ಸಾರಾಂಶ
ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸ್ ವತಿಯಿಂದ ಭಾನುವಾರ “ನಮ್ಮ ಪೊಲೀಸ್ ನಮ್ಮ ಹೆಮ್ಮೆ, ಎಲ್ಲರಿಗಾಗಿ ಫಿಟ್‌ನೆಸ್” ಮತ್ತು “ಮಾದಕ ದ್ರವ್ಯ ಮುಕ್ತ ಕರ್ನಾಟಕ” ಧ್ಯೇಯ ವಾಖ್ಯದೊಂದಿಗೆ ಹಮ್ಮಿಕೊಂಡಿದ್ದ ಮ್ಯಾರಥಾನ್ ಓಟ ಗಮನ ಸೆಳೆಯಿತು.
ಚುಮುಚುಮು ಚಳಿಯ ವಾತಾವರಣ, ಮಕ್ಕಳು, ಮಹಿಳೆಯರು, ಯುವಕರಲ್ಲಿ ಕುಗ್ಗದ ಉತ್ಸಾಹ.. ಕಿಲೋ ಮೀಟರ್‌ಗಟ್ಟಲೆ ದೂರ ಓಡುತ್ತ ಸಾರ್ವನಿಜಕರು ಗಮನ ಸೆಳೆದರು.ನಗರದ ಡಿಎಆರ್ ಪೊಲೀಸ್ ಕವಾಯತು ಮೈದಾನದಿಂದ ಪ್ರಾರಂಭವಾದ ಮ್ಯಾರಥಾನ್ ಓಟಕ್ಕೆ ಶಾಸಕ ಎಸ್.ಎನ್.ಚನ್ನಬಸಪ್ಪ ಚಾಲನೆ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ಕುಮಾರ್, ಜಿಪಂ ಸಿಇಒ ಎನ್.ಹೇಮಂತ್ ಇದ್ದರು.
ಡಿಎಆರ್ ಮೈದಾನದಿಂದ ಪ್ರಾರಂಭವಾದ ಮ್ಯಾರಥಾನ್ ಓಟ ಅಶೋಕ ವೃತ್ತ, ಅಮೀರ್ ಅಹಮ್ಮದ್ ವೃತ್ತ, ಶಿವಪ್ಪ ನಾಯಕ ವೃತ್ತ, ಕರ್ನಾಟಕ ಸಂಘ ವೃತ್ತ, ಡಿವಿಎಸ್ ವೃತ್ತ, ಮಹಾವೀರ ವೃತ್ತ, ಶಿವಮೂರ್ತಿ ವೃತ್ತ, ಜೈಲ್ ವೃತ್ತ, ಐಬಿ ವೃತ್ತದ ಮಾರ್ಗವಾಗಿ ಪುನಃ ಡಿಎಆರ್ ಪೊಲೀಸ್ ಕವಾಯತು ಮೈದಾನಕ್ಕೆ ಬಂದು ತಲುಪಿತು. 10K ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಕಿರಣ್, ದ್ವಿತೀಯ ಸ್ಥಾನವನ್ನು ನಂದನ್, ತೃತೀಯ ಸ್ಥಾನವನ್ನು ಭರತ್ ಪಡೆದರು. 5K ಪುರುಷರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಬಾಲು, ದ್ವಿತೀಯ ಸ್ಥಾನವನ್ನು ಧನರಾಜ್, ತೃತೀಯ ಸ್ಥಾನವನ್ನು ಧನುಷ್ ಪಡೆದರೆ, 5K ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಧೀಕ್ಷಾ, ದ್ವಿತೀಯ ಸ್ಥಾನವನ್ನು ಸಾನಿಕ, ತೃತೀಯ ಸ್ಥಾನವನ್ನು ಸೋನಿಯಾ ಪಡೆದರು.ಪ್ರಥಮ ಸ್ಥಾನ ಪಡೆದ ವಿಜೇತರಿಗೆ 10,000 ರು. ನಗದು ಬಹುಮಾನ, ಪದಕ, ದ್ವಿತೀಯ ಸ್ಥಾನ ಪಡೆದ ವಿಜೇತರಿಗೆ 8,000 ರು. ನಗದು ಬಹುಮಾನ, ಪದಕ , ತೃತೀಯ ಸ್ಥಾನ ಪಡೆದ ವಿಜೇತರಿಗೆ 5,000 ರು. ನಗದು ಬಹುಮಾನ, ಪದಕ ಮತ್ತು ಪ್ರಶಸ್ತಿ ಪತ್ರವನ್ನು ನೀಡಿ ಅಭಿನಂದಿಸಲಾಯಿತು.
ಮ್ಯಾರಥಾನ್‌ನಲ್ಲಿ ಭಾಗವಹಿಸಿ, ಪೂರ್ಣಗೊಳಿಸಿದ ಎಲ್ಲರಿಗೂ ಪ್ರಶಂಸನಾ ಪತ್ರ ನೀಡಲಾಯಿತು. ಈ ಸಂದರ್ಭದಲ್ಲಿ ವ್ಯಸನ ಮುಕ್ತ ಸಮಾಜ ನಿರ್ಮಾಣ, ಸೈಬರ್ ಸುರಕ್ಷತಾ ಕ್ರಮಗಳು ಮತ್ತು ಸಂಚಾರ ನಿಯಮಗಳ ಕಡ್ಡಾಯ ಪಾಲನೆಯ ಕುರಿತು ಪ್ರತಿಜ್ಞಾವಿಧಿಯನ್ನು ಸ್ವೀಕರಿಸಲಾಯಿತು.ಮ್ಯಾರಥಾನ್‌ನಲ್ಲಿ ಕೆ.ಎಸ್.ಐ, ಎಸ್.ಎಫ್ ನ 8ನೇ ಪಡೆ ಕಮಾಂಡೆಂಟ್ ಯುವಕುಮಾರ್, 2ನೇ ಪಡೆ ಕಮಾಂಡೆಂಟ್ ಶಿವಕುಮಾರ್, ಎಎಸ್ಪಿ ಅನಿಲ್ ಕುಮಾರ್ ಭೂಮರಡ್ಡಿ, ಎ.ಜಿ.ಕಾರಿಯಪ್ಪ, ಡಿವೈಎಸ್ಪಿ ಬಾಬು ಆಂಜನಪ್ಪ, ಟಿ.ಸಂಜೀವ್ ಕುಮಾರ್ ನಾಗರಾಜ್, ಕೃಷ್ಣ ಮೂರ್ತಿ ಸೇರಿದಂತೆ ಶಿವಮೊಗ್ಗ ಜಿಲ್ಲಾ ಪೊಲೀಸ್‌ನ ಅಧಿಕಾರಿ ಮತ್ತು ಸಿಬ್ಬಂದಿ, ಕೆ.ಎಸ್.ಆರ್.ಪಿ 8ನೇ ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ಕೆ.ಎಸ್.ಐ.ಎಸ್.ಎಫ್ 2ನೇ ಪಡೆಯ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿ, ಯುವಜನ ಮತ್ತು ಕ್ರೀಡಾ ಇಲಾಖೆಯ ವಿದ್ಯಾರ್ಥಿಗಳು, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಶಿವಮೊಗ್ಗದ ವಿವಿಧ ಇಲಾಖೆಗಳ ಅಧಿಕಾರಿ ಸಿಬ್ಬಂದಿ ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.