ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಗೌಡ ಲಿಂಗಾಯತ, ಪಂಚಮಶಾಲಿ ಲಿಂಗಾಯತರಿಗೆ ೨ಎ ಮೀಸಲಾತಿ ನೀಡಬೇಕು, ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಬೇಕೆಂದು ಆಗ್ರಹಿಸಿ ಡಿ.೧೦ರಂದು ಬೆಳಗಾವಿಯಲ್ಲಿ ಸುವರ್ಣಸೌಧಕ್ಕೆ ಸಾವಿರಾರು ಟ್ರಾಕ್ಟರ್‌ಗಳಲ್ಲಿ ಮುತ್ತಿಗೆ ಹಾಕಲಾಗುವುದು ಎಂದು ಬಿಜೆಪಿ ರೈತ ಮುಖಂಡ, ಗೌಡ ಲಿಂಗಾಯತ, ಪಂಚಮಸಾಲಿ ಸಮನ್ವಯ ಸಮಿತಿ ಸಂಚಾಲಕ ಅಮ್ಮನಪುರ ಮಲ್ಲೇಶ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3-4 ವರ್ಷಗಳಿಂದಲೂ ೨ಎ ಮೀಸಲಾತಿ, ಒಬಿಸಿ ಪಟ್ಟಿಗಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ, ಆದರೂ ಸರ್ಕಾರಗಳು ನಿರ್ಲಕ್ಷ್ಯವಹಿಸಿವೆ. ಆದ್ದರಿಂದ ಡಿ.೧೦ರಂದು ಬಸವ ಜಯಮೃತ್ಯಂಜಯ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಾವಿರಕ್ಕೂ ಹೆಚ್ಚು ಟ್ರ್ಯಾಕ್ಟರ್‌ಗಳ ರ್‍ಯಾಲಿ ನಡೆಸಿ, ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದರು.ಪಂಚಮಸಾಲಿ, ಮಲೆಗೌಡ, ಲಿಂಗಾಯತ ಗೌಡ, ದೀಕ್ಷಾ-ಚತುರ್ಥ ಲಿಂಗಾಯತರ ಮಕ್ಕಳ ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಉದ್ಯೋಗಕ್ಕಾಗಿ ರಾಜ್ಯ ಸರ್ಕಾರ ೨ಎ ಮೀಸಲಾತಿ ನೀಡಲೇಬೇಕು, ಹಾಗೂ ಲಿಂಗಾಯತ ಉಪ ಸಮಾಜಗಳಿಗೆ ಮೀಸಲಾತಿಗಾಗಿ ಒಬಿಸಿ ಪಟ್ಟಿಗೆ ಸೇರಿಸುವಂತೆ ಕೇಂದ್ರಕ್ಕೆ ರಾಜ್ಯ ಸರ್ಕಾರವು ಕೂಡಲೇ ಶಿಪಾರಸ್ಸು ಮಾಡುವಂತೆ ಈ ಮುತ್ತಿಗೆ ಮೂಲಕ ಹಕ್ಕೊತ್ತಾಯ ಮಂಡಿಸಲಾಗುವುದು ಎಂದರು.ಬಸವರಾಜ ಬೊಮ್ಮಾಯಿ ಸರ್ಕಾರವಿದ್ದಾಗ ೨ಡಿ ಸೇರಿಸಿ ಶೇ.೨ರಷ್ಟು ಮೀಸಲಾತಿ ಹೆಚ್ಚಿಸಲಾಗಿತ್ತು, ಈಗ ಇದು ಸುಪ್ರೀಂಕೋರ್ಟಿನಲ್ಲಿ ಇದ್ದು ಇನ್ನು ತೀರ್ಮಾನವಾಗಿಲ್ಲ, ಕಳೆದ 3-4 ವರ್ಷಗಳಿಂದಲೂ ಈ ಬಗ್ಗೆ ಹೋರಾಟ ಮಾಡುತ್ತಾ ಬಂದಿದ್ದೇವೆ, ಈ ಕಾಂಗ್ರೆಸ್ ಸರ್ಕಾರ ಲಿಂಗಾಯತ ವಿರೋಧಿ ಸರ್ಕಾರವಾಗಿದ್ದು, ೨ಎ ಮೀಸಲಾತಿ ನೀಡಿ ಕೇಂದ್ರಕ್ಕೆ ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುತ್ತಿಲ್ಲ ಎಂದು ಆರೋಪಿಸಿದರು.ಕುರುಬ ಸಮಾಜವನ್ನು ಯಾವ ಕುಲಶಾಸ್ತ್ರ ಆಧ್ಯಯನ ಮಾಡದೇ ಒಬಿಸಿ ಪಟ್ಟಿಗೆ ಸೇರಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡಲಾಗಿದೆ ಇದನ್ನು ಸ್ವಾಗತಿಸುತ್ತೇವೆ, ಆದರೆ ಇದೇ ನೀತಿಯನ್ನು ಗೌಡ ಲಿಂಗಾಯತ, ಪಂಚಮಶಾಲಿ ಲಿಂಗಾಯತರಿಗೆ ಅನುಸರಿಸಬೇಕಲ್ಲವೇ ಎಂದರು. ಈ ಮುತ್ತಿಗೆ ಕಾರ್ಯಕ್ರಮಗಕ್ಕೆ ಮೈಸೂರು ವಿಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದು, ಚಾಮರಾಜನಗರ ಜಿಲ್ಲೆಯಿಂದಲೂ ಸಾವಿರಕ್ಕೂ ಹೆಚ್ಚು ಜನರು ಭಾಗವಹಿಸಲಿದ್ದಾರೆ ಎಂದರು. ಮಕ್ಕಳ ಮುಂದಿನ ಭವಿಷ್ಯಕ್ಖಾಗಿ ಲಿಂಗಾಯತರು ಈ ಹೋರಾಟವನ್ನು ಬೆಂಬಲಿಸಿ ಹೆಚ್ಚಿನ ಸಂಖೈಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಮೀಸಲಾತಿ ಹೋರಾಟ ಸಂಬಂಧ ಲಿಂಗಾಯತ ರಾಜಕಾರಣಿಗಳು ಮೌನವಹಿಸಿರುವುದು ವಿಪರ್ಯಾಸ. ಅಧಿವೇಶನದಲ್ಲಿಯೂ ಮೀಸಲಾತಿಗೆ ಒತ್ತಾಯ ಮಾಡುತ್ತಿಲ್ಲ. ಆಯಾ ಕ್ಷೇತ್ರದ ಶಾಸಕರು ಹಾಗೂ ಮಂತ್ರಿಗಳ ಮೇಲೆ ಲಿಂಗಾಯತರು ಒತ್ತಡ ಹೇರಬೇಕು. ಅಲ್ಲದೇ ಸ್ವಾಮೀಜಿಗಳು ಕೂಡ ಬಡ ಲಿಂಗಾಯತರ ಪರ ಹೋರಾಟ ಮಾಡಬೇಕು ಎಂದರು. ಪತ್ರಿಕಾಗೋಷ್ಟಿಯಲ್ಲಿ ಮುಖಂಡರಾದ ಅಟ್ಟುಗೂಳಿಪುರ, ಚೆನ್ನಂಜಪ್ಪ, ಸತೀಶ್, ಮಂಜೇಶ್, ನಟರಾಜು ಇದ್ದರು.