ನಗರ ನೀರು ಸಮಸ್ಯೆ ನಿವಾರಣೆಗೆ 1.25 ಕೋಟಿ ಬಳಸಿ

| Published : Oct 19 2025, 01:00 AM IST

ಸಾರಾಂಶ

ಹೊಸಕೋಟೆ: ನಗರಸಭೆ ವ್ಯಾಪ್ತಿಯ ಎಲ್ಲಾ 31 ವಾರ್ಡ್ಗಳಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಲು ಹಾಗೂ ನೂತನ ಕೊಳವೆ ಬಾವಿಗಳನ್ನು ಕೊರೆಸಲು 1.25ಕೋಟಿ ಅನುದಾನದ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ದೇವರಾಜ್ ತಿಳಿಸಿದರು.

ಹೊಸಕೋಟೆ: ನಗರಸಭೆ ವ್ಯಾಪ್ತಿಯ ಎಲ್ಲಾ 31 ವಾರ್ಡ್ಗಳಲ್ಲಿ ಯಾವುದೇ ರೀತಿಯ ನೀರಿನ ಸಮಸ್ಯೆ ಉಂಟಾಗದಂತೆ ಕ್ರಮವಹಿಸಲು ಹಾಗೂ ನೂತನ ಕೊಳವೆ ಬಾವಿಗಳನ್ನು ಕೊರೆಸಲು 1.25ಕೋಟಿ ಅನುದಾನದ ಸದ್ಬಳಕೆ ಮಾಡಿಕೊಳ್ಳಲಾಗುವುದು ಎಂದು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ದೇವರಾಜ್ ತಿಳಿಸಿದರು.

ನಗರಸಭೆ ಸ್ಥಾಯಿ ಸಮಿತಿ ಕಾರ್ಯಸೂಚಿ ಸಭೆಯಲ್ಲಿ ಮಾತನಾಡಿದ ಅವರು, ನಗರದ ಸಾರ್ವಜನಿಕರಿಗೆ ಅಗತ್ಯ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವುದು ಆದ್ಯ ಕರ್ತವ್ಯ. ಪ್ರಮುಖವಾಗಿ ಕುಡಿಯುವ ನೀರು, ನೈರ್ಮಲ್ಯ ಕಾಪಾಡುವುದು, ರಸ್ತೆಗಳ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ ಜನರ ಪ್ರಮುಖ ಬೇಡಿಕೆಗಳಾಗಿವೆ. ಇವುಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡುವುದರ ಮೂಲಕ ನಗರದ ಅಭಿವೃದ್ಧಿ ಸಾಧ್ಯವಾಗುತ್ತದೆ. ಅಧಿಕಾರಿಗಳು ವಾರ್ಡ್‌ಗಳಲ್ಲಿ ಚುನಾಯಿತ ಜನಪ್ರತಿನಿಧಿಗಳ ವಿಶ್ವಾಸಗಳಿಸುವ ಮೂಲಕ ಅಭಿವೃದ್ಧಿಗೆ ಆದ್ಯತೆ ನೀಡಬೇಕು. ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರಥಮ ಆದ್ಯತೆ ನೀಡಬೇಕಿದ್ದು ನಗರಸಭೆಯಲ್ಲಿ ಇರುವ ೧.೨೫ ಕೋಟಿ ಅನುದಾನವನ್ನು ನೂತನ ಕೊಳವೆಬಾವಿಗಳ ಕೊರೆಸುವ ಮೂಲಕ ಸಮರ್ಪಕ ನೀರು ಸರಬರಾಜಿಗೆ ಆದ್ಯತೆ ನೀಡುವಂತೆ ಶಾಸಕರು ಸೂಚನೆ ನೀಡಿದರು.

