ಸಾರಾಂಶ
ಆನಂದ್ ಎಂ. ಸೌದಿ
ಕನ್ನಡಪ್ರಭ ವಾರ್ತೆ ಯಾದಗಿರಿತಿಂಗಳಿನಿಂದ ಕಾಡುತ್ತಿದ್ದ ಅತಿವೃಷ್ಟಿ ಹಾಗೂ ಪ್ರವಾಹದ ಭೀತಿ ತಗ್ಗಿದೆ. ಜಲಾವೃತಗೊಂಡಿದ್ದ ಗ್ರಾಮಗಳಲ್ಲಿ ನೀರಿನ ಹರಿವು ಇಳಿಮುಖವಾಗಿದೆ. ಮನೆ-ಮಠಗಳಲ್ಲಿ ನುಗ್ಗಿದ್ದ ನೀರಿನಿಂದಾಗಿ ನೀರುಪಾಲಾಗಿದ್ದ ಆಸ್ತಿ-ಪಾಸ್ತಿ ಸಂರಕ್ಷಿಸಿಕೊಳ್ಳುವಲ್ಲಿ ಜನ ಹರಸಾಹಸ ಪಡುತ್ತಿದ್ದಾರೆ. ಕಾಳಜಿ ಕೇಂದ್ರಗಳಿಂದ ಜನರು ಮನೆಗೆ ಆತಂಕದಿಂದಲೇ ಮರಳುತ್ತಿದ್ದು, ಹಾನಿ ಕಂಡು ಮಮ್ಮುಲ ಮರುಗುತ್ತಿದ್ದಾರೆ.
ಈ ಮಧ್ಯೆ, ಕಳೆದ ಬಾರಿ ಮಳೆ ಕೊರತೆಯಿಂದ ಬೆಳೆಹಾನಿ ಅನುಭವಿಸಿದ್ದ ರೈತಾಪಿ ವರ್ಗ, ಈಗ ಅತೀ ಮಳೆಯಿಂದಾಗಿ ಬೆಳೆಹಾನಿ ಕಂಡು ಅಕ್ಷರಶ: ಬೀದಿಗೆ ಬಿದ್ದಂತಾಗಿದ್ದಾರೆ. ಭೀಮಾ ಪ್ರವಾಹದ ಹಿನ್ನೀರಿನಿಂದ ನದಿಪಾತ್ರದ ಜನರ ಗದ್ದೆಗಳು ಜಲಾವೃತಗೊಂಡು, ಕೆರೆಯಂಗಳದಂತಾಗಿ ಸುಮಾರು 5 ಸಾವಿರ ಹೆಕ್ಟೇರ್‌ಗೂ ಹೆಚ್ಚಿನ ಪ್ರದೇಶದಲ್ಲಿ ಭತ್ತದ ಬೆಳೆ ಹಾನಿಗೀಡಾಗಿದೆ. ಅದರಲ್ಲೂ, ಜಿಲ್ಲೆಯಲ್ಲಿ ಪ್ರಮುಖವಾದ ಹತ್ತಿ ಬೆಳೆಗಾರರ ಬದುಕಂತೂ ಮೆತ್ತಗಾಗಿದೆ. ಈ ಬಾರಿ ಹತ್ತಿ ಬೆಳೆ ಬಂಪರ್ ಬರುತ್ತದೆ ಎಂಬ ನಿರೀಕ್ಷೆಯಲ್ಲಿರುವ ಹತ್ತಿ ಬೆಳೆಗಾರರಿಗೆ ಭಾರಿ ಆಘಾತ ಮೂಡಿಸಿದೆ.ಕೃಷಿ ಇಲಾಖೆಯ ಮೂಲಗಳ ಪ್ರಕಾರ, ಇನ್ನೊಂದು ವಾರದಲ್ಲಿ ಬೆಳೆಹಾನಿ ಸಮೀಕ್ಷಾ ಕಾರ್ಯ ಮುಗಿಯಲಿದೆ. ಹಾನಿಯ ಪ್ರಮಾಣದ ಅಂತಿಮ ಅಂಕಿ-ಅಂಶಗಳು ತಿಳಿಯಲಿವೆ. ಈ ಮೊದಲು, ಹಾನಿಯ ಸಮೀಕ್ಷೆ ಕೈಗೊಂಡಿದ್ದಾಗ, ಮತ್ತೆ ಕಾಡಿದ ಸತತ ಮಳೆ ಹಾಗೂ ಭೀಮಾ ಪ್ರವಾಹದಿಂದಾಗಿ ಸರ್ವೆ ಕಾರ್ಯಕ್ಕೆ ಅಡ್ಡಿಯಾಗಿತ್ತು. ಈಗ, ಕಳೆದೆರಡು ದಿನಗಳಿಂದ ವಾತಾವರಣ ಪೂರಕವಾಗಿದ್ದು, ಸರ್ವೆ ಕಾರ್ಯ ಶುರುವಾಗಿದೆ. ಇನ್ನೊಂದು ವಾರದಲ್ಲಿ ಮುಗಿಸಲಾಗುತ್ತದೆ. ಆಗ, ಹಾನಿಯ ನಿಖರವಾದ ಅಂಕಿ ಅಂಶಗಳು