ರಾಜ್ಯದ ಅತಿ ದೊಡ್ಡ ತಾಲೂಕುಗಳಲ್ಲಿ ಒಂದಾದ ಹಾನಗಲ್ಲಿನ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ೧೨೦೪ ಹುದ್ದೆಗಳು ಖಾಲಿ ಇದ್ದು, ಇದರಿಂದ ಸೇವಾನಿರತ ನೌಕರರಿಗೆ ತೀರಾ ಒತ್ತಡದ ಸ್ಥಿತಿ ಎದುರಾಗಿದೆ.

ಮಾರುತಿ ಶಿಡ್ಲಾಪೂರ

ಹಾನಗಲ್ಲ: ರಾಜ್ಯದ ಅತಿ ದೊಡ್ಡ ತಾಲೂಕುಗಳಲ್ಲಿ ಒಂದಾದ ಹಾನಗಲ್ಲಿನ ವಿವಿಧ ಸರ್ಕಾರಿ ಇಲಾಖೆಗಳಲ್ಲಿ ೧೨೦೪ ಹುದ್ದೆಗಳು ಖಾಲಿ ಇದ್ದು, ಇದರಿಂದ ಸೇವಾನಿರತ ನೌಕರರಿಗೆ ತೀರಾ ಒತ್ತಡದ ಸ್ಥಿತಿ ಎದುರಾಗಿದೆ.

ತಾಲೂಕಿನಲ್ಲಿ ಒಟ್ಟು ೨೮೭೪ ಮಂಜೂರಿ ಹುದ್ದೆಗಳಿದ್ದು, ೧೬೭೦ ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ೧೨೦೪ ಹುದ್ದೆಗಳು ಖಾಲಿ ಇವೆ. ತಾಪಂನಲ್ಲಿ ಮಂಜೂರಾದ ೧೨೫ ಹುದ್ದೆಗಳ ಪೈಕಿ ೪೩ ಹುದ್ದೆಗಳು ಖಾಲಿ ಇವೆ. ೪೨ ಗ್ರಾಪಂಗಳಲ್ಲಿ ೨೧ ಪಿಡಿಒ ಕೆಲಸ ನಿರ್ವಹಿಸುತ್ತಿದ್ದಾರೆ. ಒಬ್ಬೊಬ್ಬ ಪಿಡಿಒ 2-3 ಪಂಚಾಯಿತಿಗಳ ಜವಾಬ್ದಾರಿ ಹೊತ್ತಿದ್ದಾರೆ.

ಪ್ರಾಥಮಿಕ ಶಾಲೆಗಳಲ್ಲಿ ಮಂಜೂರಾದ ೧೧೩೩ ಶಿಕ್ಷಕರ ಹುದ್ದೆಗಳ ಪೈಕಿ ೩೩೭ ಹುದ್ದೆಗಳು ಖಾಲಿ ಇವೆ. ಸರ್ಕಾರಿ ಪ್ರೌಢಶಾಲೆಗಳಲ್ಲಿ ೨೭೭ ಹುದ್ದೆಗಳಿದ್ದು, ೯೩ ಖಾಲಿ ಹುದ್ದೆಗಳಿವೆ. ಈ ಹುದ್ದೆಗಳಿಗೆ ಅತಿಥಿ ಶಿಕ್ಷಕರನ್ನೆ ಅವಲಂಬಿಸಿದೆ. ಅಲ್ಲದೇ ಸರ್ಕಾರಿ, ಅನುದಾನಿತ, ಅನುದಾನ ರಹಿತ ಶಾಲೆಗಳ ಒಟ್ಟು ೨ ಸಾವಿರಕ್ಕೂ ಅಧಿಕ ಶಿಕ್ಷಕರ ಮಾಹಿತಿ, ಮಾರ್ಗದರ್ಶನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಕೆಲಸ ನಿರ್ವಹಿಸುವ ನೌಕರರು ೭ ಜನ ಮಾತ್ರ.

ಆರೋಗ್ಯ ಇಲಾಖೆಯಲ್ಲಿ ೧೯೪ ಮಂಜೂರಿ ಹುದ್ದೆಗಳ ಪೈಕಿ 100 ಹುದ್ದೆಗಳು ಖಾಲಿ ಇವೆ. ಕೆಲವು ಆಸ್ಪತ್ರೆಗಳಲ್ಲಿ ವೈದ್ಯರೂ ಇಲ್ಲದ ಸ್ಥಿತಿ ಇದೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ೮೭ ಹುದ್ದೆಗಳಲ್ಲಿ ೩೧ ಹುದ್ದೆಗಳಲ್ಲಿ ಮಾತ್ರ ಕಾರ್ಯ ನಿರ್ವಹಿಸುತ್ತಿದ್ದಾರೆ.

ತಹಸೀಲ್ದಾರ್‌ ಕಚೇರಿಯಲ್ಲಿ ೧೦೯ ಹುದ್ದೆಗಳಿದ್ದು, ಕೇವಲ ೭೩ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ. ಮೋಜಣಿ ಇಲಾಖೆಯಲ್ಲಿ ೩೧ ಹುದ್ದೆಗಳಿದ್ದು, ೧೧ ಜನರು ಮಾತ್ರ ಕೆಲಸ ನಿರ್ವಹಿಸುತ್ತಿದ್ದಾರೆ. ಅರಣ್ಯ ಇಲಾಖೆಯಲ್ಲಿ ೩೪ ಹುದ್ದೆಗಳಲ್ಲಿ ೧೯ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ.

