ಸಾರಾಂಶ
ಕನ್ನಡಪ್ರಭ ವಾರ್ತೆ ಯಾದಗಿರಿ
ಮಠಗಳು ಎಂದರೆ ಅವು ಈ ಸಮಾಜದ ಪರಿವರ್ತನಾ ಮತ್ತು ಸಂಸ್ಕೃತಿಯನ್ನು ಉಳಿಸುವ ಧಾರ್ಮಿಕ ಕೇಂದ್ರವಷ್ಟೇ ಅಲ್ಲದೆ, ಭಾವೈಕ್ಯತೆಯ ಸಾರುವ ಶಕ್ತಿಪೀಠಗಳು ಎಂದು ಸಣ್ಣ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪಗೌಡ ದರ್ಶನಾಪುರ ಹೇಳಿದರು.ದೋರನಹಳ್ಳಿ ಗ್ರಾಮದ ಶ್ರೀ ಶಾಂಭವಿ ಮಾತಾ ಚಿಕ್ಕಮಠದ ದಸರಾ ಮಹೋತ್ಸವದ ಅಂಗವಾಗಿ ಬುಧವಾರ ಜರುಗಿದ ಧರ್ಮಸಭೆಯಲ್ಲಿ ಪಾಲ್ಗೊಂಡು ಶ್ರೀ ಶಾಂಭವಿಮಾತೆಯ ದರ್ಶನ ಹಾಗೂ ಪೂಜ್ಯರಿಂದ ಆಶೀರ್ವಾದ ಪಡೆದು ಮಾತನಾಡಿ, ಮಠಗಳು ಎಂದರೆ ಅವು ನಿಸ್ವಾರ್ಥವಾಗಿ ಸಮಾಜಕ್ಕೆ ಸೇವೆ ಸಲ್ಲಿಸುವ ಜ್ಞಾನ ಕೇಂದ್ರಗಳು. ಇಲ್ಲಿನ ಮಠದ ಪೂಜ್ಯರ ಬಗ್ಗೆ ಅವರ ಕಾರ್ಯದ ಬಗ್ಗೆ ನಮಗೆ ಹೆಮ್ಮೆ ಅನಿಸುತ್ತದೆ. ಯಾವುದೇ ಮಠಕ್ಕೆ ಭಕ್ತರ ಭಕ್ತಿಯೇ ನಿಜವಾದ ಆಸ್ತಿ ಮತ್ತು ಶಕ್ತಿಯಾಗಿದೆ. ಹಳ್ಳಿಗಳಲ್ಲಿ ಮಾತ್ರ ಮಠ, ಗುರು, ಶಿಷ್ಯ ಪರಂಪರೆ ಕಾಣಸಿಗುತ್ತದೆ ಎಂದು ಹೇಳಿದರು.
ಯಾದಗಿರಿ ಶಾಸಕ ಚೆನ್ನಾರಡ್ಡಿ ಪಾಟೀಲ್ ತುನ್ನೂರು ಮಾತನಾಡಿ, ನಾನು ಸಾಕಷ್ಟು ಮಠಗಳನ್ನು ನೋಡಿದ್ದೇನೆ, ಆದರೆ ಚಿಕ್ಕಮಠ ಹೆಸರಲ್ಲಿ ಮಾತ್ರ ಚಿಕ್ಕದು, ಇಲ್ಲಿನ ಪೂಜ್ಯರು ನಡೆಸುವ ಕಾರ್ಯ ಮತ್ತು ಭಕ್ತರ ಸಲುವಾಗಿ ಅವರ ಸೇವೆ ದೊಡ್ಡದು. ಈ ಮಠದಲ್ಲಿ ಧರ್ಮ, ಜಾತಿ ಭೇದವಿಲ್ಲದೆ ಎಲ್ಲರೂ ಬರುತ್ತಾರೆ. ಅದಕ್ಕೆ ಇಲ್ಲಿನ ಪೂಜ್ಯರ ನಿರ್ಮಲವಾದ ಮನಸ್ಸು, ನಿಸ್ವಾರ್ಥ ಸೇವೆಯೆ ಕಾರಣವಾಗಿದ್ದು, ಅವರ ಎಲ್ಲಾ ಕಾರ್ಯಗಳಿಗೆ ನಾವು ಸದಾ ಜೊತೆಯಿರುತ್ತೇವೆ ಎಂದರು.