ತಿಳಿಯಲಿವೆ ಎಂದು "ಕನ್ನಡಪ್ರಭ "ಕ್ಕೆ ತಿಳಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರತೇಂದ್ರನಾಥ್ ಸೂಗೂರು, ಪ್ರಕೃತಿ ವಿಕೋಪದಿಂದ ಹತ್ತಿ ಬೆಳೆ ಭಾಗಶ: ಹಾನಿಯಾಗಿ ಹಾಗೂ ಪ್ರವಾಹದಿಂದಾಗಿ ಭತ್ತದ ಬೆಳೆ ನಷ್ಟವಾಗಿರುವುದು ಆಘಾತ ಮೂಡಿಸಿದೆ. ಸಂತ್ರಸ್ತ ರೈತರಿಗೆ ಪರಿಹಾರ ಕಾರ್ಯಗಳ ಶೀಘ್ರದಲ್ಲೇ ನೀಡಲಾಗುವುದು ಎಂದು ಪ್ರತಿಕ್ರಿಯಿಸಿದರು.
ಒಂದು ಅಂದಾಜಿನಿಂತೆ, ಜಿಲ್ಲೆಯಲ್ಲಿ 1.5 ಲಕ್ಷ ಹೆಕ್ಟೇರಿನಷ್ಟು ಪ್ರದೇಶದಲ್ಲಿ ಬೆಳೆಹಾನಿಯಾಗಿದೆ. ಇದರಲ್ಲಿ ಸುಮಾರು 1 ಲಕ್ಷ ಹೆಕ್ಟೇರಿನಷ್ಟು ಹತ್ತಿ ಬೆಳೆಯೇ ಹಾನಿಯಾಗಿದೆ, ತೊಗರಿ ಬೆಳೆಗಾರರ ಬದುಕು ಹಿಂಡಿ ಹಿಪ್ಪೆ ಮಾಡಿದಂತಾಗಿದೆ. ಸುಮಾರು 1 ಲಕ್ಷ ರೈತರ, 100 ಕೋಟಿ ರು.ಗಳ ಬೆಳೆಹಾನಿ ಅಂದಾಜಿಸಲಾಗಿದೆ.ಆಗ ಮೆಣಸಿನಗಿಡ, ಈಗ ಹತ್ತಿ ಬೆಳೆಹಾನಿ..!
- ಲಕ್ಷಾಂತರ ರು.ಗಳ ಬೆಳೆಹಾನಿ ಅನುಭವಿಸಿದ ಮದ್ದರಕಿಯ ರೈತ ಮಹಾಂತಗೌಡರ ನೋವುಯಾದಗಿರಿ: "ಎಕರೆಗೆ 50 ರಿಂದ 60 ಸಾವಿರ ರು.ಗಳ ಖರ್ಚು ಮಾಡಿ, 28 ಎಕರೆ 20 ಗುಂಟೆ ಪ್ರದೇಶದಲ್ಲಿ ಬೆಳೆದಿದ್ದ ಹತ್ತಿ ಅತಿವೃಷ್ಟಿಗೆ ಸಂಪೂರ್ಣ ಕೊಳೆತು ಹೋಗಿದೆ. ಒಂದು ಎಕರೆಗೆ 10-12 ಕ್ವಿಂಟಾಲ್ ಬೆಳೆ ಬರುವ ನಿರೀಕ್ಷೆಯಿತ್ತು. ಈಗಿನ ₹8100 ಬೆಂಬಲ ಬೆಲೆ ಸೇರಿದರೆ ಎಕರೆಗೆ ₹1 ಲಕ್ಷ ಮೀರಿ ಹಣ ಲಾಭ ಬರುತ್ತಿತ್ತು. ಅಲ್ಲದೆ 14 ಎಕರೆಯಲ್ಲಿ ಬೆಳೆದಿದ್ದ ತೊಗರಿಯೂ ಸಹ ಮಕಾಡೆ ಮಲಗಿದೆ. 4 ಎಕರೆ ಬೆಳೆ ಕೈಗೆ ಬಂದರೂ, ಆಗಿರುವ ಖರ್ಚನ್ನೂ ನಿಭಾಯಿಸಲಾಗುವುದಿಲ್ಲ. ಈಗ ನೋಡಿದರೆ, ನಮ್ಮ ಕನಸು, ನಿರೀಕ್ಷೆಯೆಲ್ಲವೂ ಛಿದ್ರ ಛಿದ್ರವಾಗಿದೆ... " ಎಂದು "ಕನ್ನಡಪ್ರಭ "ದೆದುರು ಶಹಾಪುರ ತಾಲೂಕಿನ ಮದ್ದರಕಿ ಗ್ರಾಮ ಮಹಾಂತಗೌಡ ಮಕದಂ ಪಾಟೀಲ್ ನೋವು ಹೊರಹಾಕಿದರು.
