ದೀಪಾವಳಿ ಹಬ್ಬದ ಸಂಭ್ರಮ ಮುಗಿದಿದೆ. ಮನೆ, ಅಂಗಡಿ-ಮುಂಗಟ್ಟುಗಳಲ್ಲಿ ಪೂಜೆ, ಅಲಂಕಾರದ ಸಂಭ್ರಮವೂ ತಣ್ಣಗಾಗಿದೆ. ಆದರೆ, ಹಬ್ಬದ ಸಂಭ್ರಮದ ಬೆನ್ನಲ್ಲೇ ನಗರಕ್ಕೆ ಕಸದ ಸಂಕಟ ಎದುರಾಗಿದೆ.

ಅಜೀಜಅಹ್ಮದ ಬಳಗಾನೂರ

ಹುಬ್ಬಳ್ಳಿ:

ದೀಪಾವಳಿ ಹಬ್ಬದ ಸಂಭ್ರಮ ಮುಗಿದಿದೆ. ಮನೆ, ಅಂಗಡಿ-ಮುಂಗಟ್ಟುಗಳಲ್ಲಿ ಪೂಜೆ, ಅಲಂಕಾರದ ಸಂಭ್ರಮವೂ ತಣ್ಣಗಾಗಿದೆ. ಆದರೆ, ಹಬ್ಬದ ಸಂಭ್ರಮದ ಬೆನ್ನಲ್ಲೇ ನಗರಕ್ಕೆ ಕಸದ ಸಂಕಟ ಎದುರಾಗಿದೆ.

ಹೂವು, ಬಾಳೆಗಿಡ, ತಳಿರು-ತೋರಣ ಸೇರಿದಂತೆ ಪೂಜಾ ಸಾಮಗ್ರಿ ಬಳಸಿ ಎಲ್ಲೆಂದರಲ್ಲಿ ಎಸೆದ ಪರಿಣಾಮ ಹುಬ್ಬಳ್ಳಿ-ಧಾರವಾಡದ ಹಲವು ಬಡಾವಣೆಗಳು ತ್ಯಾಜ್ಯದ ರಾಶಿಯಿಂದ ತುಂಬಿವೆ. ಕೇವಲ 2-3 ದಿನಗಳಲ್ಲಿ 1,900 ಟನ್‌ಗೂ ಅಧಿಕ ತ್ಯಾಜ್ಯ ಸಂಗ್ರಹವಾಗಿದ್ದು, ಅದನ್ನು ವಿಲೇವಾರಿ ಮಾಡಲು ಮಹಾನಗರ ಪಾಲಿಕೆ ಪೌರಕಾರ್ಮಿಕರು ಹರಸಾಹಸ ಪಡುವಂತಾಗಿದೆ.

ದೀಪಾವಳಿ ಎಂದರೆ ಮನೆಗಳಷ್ಟೇ ಅಲ್ಲ, ವ್ಯಾಪಾರ ವಹಿವಾಟಿನ ಕೇಂದ್ರಗಳೂ ಸಿಂಗಾರಗೊಳ್ಳುವ ಹಬ್ಬ. ಬಣ್ಣ-ಬಣ್ಣದ ಹೂವು, ಬಾಳೆಗೊನೆ, ಮಾವಿನ ಎಲೆಗಳ ತೋರಣಗಳಿಂದ ಮನೆ, ಅಂಗಡಿ-ಮುಂಗಟ್ಟು ಅಲಂಕರಿಸಿ ಪೂಜೆ ಸಲ್ಲಿಸುವುದು ಸಂಪ್ರದಾಯ. ಅದರಂತೆ ಭಾನುವಾರ, ಸೋಮವಾರ ಮನೆ ಹಾಗೂ ಸೋಮವಾರ, ಮಂಗಳವಾರ ವ್ಯಾಪಾರ ಮಳಿಗೆಗಳಲ್ಲಿ ಪೂಜೆ ನೆರವೇರಿಸಲಾಗಿದೆ. ಆದರೆ, ಪೂಜೆಯ ಬಳಿಕ ಬಳಕೆಯಾದ ಅಲಂಕಾರಿಕ ಸಾಮಗ್ರಿಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡುವ ಬದಲು ಕಸದ ತೊಟ್ಟಿ, ರಸ್ತೆ ಬದಿ ಹಾಗೂ ಫುಟ್‌ಪಾತ್‌ ಮೇಲೆ ಎಸೆಯಲಾಗಿದೆ. ಪರಿಣಾಮ, ಸ್ವಚ್ಛವಾಗಿರಬೇಕಾದ ರಸ್ತೆಗಳು ಕಸದ ರಾಶಿಯಿಂದ ಕಳೆಗುಂದಿವೆ.

