ಭ್ರಷ್ಟ ವೈದ್ಯನಿಗೆ ಬುದ್ದಿ ಕಲಿಸಲು 1 ರು. ಅಭಿಯಾನ ಹೋರಾಟ

| N/A | Published : Jul 01 2025, 12:48 AM IST / Updated: Jul 01 2025, 12:25 PM IST

ಭ್ರಷ್ಟ ವೈದ್ಯನಿಗೆ ಬುದ್ದಿ ಕಲಿಸಲು 1 ರು. ಅಭಿಯಾನ ಹೋರಾಟ
Share this Article
  • FB
  • TW
  • Linkdin
  • Email

ಸಾರಾಂಶ

ಲಂಚ ಕೇಳಿದ ಭ್ರಷ್ಟ ಅಧಿಕಾರಿಯಿಂದ ವೈದ್ಯಕೀಯ ಕ್ಷೇತ್ರಕ್ಕೇ ಅವಮಾನ ಇವರಿಗೆ ತಕ್ಕ ಶಿಕ್ಷೆಯಾಗಬೇಕು. ಈ ಪ್ರಕರಣ ಬೇರೆ ಇಲಾಖೆಗಳ ಅಧಿಕಾರಿಗಳಿಗೂ ಎಚ್ಚರಿಕೆ ಪಾಠವಾಗಿದೆ. ಭ್ರಷ್ಟಾಚಾರ ಪ್ರಕರಣಗಳು ವರದಿಯಾದರೆ ಇಂತಹ ಹೋರಾಟಗಳನ್ನು ರೂಪಿಸಲಾಗುವುದು.

  ರಾಮನಗರ :  ಚಿತ್ರದುರ್ಗ ಜಿಲ್ಲೆಯ ಜವನಗೊಂಡನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಶ್ರೀಕೃಷ್ಣ ಎಂಬುವರು ಅದೇ ಆರೋಗ್ಯ ಕೇಂದ್ರದಲ್ಲಿ ಎನ್‌ಎಚ್‌ಎಂ ಅಡಿ ಗುತ್ತಿಗೆ ಆಧಾರದಲ್ಲಿ ಶುಶ್ರೂಷಕರಾಗಿ ಸೇವೆ ಸಲ್ಲಿಸುತ್ತಿರುವ ಮಹಿಳಾ ನೌಕರರಿಗೆ ಅವರ ಗುತ್ತಿಗೆ ಅವಧಿಯನ್ನು ನವೀಕರಿಸಲು 5 ಸಾವಿರ ರು. ಲಂಚ ನೀಡುವಂತೆ ಬೇಡಿಕೆ ಇಟ್ಟಿರುವ ಆಡಿಯೋ ವೈರಲ್ ಆಗಿದೆ.

ಆಡಿಯೋ ವೈರಲ್ ಹಿನ್ನಲೆಯಲ್ಲಿ ರಾಮನಗರ ಜಿಲ್ಲೆಯ ಆರೋಗ್ಯ ಇಲಾಖೆಯ ಎನ್‌ಎಚ್‌ಎಂ ‌ಗುತ್ತಿಗೆ ನೌಕರರು ಮತ್ತು ಸಾಮಾಜಿಕ ಹೋರಾಟಗಾರರಾದ ಎಸ್.ಪದ್ಮರೇಖಾ ಭ್ರಷ್ಟ ಅಧಿಕಾರಿಗೆ ಬುದ್ದಿ ಕಲಿಸಲು 1 ರುಪಾಯಿ ಅಭಿಯಾನದ ಮೂಲಕ ಹೋರಾಟ ರೂಪಿಸಿದ್ದಾರೆ.

ಆ ವೈದ್ಯನಿಗೆ ಫೋನ್ ಪೇ ಮೂಲಕ 1 ರುಪಾಯಿ ಕಳುಹಿಸಿ ಎನ್‌ಎಚ್‌ಎಂ ನೌಕರರಿಂದ ಗುತ್ತಿಗೆ ಅವಧಿಯನ್ನು ನವೀಕರಿಸಲು ಲಂಚ ಕೇಳಿದ್ದಕ್ಕೆ ನನ್ನ ಕಾಣಿಕೆ ಒಪ್ಪಿಸಿಕೊಳ್ಳಿ, ನಾವು 27 ಸಾವಿರ ನೌಕರರು ನಿಮಗೆ ತಲಾ 1 ರುಪಾಯಿಗಳನ್ನು ಕಳಿಸಿ ನಿಮ್ಮ ಋಣ ಸಂದಾಯ ಮಾಡುತ್ತೇವೆ. ಎನ್‌ಎಚ್‌ಎಂ ನೌಕರರು ಈಗಾಗಲೇ ನೊಂದಿದ್ದಾರೆ ತೊಂದರೆ ಕೊಡಬೇಡಿ. ನಿಮಗೆ ಒಳ್ಳೆಯದಾಗಲಿ ಎಂದು ಸಂದೇಶ ಕಳಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಪದ್ಮರೇಖಾ ಹಂಚಿಕೊಂಡಿದ್ದಾರೆ.

