ಸಾರಾಂಶ
- ಧ.ಗ್ರಾ.ಯೋಜನೆಯಿಂದ ಮಹಾವೀರ ಭವನದಲ್ಲಿ 2000 ನೇ ಮದ್ಯ ವರ್ಜನ ಶಿಬಿರ ಉದ್ಘಾಟನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಇದುವರೆಗೆ 1999 ಮದ್ಯ ವರ್ಜನ ಶಿಬಿರ ನಡೆದಿದ್ದು ಒಟ್ಟು 1.37 ಲಕ್ಷ ಜನರು ಮದ್ಯ ತ್ಯಜಿಸಿ ಸಮಾಜದ ಮುಖ್ಯವಾಹಿನಿಗೆ ಬಂದಿದ್ದಾರೆ ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ಸದಾನಂದ ಬಂಗೇರ ತಿಳಿಸಿದರು.
ಗುರುವಾರ ಬಸ್ತಿಮಠದ ಮಹಾವೀರ ಭವನದಲ್ಲಿ ಮದ್ಯ ವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ, ಧ.ಗ್ರಾ . ಯೋಜನೆ, ಬೆಳ್ತಂಗಡಿ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಸಂಯುಕ್ತ ಆಶ್ರಯದಲ್ಲಿ ವಿವಿಧ ಸಂಘ, ಸಂಸ್ಥೆಗಳ ಸಹಕಾರದಲ್ಲಿ ನಡೆದ 2000 ನೇ ಮದ್ಯ ವರ್ಜನ ಶಿಬಿರದ ಉದ್ಘಾಟನೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದರು.ಚಿಕ್ಕಮಗಳೂರು ಜಿಲ್ಲೆಯಲ್ಲಿ ಈವರೆಗೆ 92 ಮದ್ಯವರ್ಜನ ಶಿಬಿರ, ಕೊಪ್ಪ,ನರಸಿಂಹರಾಜಪುರ ವ್ಯಾಪ್ತಿಯಲ್ಲಿ 13ನೇ ಶಿಬಿರವಾಗಿದೆ. ಸಮಾರೋಪ ಸಮಾರಂಭ ಧರ್ಮಸ್ಥಳದಲ್ಲಿ ನ.6 ರಂದು ನಡೆಯಲಿದೆ. ಮದ್ಯ ವರ್ಜನ ಶಿಬಿರಕ್ಕೆ ಬಂದವರು ಬಹುತೇಕರು ಮದ್ಯ ಸೇವನೆ ಬಿಟ್ಟಿದ್ದಾರೆ. ಕುಡಿತ ಕಲಿಸುವವರು ಸಾಕಷ್ಟು ಜನ ಇದ್ದಾರೆ. ಆದರೆ, ಕುಡಿತ ಬಿಡಿಸುವುವರು ಧರ್ಮಸ್ಥಳದ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಯವರು ಮಾತ್ರ ಎಂದರು.
ನರಸಿಂಹರಾಜಪುರ ಪೊಲೀಸ್ ಠಾಣಾಧಿಕಾರಿ ನಿರಂಜನಗೌಡ ಉದ್ಘಾಟಿಸಿ ಮಾತನಾಡಿ, ಮದ್ಯ ಮುಕ್ತ ಸಮಾಜ ನಿರ್ಮಿಸಬೇಕು ಎಂಬುದು ಧ.ಗ್ರಾ.ಯೋಜನೆ ಕನಸಾಗಿದೆ. ಮದ್ಯ ಸೇವನೆ ಮಾಡುವುದರಿಂದ ಕೇವಲ ಅವರೊಬ್ಬರಿಗೆ ನಷ್ಟವಲ್ಲ. ಇಡೀ ಕುಟುಂಬದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ದುರ್ಬಲ ಮನಸ್ಸಿನವರು ಸಹವಾಸದೋಷದಿಂದ ಕುಡಿತ ಕಲಿತು ಸಮಾಜದಲ್ಲಿ ಕೆಳಹಂತಕ್ಕೆ ಹೋಗುತ್ತಾರೆ. ಇಂತ ವರಿಗೆ 7 ದಿನಗಳ ಶಿಬಿರದಲ್ಲಿ ಮದ್ಯ ಬಿಡುವುದಕ್ಕೆ ಧ.ಗ್ರಾ.