ಅಣ್ಣೂರು ಕೃಷಿ ಸಹಕಾರ ಸಂಘಕ್ಕೆ 10.34 ಲಕ್ಷ ರು. ನಿವ್ವಳ ಲಾಭ: ಡಿ.ಪ್ರಸನ್ನ

| Published : Aug 07 2024, 01:03 AM IST

ಅಣ್ಣೂರು ಕೃಷಿ ಸಹಕಾರ ಸಂಘಕ್ಕೆ 10.34 ಲಕ್ಷ ರು. ನಿವ್ವಳ ಲಾಭ: ಡಿ.ಪ್ರಸನ್ನ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 10 ವರ್ಷಗಳ ಹಿಂದೆ ಸಂಘವು ಒಂದು ಕೋಟಿಗೂ ಅಧಿಕ ನಷ್ಟದಲ್ಲಿತ್ತು. ಗ್ರಾಮಸ್ಥರಿಂದ ಸಂಘಕ್ಕೆ ಆಯ್ಕೆಗೊಂಡ ನಿರ್ದೇಶಕರ ಸಹಕಾರದಿಂದ ಕಳೆದ ಮೂರ್ನಾಲ್ಕು ವರ್ಷದಿಂದ ನಷ್ಟವನ್ನು ತುಂಬಿ ಲಾಭ ಗಳಿಸುವತ್ತ ಹೆಜ್ಜೆ ಹಾಕಿದೆ.

ಕನ್ನಡಪ್ರಭ ವಾರ್ತೆ ಭಾರತೀನಗರ

ಅಣ್ಣೂರು ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘವು ಕಳೆದ 2023-24ನೇ ಸಾಲಿನಲ್ಲಿ 10.34 ಲಕ್ಷ ನಿವ್ವಳ ಲಾಭಗಳಿಸಿದೆ ಎಂದು ಎಂಆರ್‌ಸಿಎ ಸಂಘದ ಅಧ್ಯಕ್ಷ ಡಿ.ಪ್ರಸನ್ನ ತಿಳಿಸಿದರು.

ಸಂಘದ ಆವರಣದಲ್ಲಿ ನಡೆದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ 10 ವರ್ಷಗಳ ಹಿಂದೆ ಸಂಘವು ಒಂದು ಕೋಟಿಗೂ ಅಧಿಕ ನಷ್ಟದಲ್ಲಿತ್ತು. ಗ್ರಾಮಸ್ಥರಿಂದ ಸಂಘಕ್ಕೆ ಆಯ್ಕೆಗೊಂಡ ನಿರ್ದೇಶಕರ ಸಹಕಾರದಿಂದ ಕಳೆದ ಮೂರ್ನಾಲ್ಕು ವರ್ಷದಿಂದ ನಷ್ಟವನ್ನು ತುಂಬಿ ಲಾಭ ಗಳಿಸುವತ್ತ ಹೆಜ್ಜೆ ಹಾಕಿದೆ ಎಂದರು.

ಸಂಘದಲ್ಲಿ ರಸಗೊಬ್ಬರ ಮಾರಾಟ ಮಾಡುತ್ತಿದೆ. ರೈತರು ರಸಗೊಬ್ಬರಗಳನ್ನು ಸಂಘದಿಂದಲೇ ಖರೀದಿಸಿದಲ್ಲಿ ಇನ್ನೂ ಹೆಚ್ಚಿನ ಲಾಭ ನೀರೀಕ್ಷಿಸಬಹುದು. ಮಾರುಕಟ್ಟೆ ದರಕ್ಕಿಂತಲೂ ಸ್ವಲ್ಪ ಕಡಿಮೆ ಮೊತ್ತದಲ್ಲೇ ರಸಗೊಬ್ಬರ ಮಾರಾಟ ಮಾಡಲಾಗುತ್ತದೆ. ಜೊತೆಗೆ ಬೇವಿನ ಹಿಂಡಿ ಕೂಡ ಲಭ್ಯವಿದೆ ಎಂದರು

