ಕನ್ನಡಪ್ರಭ ವಾರ್ತೆ ಬಾಗಲಕೋಟೆ

16 ಬಾಗಲಕೋಟೆ ಹಾಗೂ ಬೆಳಗಾವಿ ಜಿಲ್ಲೆಯ ಘಟಪ್ರಭಾ ನದಿಯ ಅವಲಂಭಿತ ಗ್ರಾಮಗಳ ಹಾಗೂ ಶ್ರೀ ರಾಮೇಶ್ವರ ಏತ ನೀರಾವರಿ ಯೋಜನೆಯ ಅವಲಂಬಿತ ಗ್ರಾಮಗಳ ಜನಜಾನುವಾರುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಒಟ್ಟು 1.60 ಟಿಎಂಸಿ ನೀರನ್ನು ಮೇ 18 ರಂದು ಬಡುಗಡೆಗೊಳಿಸುವಂತೆ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಜಾನಕಿ ಕೆ.ಎಂ ಆದೇಶ ಹೊರಡಿಸಿದ್ದಾರೆ.

ಜಲಾಶಯದಲ್ಲಿ ಸಂಗ್ರಹಿತ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಹರಿಬಿಡುವಂತೆ ಹಾಗೂ ಬೇರಾವುದೇ ಉದ್ದೇಶಕ್ಕಾಗಲಿ, ಬೇರೆ ಕಾಲುವೆಗಳ ಮೂಲಕವಾಗಲಿ ನೀರನ್ನು ಹರಿಬಿಡದಂತೆ ನೋಡಿಕೊಳ್ಳಲು ಮತ್ತು ಅನಧಿಕೃತ ಪಂಪಸೆಟ್ ಕಂಡು ಬಂದಲ್ಲಿ ಕರ್ನಾಟಕ ನೀರಾವರಿ ಕಾಯ್ದೆ-1965ರಂತೆ ಕ್ರಮ ಕೈಗೊಳ್ಳಲು ಅಧೀಕ್ಷಕ ಅಭೀಯಂತರರು ಕ.ನೀ.ನಿ.ನಿ, ಜಿ.ಆರ್.ಬಿ.ಸಿ.ಸಿ, ವೃತ್ತ, ಹಿಡಕಲ್ ಡ್ಯಾಮ್ ಇವರಿಗೆ ಆದೇಶದಲ್ಲಿ ಸೂಚನೆ ನೀಡಿದ್ದಾರೆ.

ಹಿಡಕಲ್ ಜಲಾಶಯದಿಂದ ಬಿಡುಗಡೆಗೊಳಿಸಿದ ನೀರನ್ನು ಯಾವುದೇ ಕಾರಣಕ್ಕೂ ಕೃಷಿಗೆ ಬಳಸಬಾರದು. ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಕೆ ಮಾಡುವ ಕುರಿತುವಿವಿಧ ಇಲಾಖೆಗಳ ಅಧಿಕಾರಿಗಳ ತಂಡ ರಚನೆ ಮಾಡಿ ಅದರ ಸದುಪಯೋಗ ಕುರಿತು ಸೂಕ್ತ ನಿಗಾ ವಹಿಸಬೇಕು. ಅಲ್ಲದೇ ದೈನಂದಿನ ವರದಿ ಪಡೆಯುವುದು. ನೀರಿನ ಸದ್ಬಳಕೆ ಕುರಿತು ಸಾಕ್ಷ್ಯ ಚಿತ್ರಗಳನ್ನು ಪಡೆದು ಸಲ್ಲಿಸಲು ಸೂಚಿಸಿದ್ದಾರೆ.