ಎಲ್ಲೆಲ್ಲೂ ಕಸದ ರಾಶಿ:

ನಗರದ ಪ್ರಮುಖ ವಾಣಿಜ್ಯ ಪ್ರದೇಶಗಳಾದ ದಾಜಿಬಾನ್ ಪೇಟೆ ಮಾರುಕಟ್ಟೆ, ದುರ್ಗದ ಬೈಲ್, ರಾಣಿ ಚೆನ್ನಮ್ಮ ವೃತ್ತ, ಸಾಯಿ ಮಂದಿರ, ಸರ್ವೋದಯ ವೃತ್ತ, ಸಬ್‌ಅರ್ಬನ್ ಪೊಲೀಸ್ ಠಾಣೆ ಸುತ್ತಮುತ್ತ, ಕಮರಿಪೇಟೆ, ಚನ್ನಪೇಟೆ, ಬಿಎಸ್‌ಎನ್‌ಎಲ್ ಕಚೇರಿ ರಸ್ತೆ, ಸಿಬಿಟಿ ಸುತ್ತಮುತ್ತ, ಹೊಸೂರು, ಸಿದ್ದೇಶ್ವರ ರಸ್ತೆ ಹಾಗೂ ಮ್ಯಾದಾರ ಓಣಿಗಳಲ್ಲಿ ತ್ಯಾಜ್ಯದ ರಾಶಿ ಕಂಡುಬಂದಿದೆ. ಮೂರುಸಾವಿರ ಮಠದ ಸುತ್ತಮುತ್ತ, ಉಣಕಲ್ಲ ಕ್ರಾಸ್, ವಿದ್ಯಾನಗರ, ನವನಗರ ಸೇರಿದಂತೆ ಧಾರವಾಡದ ಹಲವು ಪ್ರದೇಶಗಳಲ್ಲಿಯೂ ಕಸದ ವಿಲೇವಾರಿ ಸಮರ್ಪಕವಾಗಿ ನಡೆದಿಲ್ಲ.

ಕಳೆದ 2-3 ದಿನಗಳಿಂದ ಬಿಡುವಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಮಂಗಳವಾರ, ಬುಧವಾರವೂ ಬೆಳಗ್ಗೆಯಿಂದಲೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ಆದರೂ ಹೆಚ್ಚುವರಿ ತ್ಯಾಜ್ಯದ ಪ್ರಮಾಣ ಅಧಿಕವಾಗಿರುವುದರಿಂದ ಎಲ್ಲ ಪ್ರದೇಶಗಳಲ್ಲಿನ ಕಸ ತೆರವುಗೊಳಿಸುವುದು ಸಾಧ್ಯವಾಗಿಲ್ಲ. ಹೀಗಾಗಿ ನಗರದ ಹಲವೆಡೆ ಕಸದ ರಾಶಿ ಜನರ ಕಣ್ಣಿಗೆ ರಾಚುತ್ತಿದೆ. ತ್ಯಾಜ್ಯ ಸಂಗ್ರಹಣೆ ಮತ್ತು ಸಾಗಣೆ ವ್ಯವಸ್ಥೆಯ ಮೇಲೂ ಹಬ್ಬದ ಹೆಚ್ಚುವರಿ ಹೊರೆ ಬಿದ್ದಿದೆ.