ಕಳೆದ ವರ್ಷ ಮೆಣಸಿನಗಿಡಗಳ ಹಾಕಿ ಎಕರೆಗೆ 1 ಲಕ್ಷ ರು. ಗಳಷ್ಟು ಹಾನಿ ಅನುಭವಿಸಿದ್ದ ಮದ್ದರಕಿಯ ಮಹಾಂತಗೌಡರು, ಈ ವರ್ಷ ಹತ್ತಿ ಬೆಳೆಯಲ್ಲಿ ಲಾಭ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ತಮ್ಮ ಹಾಗೂ ಕುಟುಂಬಸ್ಥರ (ಸರ್ವೆ ನಂ.129 ಹಾಗೂ 132) 28 ಎಕರೆ 20 ಗುಂಟೆ ಪ್ರದೇಶದಲ್ಲಿ ಹತ್ತಿ, 14 ಎಕರೆಯಲ್ಲಿ ತೊಗರಿ ಬಿತ್ತನೆ ಮಾಡಿದ್ದರು. ಮುನಿದ ಪ್ರಕೃತಿ ಈ ವರ್ಷವೂ ಅವರ ಕೈಬಿಟ್ಟಿರುವುದು ಆಘಾತ ಮೂಡಿಸಿದೆ.-----------
ಎನ್‌ಡಿಆರ್‌ಎಫ್ ಹಾಗೂ ರಾಜ್ಯ ಸರ್ಕಾರದ ಹೆಕ್ಟೇರ್‌ಗೆ 17 ಸಾವಿರ ರು.ಗಳಷ್ಟು ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಅಲ್ಲದೆ, 2 ಹೆಕ್ಟೇರ್ ಪ್ರದೇಶದಲ್ಲಿನ ಹಾನಿಗೆ ಮಾತ್ರ ಸರ್ಕಾರಗಳ ಪರಿಹಾರ ರೈತರಲ್ಲಿ ದಿಗಿಲು ಮೂಡಿಸಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸೇರಿ ಪ್ರತಿ ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಬೇಕು. ಇದು ಪ್ರದೇಶ- ಹೊಲ ಕ್ಷೇತ್ರಕ್ಕೆ ನಿಗದಿಯಾಗಬಾರದು.: ಮಹಾಂತಗೌಡ ಮಕದಂ ಪಾಟೀಲ್, ಮದ್ದರಕಿ.
----------ಸೈದಾಪುರದ ಗೂಡೂರಿನಲ್ಲಿ ಭೀಮಾ ಹಿನ್ನೀರಿನಿಂದಾಗಿ ಹತ್ತಿ ಬೆಳೆಗಳು ತೇವಾಂಶ ಹೆಚ್ಚಾಗಿ ಒಣಗಿ ಹೋಗಿವೆ. ರೈತಾಪಿ ವರ್ಗ ಕಂಗಾಲಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ತುರ್ತು ಪರಿಹಾರಕ್ಕೆ ಮುಂದಾಗುವ ಮೂಲಕ ರೈತರ ಬದುಕು ಉಳಿಸಬೇಕಿದೆ.
: ಮಲ್ಲಿಕಾರ್ಜುನ ಕಾವಲಿ, ಜಿಲ್ಲಾಧ್ಯಕ್ಷರು, ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆ, ಯಾದಗಿರಿ.