ಇದರಿಂದ ಪ್ರೇರೇಪಿತರಾಗಿ ಹಲವರು ಇವರ ಹೋರಾಟಕ್ಕೆ ಕೈ ಜೋಡಿಸಿ 1 ರುಪಾಯಿಯೊಂದಿಗೆ ಒಂದು ಎಚ್ಚರಿಕೆ ಸಂದೇಶವನ್ನು ವೈದ್ಯನಿಗೆ ಕಳುಹಿಸಿದ್ದಾರೆ. ಪ್ರತೀ ವರ್ಷ ಆರೋಗ್ಯ ಇಲಾಖೆಯ ಎನ್‌ಎಚ್‌ಎಂ ಒಳ ಗುತ್ತಿಗೆ ನೌಕರರನ್ನು ಸೇವೆಯಿಂದ ಬಿಡುಗಡೆಗೊಳಿಸಿ ಒಂದು ದಿನದ ವಿರಾಮ ನೀಡಿ ಮತ್ತೆ ಗುತ್ತಿಗೆ ಅವಧಿಯನ್ನು ಒಂದು ವರ್ಷಕ್ಕೆ ವಿಸ್ತರಿಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.

ಈ ಹಂತದಲ್ಲಿ ಕೆಲವು ಅಧಿಕಾರಿಗಳು ಗುತ್ತಿಗೆ ನವೀಕರಣ ಮಾಡಲು ಅತಿ ಕಡಿಮೆ ವೇತನಗಳಿಗೆ ದುಡಿಯುವ ನೌಕರರಿಗೆ ಹಣದ ಬೇಡಿಕೆ ಸೇರಿದಂತೆ ಹಲವಾರು ರೀತಿಯಲ್ಲಿ ದೌರ್ಜನ್ಯ ಮತ್ತು ಶೋಷಣೆ ಮಾಡುತ್ತಾರೆ. ಗುತ್ತಿಗೆಯಂತಹ ಸರ್ಕಾರದ ನೀತಿ ನಿಯಮಗಳು ಇಂತಹ ಪ್ರಕರಣ ನಡೆಯಲು ರಹದಾರಿಯಾಗಿದೆ. ಸರ್ಕಾರ ತನ್ನ ಪ್ರಣಾಳಿಕೆಯಲ್ಲಿ ನಮೂದಿಸಿರುವಂತೆ ಮತ್ತು ಇತರ ರಾಜ್ಯಗಳಲ್ಲಿ ಈಗಾಗಲೇ ಎನ್‌ಎಚ್‌ಎಂ ಒಳ ಗುತ್ತಿಗೆ ನೌಕರರನ್ನು ಖಾಯಂ ಮಾಡಿರುವಂತೆ ಕರ್ನಾಟಕ ಸರ್ಕಾರ ಆದಷ್ಟು ಬೇಗ ಖಾಯಂ ಮಾಡಿದರೆ ಗುತ್ತಿಗೆ ನೌಕರರು ನಿರಾಳರಾಗುತ್ತಾರೆ ಎಂದು ತಿಳಿಸಿದ್ದಾರೆ.

ಲಂಚ ಕೇಳಿದ ಭ್ರಷ್ಟ ಅಧಿಕಾರಿಯಿಂದ ವೈದ್ಯಕೀಯ ಕ್ಷೇತ್ರಕ್ಕೇ ಅವಮಾನ ಇವರಿಗೆ ತಕ್ಕ ಶಿಕ್ಷೆಯಾಗಬೇಕು. ಈ ಪ್ರಕರಣ ಬೇರೆ ಇಲಾಖೆಗಳ ಅಧಿಕಾರಿಗಳಿಗೂ ಎಚ್ಚರಿಕೆ ಪಾಠವಾಗಿದೆ. ಭ್ರಷ್ಟಾಚಾರ ಪ್ರಕರಣಗಳು ವರದಿಯಾದರೆ ಇಂತಹ ಹೋರಾಟಗಳನ್ನು ರೂಪಿಸಲಾಗುವುದು ಎಂದು ಪದ್ಮರೇಖಾ ಎಚ್ಚರಿಸಿದ್ದಾರೆ.

Read more Articles on