾಳೆ ಹಾನಿ, ಬೆಳೆ ವಿಮೆ ಸೇರಿದಂತೆ ವಿವಿಧ ಬೇಡಿಕೆಗಾಗಿ ಕಳೆದ 15 ದಿನಗಳಿಂದ ನಡೆಯುತ್ತಿದ್ದ ರೈತರ ಅಹೋರಾತ್ರಿ ಪ್ರತಿಭಟನೆ ಫಲವಾಗಿ ₹1.19 ಕೋಟಿ ಪರಿಹಾರದ ಹಣ ರೈತರ ಖಾತೆಗೆ ಜಮಾ ಆಗಿದೆ.

ಕಳೆದ 15 ದಿನಗಳಿಂದ ರಾತ್ರಿ, ಹಗಲು ರೈತಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ನೇತೃತ್ವದಲ್ಲಿ ಪಟ್ಟಣದ ಪ್ರಜಾಸೌಧದಲ್ಲಿ ಅಹೋರಾತ್ರಿ ಪ್ರತಿಭಟನೆ ನಡೆಸಿ, ರೈತರ ಖಾತೆಗೆ ಜಮಾ ಆಗೋ ತನಕ ಪ್ರತಿಭಟನೆ ನಡೆಸುವುದಾಗಿ ರೈತರು ಎಚ್ಚರಿಸಿದ್ದರು. ಕಳೆದ 14 ದಿನಗಳಿಂದ ರೈತರು ಪಟ್ಟಣದ ಪ್ರಜಾಸೌಧದ ಆವರಣದಲ್ಲಿ ಅಹೋರಾತ್ರಿ ಧರಣಿ ನಡೆಸುತ್ತಿದ್ದು, 15 ನೇ ದಿನಕ್ಕೆ ಶುಕ್ರವಾರ ಕಾಲಿಟ್ಟ ಹಿನ್ನೆಲೆ ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಅಹೋರಾತ್ರಿ ನಡೆಯುತ್ತಿದ್ದ ಧರಣಿ ಸ್ಥಳಕ್ಕಾಗಮಿಸಿ ಜಿಲ್ಲಾಧಿಕಾರಿ ರೈತರಿಗೆ ಪರಿಹಾರ ಪಾವತಿಸಿದ್ದಾರೆ. ಧರಣಿ ಕೈ ಬಿಡಿ ಎಂದು ಮನವಿ ಪತ್ರವನ್ನು ರೈತರಿಗೆ ಕೊಡುವ ಮೂಲಕ ರೈತರು ಅಹೋರಾತ್ರಿ ಪ್ರತಿಭಟನೆಯನ್ನು ಕೈ ಬಿಟ್ಟಿದ್ದಾರೆ.

ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಧರಣಿಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ 2024 ರ ಪೂರ್ವ ಮುಂಗಾರಿನಲ್ಲಿ ಜಂಟಿ ಸಮೀಕ್ಷೆ ವರದಿಯಂತೆ ಹಾನಿಗೊಳಗಾದ ಕೃಷಿ, ತೋಟಗಾರಿಕೆ ಬೆಳೆಗೆಳಿಗೆ ಪರಿಹಾರದ ತಂತ್ರಾಂಶದ ಮೂಲಕ ಪರಿಹಾರ ಪಾವತಿಸುವ ಸಂಬಂಧ ಗ್ರಾಮ ಆಡಳಿತ ಅಧಿಕಾರಿಗಳು ಬೆಳೆ ಹಾನಿ ವಿವರವನ್ನು ಪರಿಹಾರ ತಂತ್ರಾಂಶದಲ್ಲಿ ನಮೂಸಿದಿದ್ದಾರೆ ಎಂದರು.

ಮೊದಲನೇ ಹಂತದಲ್ಲಿ 1625 ರೈತರಿಗೆ 1.20 ಕೋಟಿ ಪರಿಹಾರ ಪಾವತಿಸುವ ಸಂಬಂಧ ಸ್ವೀಕೃತವಾದ ಗ್ರೀನ್‌ ಲಿಸ್ಟನ್ನು ತಹಸೀಲ್ದಾರ್‌ರಿಂದ ಪರಿಶೀಲನಾ ವರದಿ ಪಡೆದು ಪರಿಹಾರ ತಂತ್ರಾಂಶದಲ್ಲಿ ಅನುಮೋದಿಸಲಾಗಿದೆ. ಈ ಪೈಕಿ ಎನ್‌ಪಿಸಿಐ ಆಗಿರುವ 1622 ರೈತರಿಗೆ 1.29 ಕೋಟಿ ಪರಿಹಾರ ಪಾವತಿಸುವ ಸಂಬಂಧ ಡಿಬಿಟಿ ತಂತ್ರಾಂಶದಲ್ಲಿ ಜಿಲ್ಲಾಧಿಕಾರಿ ಅನುಮೋದನೆ ಮಾಡಿದ್ದಾರೆ ಎಂದರು. ಆದ್ದರಿಂದ ಡಿಬಿಟಿ ತಂತ್ರಾಂಶದಲ್ಲಿ ಅನುಮೋದಿಸಿರುವ 1622 ರೈತರಿಗೆ 1.19 ಕೋಟಿ ಪರಿಹಾರವನ್ನು ಜಿಲ್ಲಾ ವಿಪತ್ತು ನಿರ್ವಹಣಾ ಪಿಡಿ ಖಾತೆಯಿಂದ ಪರಿಹಾರವನ್ನು ರೈತರಿಗೆ ಜಿಲ್ಲಾಧಿಕಾರಿ ಸೆ.25 ರಂದು ಪಾವತಿಸಿದ್ದಾರೆ ಎಂದರು.

ಈ ವೇಳೆ ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ರೈತರ ಬೇಡಿಕೆಗೆ ಸ್ಪಂದಿಸಿ ಜಿಲ್ಲಾಧಿಕಾರಿ ಹಣ ಪಾವತಿಸಿದ್ದಾರೆ. ಅಲ್ಲದೆ ಹುತ್ತೂರು ಕೆರೆಯಿಂದ ವಡ್ಡಗೆರೆ ಕೆರೆಗೆ ಪ್ರಾಯೋಗಿಕವಾಗಿ ನೀರು ಬಿಟ್ಟಿರುವ ಕಾರಣ ಅಹೋರಾತ್ರಿ ಪ್ರತಿಭಟನೆಯನ್ನು ತಾತ್ಕಾಲಿಕವಾಗಿ ಕೈ ಬಿಡಲಾಗಿದೆ ಎಂದರು. ರೈತರು ಕಳೆದ 14 ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸಿದ ಫಲವಾಗಿ ರೈತರಿಗೆ ಪರಿಹಾರ ಹಣ ಜಮಾ ಆಗಿದೆ. ಇದು ರೈತ ಹೋರಾಟಕ್ಕೆ ಸಂದ ಜಯ ಎಂದು ಹೇಳಿದ್ದಾರೆ. ಪ್ರತಿಭಟನೆಯಲ್ಲಿ ರೈತಸಂಘದ ಹಂಗಳ ದಿಲೀಪ್‌, ಮಾಧು, ಭರತ್‌ ಸೇರಿದಂತೆ ರೈತಸಂಘದ ಕಾರ್ಯಕರ್ತರು ಇದ್ದರು.