ಲೋಕೋಪಯೋಗಿ ಇಲಾಖೆಯ ೨೧ ಹುದ್ದೆಗಳ ಪೈಕಿ ೧೧ ಹುದ್ದೆ ಖಾಲಿ ಇವೆ. ಪಿಎಂಜಿಎಸ್‌ವೈ ಹಾಗೂ ಗ್ರಾಮೀಣ ಕುಡಿಯುವ ನೀರು ಯೋಜನೆ ಇಲಾಖೆಗಳಲ್ಲಿ ತಲಾ ೧೨ ಹುದ್ದೆಗಳಿದ್ದು, ತಲಾ ೧೦ ಹುದ್ದೆ ಖಾಲಿ ಇವೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ೬೧ ಹುದ್ದೆಗಳಲ್ಲಿ ೨೬ ಖಾಲಿ ಹುದ್ದೆಗಳಿವೆ. ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ೮೬ ಹುದ್ದೆಗಳಲ್ಲಿ ೭೫ ಹುದ್ದೆಗಳು ಖಾಲಿ ಇವೆ. ಪದವಿ ಪೂರ್ವ ಕಾಲೇಜುಗಳಲ್ಲಿ ೭೦ ಮಂಜೂರಿ ಹುದ್ದೆಗಳಲ್ಲಿ ೨೫ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ. ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ೮೭ ಹುದ್ದೆಗಳಲ್ಲಿ ೩೧ ಜನ ಕಾರ್ಯ ನಿರ್ವಹಿಸುತ್ತಿದ್ದಾರೆ.

ಸಮಾಜ ಕಲ್ಯಾಣ ಇಲಾಖೆಯ ೮೯ ಹುದ್ದೆಗಳಲ್ಲಿ ೬೫ ಹುದ್ದೆಗಳು ಖಾಲಿ ಇವೆ. ಕೃಷಿ ಇಲಾಖೆಯ ೨೮ ಹುದ್ದೆಗಳಲ್ಲಿ ೨೦ ಹುದ್ದೆಗಳು ಖಾಲಿ ಇವೆ. ಮೀನುಗಾರಿಕೆ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರೊಬ್ಬರೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಲ್ಲದೆ ಇದೇ ಅಧಿಕಾರಿ ಎರಡು ತಾಲೂಕಿನ ಪ್ರಭಾರವನ್ನೂ ನೋಡಿಕೊಳ್ಳಬೇಕಾಗಿದೆ.

ತಾಲೂಕಿನಲ್ಲಿ ಹಲವು ದಶಕಗಳ ಹಿಂದಿನ ವ್ಯವಸ್ಥೆಗೆ ಅನುಗುಣವಾಗಿ ಮಂಜೂರಿ ಹುದ್ದೆಗಳಿವೆ. ಈಗ ಕೆಲಸದ ವ್ಯಾಪ್ತಿ ಹೆಚ್ಚಿದೆ. ಸಿಬ್ಬಂದಿಯ ಕೊರತೆಯಿಂದ ತಾಲೂಕಿನ ಆಡಳಿತಾತ್ಮಕ ಕೆಲಸಕ್ಕೆ ಅನನುಕೂಲವಾಗಿದೆ. ಖಾಲಿ ಹುದ್ದೆ ಭರ್ತಿಯಾಗಬೇಕು ಎಂಬ ಬಹು ದೊಡ್ಡ ಬೇಡಿಕೆ ಇದೆ. ಸರ್ಕಾರ ಈಗ ಖಾಲಿ ಹುದ್ದೆಗಳನ್ನು ತುಂಬುವ ಯೋಚನೆಯಲ್ಲಿದ್ದು, ಈ ಸಂದರ್ಭದಲ್ಲಿ ನಮ್ಮ ತಾಲೂಕಿಗೆ ಬರಬಹುದಾದ ನೌಕರರಿಗಾಗಿ ಕಾಯಬೇಕಾಗಿದೆ.

ತುಂಬುವ ಅಗತ್ಯವಿದೆ: ಸಿಬ್ಬಂದಿಯ ಕೊರತೆಯಿಂದ ನೌಕರರ ಮೇಲೆ ಕೆಲಸದ ಒತ್ತಡ ಹೆಚ್ಚಿದೆ. ನೌಕರರ ಆರೋಗ್ಯದ ಮೇಲೆ ಪರಿಣಾಮ ಬೀರಿದೆ. ಶಾಲೆ-ಕಾಲೇಜುಗಳಲ್ಲಿ ಅತಿಥಿ ಶಿಕ್ಷಕರನ್ನು ನೇಮಿಸಿದ ಮಾದರಿಯಲ್ಲಿ ಎನ್‌ಜಿಒ ಮೂಲಕ ಸದ್ಯಕ್ಕೆ ಹೊರಗುತ್ತಿಗೆ ಮೂಲಕ ಎಲ್ಲ ಇಲಾಖೆಗಳ ಖಾಲಿ ಹುದ್ದೆಗೆ ನೌಕರರನ್ನು ತುಂಬುವ ಅಗತ್ಯವಿದೆ ಎಂದು ತಾಲೂಕು ಸರ್ಕಾರಿ ನೌಕರರ ಸಂಘದ ಮಾಜಿ ಅಧ್ಯಕ್ಷ ಕೆ.ಎಫ್. ಚಿಕ್ಕೇರಿ ಹೇಳಿದರು.