ಸಂಘದ ಸಿಇಒ ಎಸ್.ರಮೇಶ್ ಆದಾಯ ಮತ್ತು ಖರ್ಚು ವಿವರದ ಬಗ್ಗೆ ವರದಿ ಮಂಡಿಸಿ, ಕಳೆದ 2022-23ನೇ ಸಾಲಿನಲ್ಲಿ ಗಳಿಸಿದ್ದ ಲಾಭಾಂಶವನ್ನು ಗ್ರಾಮಾಭಿವೃದ್ಧಿಗೆ ದೇಣಿಗೆ ನೀಡಿದ್ದು, ಷೇರುದಾರರಿಗೆ ವಿತರಣೆ ಮಾಡಿರಲಿಲ್ಲ. ಈ ಬಾರಿ ಲಾಭಾಂಶವನ್ನು ಷೇರುದಾರರಿಗೆ ಶೇ.6.10 ರಷ್ಟು ಡಿವಿಡೆಂಟ್ ರೂಪದಲ್ಲಿ ನೀಡಲು ಸರ್ವ ಸದಸ್ಯರೂ ಒಪ್ಪಿಗೆ ಸೂಚಿಸಿ ನಿರ್ಣಯ ಕೈಗೊಳ್ಳಲಾಗಿದೆ ಎಂದರು.

ಸದಸ್ಯ ಆರ್.ಸಿದ್ದಪ್ಪ ಮಾತನಾಡಿ, ಈ ಸಹಕಾರ ಸಂಘ ಅಭಿವೃದ್ಧಿ ಕಾಣಲು ಸದಸ್ಯರು ಮತ್ತು ಡಿಸಿಸಿ ಬ್ಯಾಂಕ್‌ನ ಅಧಿಕಾರಿಗಳಿಂದ ಸಾಧ್ಯವಾಗಿದೆ. ಸಂಘದಿಂದ ಬರುವಂತಹ ಬೆಳೆಸಾಲ, ಆಭರಣ ಸಾಲ, ಸ್ವಸಹಾಯ ಸಂಘಗಳ ಸಾಲ, ವ್ಯಾಪಾರ ಸಾಲ, ರಸಗೊಬ್ಬರ ಮತ್ತು ಪಡಿತರ ವ್ಯವಸ್ಥೆಯನ್ನು ಜನರು ಸದುಪಯೋಗ ಪಡಿಸಿಕೊಂಡು ಅಭಿವೃದ್ಧಿಯತ್ತ ಸಾಗಬೇಕೆಂದು ಕೋರಿದರು.

ಇದೇ ವೇಳೆ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ಷೇರುದಾರರ ಮಕ್ಕಳಿಗೆ ಧನ ಸಹಾಯ ನೀಡಿ ಅಭಿನಂದಿಸಲಾಯಿತು. ಗ್ರಾಮದಲ್ಲಿ ಬಡಕುಟುಂಬದಿಂದ ಓದಿ ಸಿವಿಲ್ ಕೋರ್ಟ್ ನ್ಯಾಯಧೀಶೆಯಾಗಿ ಆಯ್ಕೆಗೊಂಡ ಎಸ್.ರಂಜಿತ ಮತ್ತು ಸಂಘದ ವೃತ್ತ ಮೇಲ್ವಿಚಾರಕ ಚರಣ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷೆ ಸುಶೀಲಮ್ಮ, ನಿರ್ದೇಶರಾದ ಆರ್.ಸಿದ್ದಪ್ಪ, ಎ.ಎಸ್.ಅರವಿಂದ್, ಭೀಮೇಗೌಡ, ಡಿ.ವೀರೇಂದ್ರ, ಸಿ.ಚೆನ್ನಶೆಟ್ಟಿ, ಬಿ.ಬೋರೇಗೌಡ, ಪಿ.ರಾಮು, ಮಮತಾ, ಎ.ಎಂ.ಸುನಿಲ್‌ಕುಮಾರ್, ಸಿಬ್ಬಂದಿ ನಾಗೇಶ್, ರವಿ, ಪೂರ್ಣಿಮಾ ಉಪಸ್ಥಿತರಿದ್ದರು.