ರಸ್ತೆ ಗುಂಡಿ ಮುಚ್ಚಿ: ನಗರಸಭೆ ವ್ಯಾಪ್ತಿಯ 31 ವಾರ್ಡ್ಗಳಲ್ಲಿ ಇರುವ ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಮುಚ್ಚುವತ್ತ ಅಧಿಕಾರಿಗಳು ಗಮನಹರಿಸಿ. ಮಳೆ ಬಂದ ಹಿನ್ನೆಲೆಯಲ್ಲಿ ವಾರ್ಡ್ಗಳ ರಸ್ತೆಗಳಲ್ಲಿ ಗುಂಡಿಗಳು ಬಿದ್ದಿದ್ದು ವಾಹನ ಸವಾರರ ಸಂಚಾರಕ್ಕೆ ತೊಂದರೆಯಾಗಿದೆ. ಗುಂಡಿಗಳನ್ನು ಗುರ್ತಿಸಿ ತ್ವರಿತವಾಗಿ ಮುಚ್ಚುವ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ನಗರಸಭೆಯಲ್ಲಿ ಬಿ ಖಾತೆ, ಇ ಖಾತೆಗಾಗಿ ಬರುವ ನಾಗರಿಕರಿಗೆ ಅಧಿಕಾರಿಗಳು ಅಗತ್ಯ ದಾಖಲಾತಿಗಳ ಬಗ್ಗೆ ಸೂಕ್ತ ಮಾರ್ಗದರ್ಶನ ನೀಡಿ ದಾಖಲಾತಿಗಳನ್ನು ಪಡೆದು ಸಾರ್ವಜನಿಕರಿಗೆ ಉತ್ತಮ ಸೇವೆ ನೀಡಬೇಕು. ಕಂದಾಯ ಇಲಾಖೆ ವತಿಯಿಂದ ನಗರದ ಅಭಿವೃದ್ಧಿಗೆ ಅಗತ್ಯ ಸಂಪನ್ಮೂಲ ಕ್ರೋಡಿಕರಣ ಆಗಬೇಕು. ಆರೋಗ್ಯ ಇಲಾಖೆಯಲ್ಲಿ ದೈನಂದಿನ ಕಸ ವಿಲೆವಾರಿಗೆ ನಾಗರಿಕರಿಗೆ ಸೂಕ್ತ ಮಾರ್ಗದರ್ಶನ ನೀಡಿ ಮನೆ ಮನೆ ಕಸ ಸಂಗ್ರಹಣೆಗೆ ಮುಂದಾಗಬೇಕು ಎಂದರು.

ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು ಮಾತನಾಡಿ, ನಗರದಲ್ಲಿ ಎಲ್ಲೆಂದರಲ್ಲಿ ಕಸ ಸುರಿಯುವ ನಾಗರಿಕರು ಹೆಚ್ಚಾಗಿದ್ದು ನಗರಸಭೆ ಸಿಬ್ಬಂದಿ ಕೈಗೆ ಸಿಕ್ಕಿಬಿದ್ದರೆ ಭಾರಿ ಮೊತ್ತದ ದಂಡ ಕಟ್ಟಬೇಕಾಗುತ್ತದೆ. ಆದ್ದರಿಂದ ನಗರದ ಸ್ವಚ್ಚತೆಗೆ ನಗರಸಭೆ ಸಿಬ್ಬಂದಿ ಜೊತೆಗೆ ನಾಗರಿಕರು ಸಹಕಾರ ನೀಡಬೇಕು ಎಂದರು.

ನಗರಸಭೆ ಪೌರಾಯುಕ್ತ ನೀಲಲೋಚನ ಪ್ರಭು, ಸ್ಥಾಯಿ ಸಮಿತಿ ಸದಸ್ಯರಾದ ಸುಗುಣ ಮೋಹನ್, ನಿತಿನ್ ಶ್ರೀನಿವಾಸ್, ಆರೋಗ್ಯ ವಿಭಾಗದ ಎಇಇ ರವೀಂದ್ರ, ಕಂದಾಯ ನಿರೀಕ್ಷಕ ತ್ಯಾಗರಾಜ್, ಎಂಜಿನಿಯರ್‌ಗಳಾದ ಗಂಗಾರೆಡ್ಡಿ, ಸತೀಶ್, ವೆಂಕಟೇಶ್, ವ್ಯವಸ್ಥಾಪಕ ವೆಂಕಟಮರಣಪ್ಪ, ಲೆಕ್ಕಪರಿಶೋಧಕ ವಿಜಯ್, ಸಮುದಾಯ ಸಂಘಟನೆ ಅಧಿಕಾರಿ ಮಂಗಮ್ಮ ಹಾಜರಿದ್ದರು.

ಫೋಟೋ: 16 ಹೆಚ್‌ಎಸ್‌ಕೆ 1

ಹೊಸಕೋಟೆ ನಗರಸಭೆ ಕಚೇರಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರ ಸ್ಥಾಯಿ ಸಮಿತಿ ಕಾರ್ಯಸೂಚಿ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ದೇವರಾಜ್ ಅಧ್ಯಕ್ಷತೆಯಲ್ಲಿ ನಡೆಯಿತು.