ಹಿಡಕಲ್ ಜಲಾಶಯದಿಂದ ನದಿ ಮೂಲಕ ಬಿಡುಗಡೆಗೊಳಿಸುವ ನೀರು ಉದ್ದೇಶಿತ ಸ್ಥಳ ತಲುಪುವಂತೆ ಸಂಬಂಧಪಟ್ಟ ಸ್ಥಳೀಯ ಸಂಸ್ಥೆಗಳು ಮತ್ತು ನೀರಾವರಿ ಇಲಾಖೆ ಅಧಿಕಾರಿಗಳು ನೋಡಿಕೊಳ್ಳಬೇಕು ಹಾಗೂ ಬೇರಾವುದೇ ಕಾರಣಗಳಿಂದಾಗಿ ನೀರು ಪೋಲಾಗದಂತೆ ಕ್ರಮ ಜರುಗಿಸಬೇಕು. ಪ್ರಸ್ತಾಪಿತ ಸ್ಥಳದಲ್ಲಿ ನೀರು ಭರ್ತಿಯಾದಲ್ಲಿ ಅಥವಾ ನೀರು ಸಾಕೆನಿಸಿದಲ್ಲಿ ಕೂಡಲೇ ನೀರಿನ ಹರಿವು ಸ್ಥಗಿತಗೊಳಿಸಲು ತಕ್ಷಣ ಕ್ರಮ ಜರುಗಿಸಬೇಕು. ಉದ್ದೇಶಿತ ಸ್ಥಳಗಳಿಗೆ ನೀರು ತಲುಪಿದ ಬಗ್ಗೆ ಹಾಗೂ ಉದ್ದೇಶಿತ ಸ್ಥಳದಲ್ಲಿ ನೀರನ್ನು ಸಂಗ್ರಹಿಸಿದ ಬಗ್ಗೆ ಪ್ರತಿ ದಿನ ತಪ್ಪದೇ ವರದಿ ಸಲ್ಲಿಸಬೇಕು.


ಜಿಲ್ಲಾಧಿಕಾರಿಗಳು ದೈನಂದಿನ ವರದಿ ಪಡೆದು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಬೇಕು. ಹೆಸ್ಕಾಂ ಅಧಿಕಾರಿಗಳು ನೀರು ಬಿಡುವ ದಿನಗಳಲ್ಲಿ ನದಿಗೆ ತಾಗಿದಂತೆ ಅಳವಡಿಸಿರುವ ರೈತರ ವಿದ್ಯುತ್ ಪಂಪಶೆಟ್‌ಗಳ ಸಂಪರ್ಕವನ್ನು ಕಡಿತಗೊಳಿಸಬೇಕು. ಸೋಲಾರ್ ಆಧಾರಿತ ಮೋಟಾರ್, ಜನರೇಟರ್‌ಗಳ ಸಂಪರ್ಕ ಸಹ ಕಡಿತಗೊಳಿಸಲು ಕ್ರಮ ವಹಿಸಬೇಕು. ವಿದ್ಯುತ್ ಸಂಪರ್ಕ ಕಡಿತಗೊಳಿಸಿದ ಬಗ್ಗೆ ಹಸ್ಕಾಂ ಅಧಿಕಾರಿಗಳಿಂದ ಪ್ರಮಾಣ ಪತ್ರ ಪಡೆಯಬೇಕು. ಈ ಬಗ್ಗೆ ಜಿಲ್ಲಾಧಿಕಾರಿಗಳು ಸಹ ಸೂಕ್ತ ನಿಗಾ ವಹಿಸಲು ಆದೇಶದಲ್ಲಿ ತಿಳಿಸಿದ್ದಾರೆ.

ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಅವಶ್ಯವಿದ್ದಲ್ಲಿ ಜಿಲ್ಲಾ ದಂಡಾಧಿಕಾರಿಗಳು ಭಾರತೀಯ ನಾಗರೀಕ ಸುರಕ್ಷಾ ಸಂಹಿತೆ-2023 ರ ಕಲಂ 163ನ್ನು ಜಾರಿಗೊಳಿಸಲು ಕ್ರಮ ಕೈಗೊಳ್ಳಬೇಕು. ಬಿಡುಗಡೆಗೊಳಿಸಲಾದ ನೀರು ಉದ್ದೇಶಿತ ಕಾರ್ಯಕ್ಕೆ ಮಾತ್ರ ಉಪಯೋಗವಾಗುವಂತೆ ಸದಾಕಾಲ (24*7) ನೋಡಿಕೊಳ್ಳಲು ಕಂದಾಯ, ಪೊಲೀಸ್, ನೀರಾವರಿ, ಸ್ಥಳೀಯ ಸಂಸ್ಥೆಗಳ ಒಂದು ಕಾರ್ಯಪಡೆರಚಿಸಿ ಅದಕ್ಕೆ ಜವಾಬ್ದಾರಿ ವಹಿಸಿ ಮೇಲುಸ್ತುವಾರಿಯನ್ನು ಜಿಲ್ಲಾಧಿಕಾರಿಗಳು ನೋಡಿಕೊಳ್ಳಬೇಕು. ಅಧಿಕಾರಿಗಳೊಂದಿಗೆ ಸಮನ್ವಯತೆ ಸಾಧಿಸುವಂತೆ ಆದೇಶದಲ್ಲಿ ತಿಳಿಸಿದ್ದಾರೆ.