ನಿತ್ಯದ ಕಸಕ್ಕಿಂತ ಹೆಚ್ಚುವರಿ ಹೊರೆ:

ಸಾಮಾನ್ಯ ದಿನಗಳಲ್ಲಿ ಹುಬ್ಬಳ್ಳಿಯಲ್ಲಿ 250ರಿಂದ 300 ಟನ್ ಹಾಗೂ ಧಾರವಾಡದಲ್ಲಿ 120ರಿಂದ 150 ಟನ್ ಸೇರಿ ಪ್ರತಿದಿನ ಸರಾಸರಿ 400ರಿಂದ 450 ಟನ್ ತ್ಯಾಜ್ಯ ಸಂಗ್ರಹವಾಗುತ್ತದೆ. ಆದರೆ, ಹಬ್ಬದ ಸಂದರ್ಭದಲ್ಲಿ ಹುಬ್ಬಳ್ಳಿಯಲ್ಲಿ ಹೆಚ್ಚುವರಿಯಾಗಿ 100ರಿಂದ 150 ಟನ್ ಹಾಗೂ ಧಾರವಾಡದಲ್ಲಿ 50ರಿಂದ 70 ಟನ್ ತ್ಯಾಜ್ಯ ಉತ್ಪತ್ತಿಯಾಗುತ್ತದೆ. ದೀಪಾವಳಿ ಹಿನ್ನೆಲೆಯಲ್ಲಿ ನಿತ್ಯದ ತ್ಯಾಜ್ಯದ ಜತೆಗೆ 200 ಟನ್‌ಗೂ ಅಧಿಕ ಹೆಚ್ಚುವರಿ ಕಸ ಸಂಗ್ರಹವಾಗಿದೆ. ಒಟ್ಟಾರೆ ಮೂರು ದಿನಗಳಲ್ಲಿ 1,900 ಟನ್‌ಗೂ ಅಧಿಕ ತ್ಯಾಜ್ಯ ಸಂಗ್ರಹವಾಗಿರುವುದು ವಿಲೇವಾರಿ ವ್ಯವಸ್ಥೆಗೆ ಸವಾಲಾಗಿದೆ.

2-3 ದಿನಗಳಲ್ಲಿ ತೆರವು:

ದೀಪಾವಳಿ ಹಿನ್ನೆಲೆಯಲ್ಲಿ ಹೆಚ್ಚುವರಿ ತ್ಯಾಜ್ಯ ಸಂಗ್ರಹವಾಗಿರುವುದರಿಂದ ಕೆಲವು ಪ್ರದೇಶಗಳಲ್ಲಿ ವಿಲೇವಾರಿ ಕಾರ್ಯದಲ್ಲಿ ವಿಳಂಬವಾಗಿದೆ. ಈಗಾಗಲೇ ಪೌರಕಾರ್ಮಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದು, ಮುಂದಿನ 2-3 ದಿನಗಳಲ್ಲಿ ಮಹಾನಗರದ ಎಲ್ಲೆಡೆ ಸಂಗ್ರಹವಾಗಿರುವ ತ್ಯಾಜ್ಯವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಘನ ತಾಜ್ಯ ವಸ್ತು ನಿರ್ವಹಣೆಯ ಕಾರ್ಯನಿರ್ವಾಹಕ ಅಭಿಯಂತರ ಸಂತೋಷಕುಮಾರ ಯರಂಗಳಿ "ಕನ್ನಡಪ್ರಭ "ಕ್ಕೆ ತಿಳಿಸಿದ್ದಾರೆ.

ಎಲ್ಲರೂ ದೀಪಾವಳಿ ಹಬ್ಬವನ್ನು ಮನೆಯಲ್ಲಿ ಆಚರಿಸಿದರೆ ನಾವು ಬೆಳ್ಳಂಬೆಳಿಗ್ಗೆ ತ್ಯಾಜ್ಯ ತೆರವುಗೊಳಿಸುವುದರಲ್ಲೇ ಕಾಲ ಕಳೆಯುವಂತಾಗಿದೆ. ಪ್ರತಿದಿನಕ್ಕಿಂತ ಮೂರು-ನಾಲ್ಕು ಪಟ್ಟು ತ್ಯಾಜ್ಯ ಸಂಗ್ರಹವಾಗಿದೆ. ಇದನ್ನು ತೆರುವುಗೊಳಿಸುವಲ್ಲಿ ಸಾಕಾಗಿ ಹೋಗಿದೆ.

ಸರ್ವಮಂಗಳಾ, ಅಂಬಿಕಾ ಪೌರಕಾರ್ಮಿಕರು