ಪ್ರತಿ ತಾಲೂಕಿಗೆ 1 ಶಿಶುಪಾಲನಾ ಕೇಂದ್ರ: ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌

| Published : Sep 21 2024, 01:45 AM IST

ಪ್ರತಿ ತಾಲೂಕಿಗೆ 1 ಶಿಶುಪಾಲನಾ ಕೇಂದ್ರ: ಜಿಪಂ ಸಿಇಒ ಶೇಖ್‌ ತನ್ವೀರ್‌ ಆಸೀಫ್‌
Share this Article
  • FB
  • TW
  • Linkdin
  • Email

ಸಾರಾಂಶ

ಶಿಶುಪಾಲನಾ ಕೇಂದ್ರಗಳು 6 ತಿಂಗಳಿಂದ 6 ವರ್ಷದ ಒಳಗಿನ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಹಾಗೂ ಸುರಕ್ಷತೆ ಒದಗಿಸುವುದು. ಮಕ್ಕಳ ಪೋಷಣೆ ಹಾಗೂ ಆರೋಗ್ಯದ ಸ್ಥಿತಿ ವಿಚಾರಿಸುವ ಕೆಲಸವಾಗಬೇಕು. ಮಕ್ಕಳ ದೈಹಿಕ ಅರಿವಿನ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಯನ್ನು ಉತ್ತೇಜಿಸುವುದು ಶಿಶುಪಾಲನಾ ಕೇಂದ್ರದ ಉದ್ದೇಶವಾಗಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಜಿಲ್ಲೆಯಲ್ಲಿ ಒಟ್ಟು 4 ಶಿಶುಪಾಲನಾ ಕೇಂದ್ರಗಳಿದ್ದು, ಪ್ರತಿ ತಾಲೂಕಿಗೆ 1 ಶಿಶುಪಾಲನ ಕೇಂದ್ರ ಸ್ಥಾಪಿಸಲು ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಶೇಖ್ ತನ್ವೀರ್ ಅಸಿಫ್ ತಿಳಿಸಿದರು.

ಶುಕ್ರವಾರ ಜಿಲ್ಲಾ ಪಂಚಾಯ್ತಿ ಮಿನಿ ಸಭಾಂಗಣದಲ್ಲಿ ನಡೆದ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಶುಪಾಲನಾ ಕೇಂದ್ರಗಳು 6 ತಿಂಗಳಿಂದ 6 ವರ್ಷದ ಒಳಗಿನ ಮಕ್ಕಳಿಗೆ ಪೂರಕ ಪೌಷ್ಟಿಕ ಆಹಾರ ಹಾಗೂ ಸುರಕ್ಷತೆ ಒದಗಿಸುವುದು. ಮಕ್ಕಳ ಪೋಷಣೆ ಹಾಗೂ ಆರೋಗ್ಯದ ಸ್ಥಿತಿ ವಿಚಾರಿಸುವ ಕೆಲಸವಾಗಬೇಕು. ಮಕ್ಕಳ ದೈಹಿಕ ಅರಿವಿನ ಸಾಮಾಜಿಕ ಹಾಗೂ ಭಾವನಾತ್ಮಕ ಬೆಳವಣಿಗೆಯನ್ನು ಉತ್ತೇಜಿಸುವುದು ಶಿಶುಪಾಲನಾ ಕೇಂದ್ರದ ಉದ್ದೇಶವಾಗಿದೆ ಎಂದು ವಿವರಿಸಿದರು.

ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶಿಶುಪಾಲನ ಕೇಂದ್ರಗಳು ಮಕ್ಕಳಿಗಾಗಿ ಕೈಗೊಳ್ಳಬೇಕಾಗಿರುವ ಚಟುವಟಿಕೆಗಳ ಬಗ್ಗೆ ಪಟ್ಟಿ ತಯಾರಿಸಿ ಅದರಂತೆ ಮಕ್ಕಳ ಚಟುವಟಿಕೆಗಳು ನಡೆಯಬೇಕು. ಜೊತೆಗೆ ಶಿಶುಪಾಲನಾ ಕೇಂದ್ರಗಳಲ್ಲಿ ಬೇಸಿಗೆ ಶಿಬಿರವನ್ನು ಆಯೋಜಿಸಬೇಕು. ಶಿಶುಪಾಲನಾ ಕೇಂದ್ರಗಳಿಗೆ ಆಯಾ ಸಿಡಿಪಿಒಗಳು ಆಗಾಗ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಎಂದರು.

ಶಿಶುಪಾಲನಾ ಕೇಂದ್ರಕ್ಕೆ ಸ್ವಯಂ ಸೇವಾ ಸಂಸ್ಥೆಯವರು ಶಿಕ್ಷಕಿಯರನ್ನು ನೇಮಕಾತಿ ಮಾಡುವಾಗ ಶಾಲಾ ಪೂರ್ವ ಶಿಕ್ಷಣ ತರಬೇತಿ ಪಡೆದಿರುವವರಿಗೆ ಆದ್ಯತೆ ನೀಡಬೇಕು. ಶಾಲಾ ಪೂರ್ವ ಶಿಕ್ಷಣ ತರಬೇತಿ ಪಡೆಯದೆ ಆಯ್ಕೆಗೊಂಡ ಶಿಕ್ಷಕಿಯರಿಗೆ ಶಾಲಾ ಪೂರ್ವ ಶಿಕ್ಷಣ ತರಬೇತಿ ನೀಡಬೇಕು ಎಂದು ಸೂಚಿಸಿದರು.