ಯೋಜನೆಯವರು ಪ್ರಯತ್ನಿಸುತ್ತಿರುವುದು ಶ್ಲಾಘನೀಯ. ಇಲ್ಲಿಗೆ ಬಂದ ಎಲ್ಲಾ ಶಿಬಿರಾರ್ಥಿಗಳು ಮದ್ಯ ತ್ಯಜಿಸಿ ಅವರ ಕುಟುಂಬ ನೆಮ್ಮದಿಯಾಗಲಿ ಎಂದು ಆಶಯ ವ್ಯಕ್ತಪಡಿಸಿದರು.ಸಭೆ ಅಧ್ಯಕ್ಷತೆ ವಹಿಸಿದ್ದ 2000 ನೇ ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎಸ್.ಎಚ್. ಪೂರ್ಣೇಶ್ ಮಾತನಾಡಿ, ಪ್ರತಿಯೊಬ್ಬರೂ ಜೀವನದಲ್ಲಿ ಸಹವಾಸ ದೋಷದಿಂದ ತಪ್ಪು ಮಾಡುತ್ತಾರೆ. ಆದರೆ, ತಪ್ಪನ್ನು ತಿದ್ದಿಕೊಳ್ಳಲು ಅವಕಾಶವಿದೆ. ಕುಡಿತದ ದುಶ್ಚಟಕ್ಕೆ ಬಿದ್ದವರು 7 ದಿನಗಳಲ್ಲಿ ಬದಲಾಗಿ ಹೊಸ ಮನುಷ್ಯರಾಗಿ ಹೊರ ಹೊಮ್ಮಲಿದ್ದು ಇದಕ್ಕೆ ಎಲ್ಲರೂ ಸಾಕ್ಷಿ. ಧ.ಗ್ರಾ.ಯೋಜನೆಯವರ ಸಹವಾಸ ಎಂದರೆ ಅದು ಸಜ್ಜನರ ಸಹವಾಸದಂತೆ. ಧರ್ಮಸ್ಥಳ ಮಂಜುನಾಥ ಸ್ವಾಮಿ ಆಶೀರ್ವಾದದಿಂದ ಪ್ರತಿಬ್ಬ ಶಿಬಿರಾರ್ಥಿಗಳಿಗೂ ಒಳ್ಳೆಯದಾಗಲಿದೆ ಎಂದರು.
ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ನಿಕಟಪೂರ್ವ ಜಿಲ್ಲಾಧ್ಯಕ್ಷ ಅರವಿಂದ ಸೋಮಯಾಜಿ ಮಾತನಾಡಿ, ಕುಡುಕರು ಕೆಟ್ಟವರಲ್ಲ. ಆದರೆ, ಕುಡಿತ ಕೆಟ್ಟದು. ಕುಡಿತದ ಚಟಕ್ಕೆ ಬಿದ್ದವರನ್ನು ಕುಡಿತದಿಂದ ಬಿಡಿಸಬೇಕು ಎಂಬುದು ಡಾ.ವೀರೇಂದ್ರ ಹೆಗ್ಗಡೆ ಅವರ ಸಂಕಲ್ಪ. ಮದ್ಯಪಾನದಿಂದಲೇ ಶೇ. 60 ರಷ್ಟು ಅಪರಾಧವಾಗಲಿದೆ ಎಂದರು. ಶಿಬಿರಾಧಿಕಾರಿ ವಿದ್ಯಾಧರ ಪ್ರಾಸ್ತಾವಿಕವಾಗಿ ಮಾತನಾಡಿದರು.2000 ನೇ ಮದ್ಯವರ್ಜನ ಸಮಿತಿ ಗೌರವಾಧ್ಯಕ್ಷ ಎನ್.ಎಂ.ಕಾಂತರಾಜ್, ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಜುಬೇದಾ, ಮೆಣಸೂರು ಗ್ರಾಪಂ ಅಧ್ಯಕ್ಷೆ ರಚಿತ ರಮೇಶ್, ಕರ್ನಾಟಕ ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಪ್ರೇಮಶ್ರೀನಿವಾಸ್,ನಾಗಲಾಪುರ ಗ್ರಾಪಂ ಅಧ್ಯಕ್ಷೆ ರೀನಾ ಬೆನ್ನಿ, 917 ನೇ ಮದ್ಯವರ್ಜನ ಸಮಿತಿ ಅಧ್ಯಕ್ಷ ಧರ್ಮರಾಜ್, ಜಿಲ್ಲಾ ಜನ ಜಾಗೃತಿ ವೇದಿಕೆ ಉಪಾಧ್ಯಕ್ಷ ಬಾಲಕೃಷ್ಣ ಭಟ್, ವೇದಿಕೆ ಸದಸ್ಯರಾದ ಭಾಗ್ಯನಂಜುಂಡಸ್ವಾಮಿ, ರಾಘವೇಂದ್ರ ಭಟ್, ದೇವಪ್ಪ ಸಿಗದಾಳು, ಸುಧಿ, ಯೋಜನೆಯ ಕೊಪ್ಪ, ನರಸಿಂಹರಾಜಪುರ ತಾಲೂಕು ಯೋಜನಾಧಿಕಾರಿ ರಾಜೇಶ್, ಪ್ರದೀಪ್ ,ತೀರ್ಥರಾಜ್ ಇದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))