ಸಾರಾಂಶ
ಕನ್ನಡಪ್ರಭ ವಾರ್ತೆ ಬೆಂಗಳೂರು
ವಾಣಿಜ್ಯ ತೆರಿಗೆ ಇಲಾಖೆಯಲ್ಲಿನ ವಾಣಿಜ್ಯ ತೆರಿಗೆ ಪರಿವೀಕ್ಷಕರ 230 ಹುದ್ದೆಗಳಿಗೆ (ಉಳಿಕೆ ಮೂಲ ವೃಂದ) ಜ.21ರಂದು ನಡೆಯಲಿರುವ ಸ್ಪರ್ಧಾತ್ಮಕ ಪರೀಕ್ಷೆಗೆ 1,60,501 ಅಭ್ಯರ್ಥಿಗಳು ಹೆಸರು ನೋಂದಾಯಿಸಿಕೊಂಡಿದ್ದಾರೆ.
ರಾಜ್ಯದ 29 ಜಿಲ್ಲೆಗಳಲ್ಲಿನ 413 ಉಪ ಕೇಂದ್ರಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಜ.21ರಂದು ಬೆಳಗ್ಗೆ 10ರಿಂದ 11.30ರವರೆಗೆ ಸಾಮಾನ್ಯ ಜ್ಞಾನ ಪತ್ರಿಕೆ-1 ಮತ್ತು ಮಧ್ಯಾಹ್ನ 2ರಿಂದ 4ರ ವರೆಗೆ ಸಾಮಾನ್ಯ ಕನ್ನಡ, ಸಾಮಾನ್ಯ ಇಂಗ್ಲಿಷ್ ಮತ್ತು ಕಂಪ್ಯೂಟರ್ ಜ್ಞಾನದ ಪತ್ರಿಕೆ-2 ಪರೀಕ್ಷೆ ನಿಗದಿಯಾಗಿದೆ.
ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಕ್ರಮವಾಗಿ 1,00,320 ಮತ್ತು 60,330 ಅರ್ಜಿ ಸಲ್ಲಿಸಿದ್ದಾರೆ. ವಿಶೇಷ ಚೇತನರು 2,130 ಹಾಗೂ ತೃತೀಯ ಲಿಂಗಿಗಳು 31 ಜನ ಅರ್ಜಿ ಸಲ್ಲಿಸಿದ್ದಾರೆ.ಜ.20ರಂದು ಮಧ್ಯಾಹ್ನ 2ರಿಂದ 4ರವರೆಗೆ ಕಡ್ಡಾಯ ಕನ್ನಡ ಪರೀಕ್ಷೆ ನಿಗದಿಯಾಗಿದೆ ಎಂದು ಕೆಪಿಎಸ್‌ಸಿ ತಿಳಿಸಿದೆ.ಕಟ್ಟುನಿಟ್ಟಿನ ಕ್ರಮಗಳು:
ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್ ಮೂಲಕ ಅಭ್ಯರ್ಥಿಗಳನ್ನು ತಪಾಸಣೆ ನಡೆಸುವ ಕಾರಣ ಪರೀಕ್ಷಾ ಕೇಂದ್ರಕ್ಕೆ ಎರಡು ತಾಸುಗಳ ಮುಂಚೆ ಹಾಜರಿರಬೇಕು. ಪಾರದರ್ಶಕವಲ್ಲದ ನೀರಿನ ಬಾಟಲಿ ತರುವಂತಿಲ್ಲ.
ಮುಖ, ಕಿವಿ ಮುಚ್ಚುವ ಮಾಸ್ಕ್ ಧರಿಸಿ ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುವಂತಿಲ್ಲ. ಬ್ಲೂಟೂತ್, ಮೊಬೈಲ್, ವೈರ್‌ಲೆಸ್ ಸೇರಿದಂತೆ ಎಲ್ಲ ರೀತಿಯ ಎಲೆಕ್ಟ್ರಾನಿಕ್ಸ್ ಉಪಕರಣಗಳನ್ನು ನಿಷೇಧಿಸಲಾಗಿದೆ.
ತಾಳಿ ಮತ್ತು ಕಾಲುಂಗುರ ಹೊರತುಪಡಿಸಿ ಬೇರಾವುದೇ ಆಭರಣಗಳನ್ನು ಧರಿಸುವಂತಿಲ್ಲ. ಅಭ್ಯರ್ಥಿಗಳು ಸರಳ ಉಡುಪು ಮತ್ತು ಚಪ್ಪಲಿ ಧರಿಸಿ ಪರೀಕ್ಷೆಗೆ ಹಾಜರಾಗಲು ಕೆಪಿಎಸ್‌ಸಿ ಸೂಚನೆ ನೀಡಿದೆ.