ಮೃತರ ಕುಟುಂಬಗಳಿಗೆ 1 ಲಕ್ಷ ರು. ಪರಿಹಾರ: ಶಾಸಕ ಪಿ.ರವಿಕುಮಾರ್‌

| Published : Feb 04 2025, 12:32 AM IST

ಸಾರಾಂಶ

ಈ ಹಿಂದೆ ಕಾರು ಬಿದ್ದು ಸಾವು ಸಂಭವಿಸಿದಾಗ ಕೂಡ ಬ್ಲಾಕ್ ಸ್ಪಾಟ್ ಎಂದು ಸ್ಥಳವನ್ನು ಗುರುತಿಸಲಾಗಿತ್ತು. ಗುತ್ತಿಗೆದಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ. ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿ.ಸಿ.ನಾಲೆಗಳ ರಸ್ತೆಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ತಡೆಗೋಡೆ ನಿರ್ಮಾಣ ಮಾಡಲಾಗುವುದು.

ಕನ್ನಡಪ್ರಭ ವಾರ್ತೆ ಮಂಡ್ಯ

ವಿಶ್ವೇಶ್ವರಯಯ್ಯ ನಾಲೆಗೆ ಕಾರು ಉರುಳಿ ಸಾವನ್ನಪ್ಪಿದ ಮೂವರ ಕುಟುಂಬಗಳಿಗೂ ತಲಾ ಒಂದು ಲಕ್ಷ ರು. ವೈಯಕ್ತಿಕ ಪರಿಹಾರ ನೀಡುವುದಾಗಿ ಶಾಸಕ ಪಿ.ರವಿಕುಮಾರ ಘೋಷಿಸಿದರು.

ಘಟನೆ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಅವರು, ಈ ಹಿಂದೆ ಕಾರು ಬಿದ್ದು ಸಾವು ಸಂಭವಿಸಿದಾಗ ಕೂಡ ಬ್ಲಾಕ್ ಸ್ಪಾಟ್ ಎಂದು ಸ್ಥಳವನ್ನು ಗುರುತಿಸಲಾಗಿತ್ತು. ಗುತ್ತಿಗೆದಾರ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ದುರಂತ ಸಂಭವಿಸಿದೆ. ಮಂಡ್ಯ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿ.ಸಿ.ನಾಲೆಗಳ ರಸ್ತೆಗಳನ್ನು ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ತಡೆಗೋಡೆ ನಿರ್ಮಾಣ ಸೂಚನಾ ಫಲಕ ಅಳವಡಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು.

ಮೃತರ ಕುಟುಂಬಗಳಿಗೆ ಹೆಚ್ಚಿನ ಪರಿಹಾರಕ್ಕೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ಜಿಲ್ಲಾ ಆಡಳಿತದ ವತಿಯಿಂದ ಸೂಕ್ತ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಮಾ.೫ರಂದು ರಾಜ್ಯ ಮಟ್ಟದ ರಾಗಿ ಮುದ್ದೆ ಉಣ್ಣುವ ಸ್ಪರ್ಧೆ

ಮಂಡ್ಯ:

ದಶಮುಖ ಸಾಮಾಜಿಕ ಸೇವಾ ಟ್ರಸ್ಟ್‌ನಿಂದ ಆರೋಗ್ಯಕರ ಜೀವನಕ್ಕೆ ರಾಗಿಯ ಮಹತ್ವ ಕುರಿತು ಉಪನ್ಯಾಸ ಮತ್ತು ರಾಜ್ಯ ಮಟ್ಟದ ರಾಗಿಮುದ್ದೆ ಉಣ್ಣುವ ಸ್ಪರ್ಧೆಯನ್ನು ಬೆಂಗಳೂರಿನ ಸುಂದರ್‌ರಾಮ್ ಶೆಟ್ಟಿ ಮೆಮೋರಿಯಲ್ ಹಾಲ್‌ನಲ್ಲಿ ಮಾ. ೫ರಂದು ಬೆಳಗ್ಗೆ ೧೦.೩೦ಕ್ಕೆ ಏರ್ಪಡಿಸಲಾಗಿದೆ ಎಂದು ಟ್ರಸ್ಟ್‌ನ ಅಧ್ಯಕ್ಷ ಎಚ್.ಕೆ.ಬೊಮ್ಮೇಗೌಡ ತಿಳಿಸಿದರು.

ಸ್ಪರ್ಧೆಯ ಕಾಲಮಿತಿ ೧೫ ನಿಮಿಷಗಳಾಗಿದ್ದು, ಮದ್ಯಪಾನ ಮಾಡಿದವರಿಗೆ ಸ್ಪರ್ಧೆಗೆ ಪ್ರವೇಶವಿರುವುದಿಲ್ಲ. ನೋಂದಾವಣೆಯಾದವರಿಗೆ ಪ್ರವೇಶ ಶುಲ್ಕ ಹಿಂತಿರುಗಿಸಲಾಗುವುದಿಲ್ಲ. ಸ್ಪರ್ಧೆಯಲ್ಲಿ ಹೆಚ್ಚು ಮುದ್ದೆ ಉಂಡವರಿಗೆ ಮಾತ್ರ ಬಹುಮಾನ ನೀಡಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸಿದವರೆಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಸ್ಪರ್ಧೆಯಲ್ಲಿ ಭಾಗವಹಿಸಿ ಆರೋಗ್ಯದಲ್ಲಿ ವ್ಯತ್ಯಾಸವಾದರೆ ಟ್ರಸ್ಟ್ ಯಾವುದೇ ರೀತಿಯಲ್ಲೂ ಜವಾಬ್ದಾರರಲ್ಲ. ಸ್ಪರ್ಧೆಯಲ್ಲಿ ಭಾಗವಹಿಸಲು ಹೆಸರು ನೋಂದಣಿಗೆ ಮಾ.೧ ಕೊನೇ ದಿನಾಂಕವಾಗಿದೆ. ಆಸಕ್ತರು ಆರ್.ಅಶ್ವತ್ಥನಾರಾಯಣಗೌಡ- ೯೦೬೦೬೨೨೨೮೬ ಸಂಪರ್ಕಿಸಬಹುದು. ಸ್ಪರ್ಧೆಯ ಪ್ರವೇಶ ಶುಲ್ಕ ೧೦೦೦ ರು. ಆಗಿದೆ. ವಿಜೇತರಿಗೆ ಪ್ರಥಮ ಬಹುಮಾನ ೨೫ ಸಾವಿರ ರು., ದ್ವಿತೀಯ-೧೫ ಸಾವಿರ ರು., ತೃತೀಯ-೭೫೦೦ ರು.ಗಳನ್ನು ನಿಗದಿಪಡಿಸಲಾಗಿದೆ ಎಂದರು.

ಗೋಷ್ಠಿಯಲ್ಲಿ ಎಂ.ಶಿವೇಗೌಡ, ಎಚ್.ಎ.ರವಿಶಂಕರ್, ಆರ್.ಅಶ್ವತ್ಥನಾರಾಯಣಗೌಡ, ಲಂಕೇಶ್ ಮಂಗಲ ಇದ್ದರು.