ನಂತರ ಧರ್ಮಸಭೆಯ ಅಧ್ಯಕ್ಷತೆ ವಹಿಸಿದ್ದ ಪೀಠಾಧಿಪತಿಗಳಾದ ಶಿವಲಿಂಗರಾಜೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿ, ಧರ್ಮದಲ್ಲಿ ಶಿವಶಕ್ತಿಯ ಆರಾಧನೆ ಮುಖ್ಯವಾಗುತ್ತದೆ. ಶಿವ ಶಾಂತ ಸ್ವರೂಪನಾದರೆ, ಶಕ್ತಿ ಉಗ್ರ ಸ್ವರೂಪ. ಶಕ್ತಿಯೆಂದರೆ ದೇವಿಯಾಗಿದ್ದು ನವರಾತ್ರಿಯಲ್ಲಿ ನವದುರ್ಗೆರೂಪ ತಾಳಿ ದುಷ್ಟ ಶಕ್ತಿಗಳನ್ನು ಸಂಹಾರ ಮಾಡುತ್ತಾಳೆ. ದೇವಿ ಪುರಾಣ ಎಂದರೆ ದೇಹದ ಪುರಾಣವೇ ಆಗಿದ್ದು, ಆರಾಧನೆಯಿಂದ ಮನಸ್ಸು ಸ್ವಚ್ಛವಾಗುತ್ತದೆ ಎಂದು ಹೇಳಿದರು.
ಮಠಾಧೀಶರುಗಳಾದ ಸಿದ್ದೇಶ್ವರ ಶಿವಾಚಾರ್ಯ, ಅಭಿನವ ಮಹಾಂತೇಶ್ವರ ಶಿವಾಚಾರ್ಯ, ಮರುಳ ಮಹಾಂತ ಶಿವಾಚಾರ್ಯ, ಮುನೀಂದ್ರ ಶಿವಾಚಾರ್ಯ, ಕಾಳಹಸ್ತೇಂದ್ರ ಸ್ವಾಮಿ ಆಶೀರ್ವಚನ ನೀಡಿದರು. ರಾಜಕೀಯ ಮುಖಂಡರಾದ ರಾಚನಗೌಡ ಮುದ್ನಾಳ್, ಡಾ.ಭೀಮಣ್ಣ ಮೇಟಿ, ಮಹೇಶರಡ್ಡಿಗೌಡ ಮುದ್ನಾಳ್, ಚಂದ್ರಶೇಖರ ಮಾಗನೂರ, ಡಾ.ಶರಣ ಭೋಪಾಲರಡ್ಡಿ ನಾಯ್ಕಲ್, ಹಣಮೆಗೌಡ ಬೀರನಕಲ್, ಚನ್ನಪ್ಪಗೌಡ ಶಿರವಾಳ, ಬಸ್ಸುಗೌಡ ಬಿಳ್ಹಾರ್, ಉಮಾರಡ್ಡಿ ವಡ್ಡೊಡಗಿ, ಪ್ರಾಸ್ತಾವಿಕವಾಗಿ ವೀರಸಂಗಣ್ಣ ದೇಸಾಯಿ ಮಾತನಾಡಿದರು. ಪುರಾಣಿಕರಾದ ರೇಣುಕ ಶಿವಾಚಾರ್ಯ, ಗಾಯಕ ಗಂಗಾಧರ ಹೊಟ್ಟಿ, ತಬಲಾ ಕಲಾವಿದ ಮಲ್ಲಯ್ಯ ಹಿರೇಮಠ, ನಿರೂಪಕ ನೀಲಕಂಠರಾವ ದೇಸಾಯಿ ಇದ್ದರು.