ಸಾರಾಂಶ
ಬೆಂಗಳೂರು : ರಾಜ್ಯ ಪೊಲೀಸ್ ಇಲಾಖೆ ಮತ್ತು ಭಾರತೀಯ ಸ್ಟೇಟ್ ಬ್ಯಾಂಕ್(ಎಸ್‌ಬಿಐ) ಬೆಂಗಳೂರು ಘಟಕದ ಸಹಯೋಗದಲ್ಲಿ ಆಯೋಜಿಸಿದ್ದ 2ನೇ ಆವೃತ್ತಿಯ ಕರ್ನಾಟಕ ರಾಜ್ಯ ಪೊಲೀಸ್ ಓಟ (ಕೆಎಸ್‌ಪಿ ರನ್) ಬೆಂಗಳೂರು ನಗರ ಸೇರಿ ರಾಜ್ಯಾದ್ಯಂತ 1 ಲಕ್ಷ ಮಂದಿ ಉತ್ಸಾಹದಿಂದ ಪಾಲ್ಗೊಂಡಿದ್ದರು.
ನಗರದ ವಿಧಾನಸೌಧದ ಎದುರು ಭಾನುವಾರ ಮುಂಜಾನೆ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಘೋಷವಾಕ್ಯದಡಿ ದೈಹಿಕ ಸದೃಢತೆ, ಸೈಬರ್ ಅಪರಾಧ, ಮಾದಕವಸ್ತು ಮುಕ್ತ ಕರ್ನಾಟಕ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಆಯೋಜಿಸಿದ್ದ ರಾಜ್ಯ ಪೊಲೀಸ್ ಓಟಕ್ಕೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಸಿರು ನಿಶಾನೆ ತೋರಿಸುವ ಮುಖಾಂತರ ಚಾಲನೆ ನೀಡಿದರು.
ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ನಗರ ಪೊಲೀಸ್ ಆಯುಕ್ತ ಬಿ.ದಯಾನಂದ, ಸಿಬಿಐ ಬೆಂಗಳೂರು ವಲಯದ ಮುಖ್ಯ ಪ್ರಧಾನ ವ್ಯವಸ್ಥಾಪಕಿ ಜೂಹಿ ಸ್ಮಿತಾ ಸಿನ್ಹಾ, ಸಿಐಡಿ ಡಿಜಿ ಡಾ.ಎಂ.ಎ.ಸಲೀಂ ಸೇರಿದಂತೆ ಹಿರಿಯ ಅಧಿಕಾರಿಗಳು ಗೃಹ ಸಚಿವರಿಗೆ ಸಾಥ್ ನೀಡಿದರು.
ಈ ರಾಜ್ಯ ಪೊಲೀಸ್ ಓಟದಲ್ಲಿ ಬೆಂಗಳೂರು ನಗರ 20 ಸಾವಿರ, ಮೈಸೂರು ನಗರ 10 ಸಾವಿರ, ಹುಬ್ಬಳ್ಳಿ-ಧಾರವಾಡ 8,500 ಮಂದಿ ಸೇರಿದಂತೆ ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. ಪೊಲೀಸರು, ಎಸ್‌ಬಿಐ ನೌಕರರು ಮತ್ತು ಸಾರ್ವಜನಿಕರು ಎಂಬ ಮೂರು ವಿಭಾಗಗಳಲ್ಲಿ 5 ಕಿ.ಮೀ. ಮತ್ತು 10 ಕಿ.ಮೀ. ಓಟ ಸ್ಪರ್ಧೆ ನಡೆಯಿತು. ಎರಡೂ ಓಟಗಳು ವಿಧಾನಸೌಧದಿಂದ ಆರಂಭವಾಗಿ ಕೆ.ಆರ್.ವೃತ್ತ, ನೃಪತುಂಗ ರಸ್ತೆ, ಕಸ್ತೂರಬಾ ರಸ್ತೆ, ಸಿದ್ದಲಿಂಗಯ್ಯ ವೃತ್ತ, ಕ್ವೀನ್ಸ್ ಪ್ರತಿಮೆ ವೃತ್ತ, ಸಿಒಟಿ ಜಂಕ್ಷನ್, ಪೊಲೀಸ್ ತಿಮ್ಮಯ್ಯ ವೃತ್ತದ ಮೂಲಕ ಮತ್ತೆ ವಿಧಾನಸೌಧ ತಲುಪಿ ಅಂತ್ಯಗೊಂಡಿತು.