ಸಾಂತ್ವನ ಯೋಜನೆ ಬಗ್ಗೆ ಮಾತನಾಡಿದ ಅವರು, ಕೌಟುಂಬಿಕ ದೌರ್ಜನ್ಯಕ್ಕೊಳಗಾದ, ಸಮಾಜದಿಂದ ನಿಂದನೆಗೊಳಗಾದ, ದೌರ್ಜನ್ಯ ಮತ್ತು ಅತ್ಯಾಚಾರಕ್ಕೆ ಒಳಪಟ್ಟ ಮಹಿಳೆಯರಿಗೆ ತಾತ್ಕಾಲಿಕ ಆಶ್ರಯ ಕಲ್ಪಿಸುವುದು, ಕಾನೂನಿನ ನೆರವು ಹಾಗೂ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಂತ್ವನ ಯೋಜನೆ ನೆರವಾಗುವುದು ಈ ಯೋಜನೆಯ ಉದ್ದೇಶವಾಗಿದೆ ಎಂದರು.

ಸಾಂತ್ವನ ಯೋಜನೆಯಡಿ 2023-24ನೇ ಸಾಲಿನಲ್ಲಿ ದಾಖಲಾಗಿರುವ ಪ್ರಕರಣಗಳ ಪರಿಶೀಲನೆ ಮಾಡಿದರು. ಜಿಲ್ಲೆಯಲ್ಲಿ ಒಟ್ಟು 6 ಸಾಂತ್ವನ ಕೇಂದ್ರಗಳಿದ್ದು, ಸಾಂತ್ವನ ಕೇಂದ್ರಗಳಲ್ಲಿ ದಾಖಲಾಗುವ ಪ್ರಕರಣಗಳು ಇತ್ಯರ್ಥವಾಗುವ ಮುನ್ನ ಗಂಭೀರ ಪ್ರಕರಣಗಳು ಎಫ್‌ಐಆರ್ ಆಗಬೇಕು ಎಂದರು.

ಸಾಂತ್ವನ ಕೇಂದ್ರಗಳನ್ನು ನಡೆಸುವ ಅರ್ಹ ಸಂಸ್ಥೆಯು ಮೂಲಭೂತ ಸೌಲಭ್ಯಗಳನ್ನು ಹೊಂದಿರಬೇಕು. ಸಂಸ್ಥೆಯು ನೋಂದಣಿಯಾಗಿ ಕನಿಷ್ಠ 3 ವರ್ಷಗಳಾಗಿದ್ದು, ಮಹಿಳಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸುತ್ತಿರಬೇಕು, ಸಂಸ್ಥೆಯು ಪ್ರತಿವರ್ಷ ನವೀಕರಣಗೊಂಡಿರಬೇಕು. ಲೆಕ್ಕಪತ್ರ ದಾಖಲೆಗಳು ಹಾಗೂ ವಾರ್ಷಿಕ ಪ್ರಗತಿ ವರದಿಗಳನ್ನು ಕ್ರಮಬದ್ದವಾಗಿ ಸೌಲಭ್ಯಗಳನ್ನು ಹೊಂದಿರಬೇಕು, ಆರ್ಥಿಕವಾಗಿ ಸದೃಢವಾಗಿರಬೇಕು, ಸ್ವಯಂ ಸೇವಾ ಸಂಸ್ಥೆಯು ಮಹಿಳೆಯರ ಸಮಸ್ಯೆಗಳಿಗೆ ಸ್ಪಂದಿಸಿ ಪರಿಹಾರ ನೀಡುವಲ್ಲಿ ಅನುಭವ ಹೊಂದಿರಬೇಕು. ಮಹಿಳೆಯರಿಗೆ ರಕ್ಷಣೆ ನೀಡಲು ಸ್ವಯಂ ಸೇವಾ ಸಂಸ್ಥೆಯು ಸ್ವಂತ ಸ್ಥಳ ಹೊಂದಿಲ್ಲದಿದ್ದಲ್ಲಿ ಬಾಡಿಗೆ ಕಟ್ಟಡದ ವ್ಯವಸ್ಥೆ ಮಾಡುವಂತಿರಬೇಕು ಎಂದು ನುಡಿದರು.

ವರದಕ್ಷಿಣೆ ನಿಷೇಧ ಕಾಯ್ದೆಯಡಿ 2024 ನೇ ಸಾಲಿನಲ್ಲಿ ಜನವರಿ ಮಾಹೆಯಿಂದ ಆಗಸ್ಟ್ ವರೆಗೆ ಒಟ್ಟು 47 ಪ್ರಕರಣಗಳು ದಾಖಲಾಗಿದ್ದು, 27 ಪ್ರಕರಣವು ಇತ್ಯರ್ಥಗೊಂಡಿದ್ದು, ಬಾಕಿ 20 ಪ್ರಕರಣಗಳು ಉಳಿದಿದ್ದು ಅವುಗಳ ಬಗ್ಗೆ ಮಾಹಿತಿ ಪಡೆದರು.

ಸಭೆಯಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ನ್ಯಾಯಧೀಶರು ಎಂ ಆನಂದ್, ಅಪರ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ತಿಮ್ಮಯ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಎಸ್ ರಾಜಮೂರ್ತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಮೋಹನ್, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಹೆಚ್ ಶಿವರಾಮೇಗೌಡ, ವಿವಿಧ ತಾಲೂಕಿನ ಸಿಡಿಪಿಒಗಳಾದ ಯೋಗೇಶ್, ಕೃಷ್ಣಮೂರ್ತಿ, ಎಚ್ ಕೆ ಕುಮಾರಸ್ವಾಮಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.