ಸಾರಾಂಶ
‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ವಿಧೇಯಕ-2024ಕ್ಕೆ’ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಬೆಂಗಳೂರು : ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆ ವ್ಯಾಪ್ತಿಯ ಪ್ರದೇಶಗಳನ್ನು ಸೇರಿಸಿ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ’ ರಚನೆ ಮಾಡಲು ಹಾಗೂ ಇದರಡಿ ಹತ್ತರವರೆಗೆ ನಗರ ಪಾಲಿಕೆಗಳನ್ನು ರಚಿಸಲು ಅವಕಾಶ ಕಲ್ಪಿಸುವ ‘ಗ್ರೇಟರ್ ಬೆಂಗಳೂರು ಪ್ರಾಧಿಕಾರ ಆಡಳಿತ ವಿಧೇಯಕ-2024ಕ್ಕೆ’ ಸೋಮವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಮೇಯರ್ ಹಾಗೂ ಉಪ ಮೇಯರ್ ಅವಧಿಯನ್ನು 5 ವರ್ಷಕ್ಕೆ ಹೆಚ್ಚಳ ಸೇರಿದಂತೆ ಹಲವು ಮಹತ್ವದ ಅಂಶಗಳುಳ್ಳ ಗ್ರೇಟರ್ ಬೆಂಗಳೂರು ಆಡಳಿತ ವಿಧೇಯಕವನ್ನು ಮಂಗಳವಾರವೇ ವಿಧಾನಸಭೆಯಲ್ಲಿ ಮಂಡಿಸಲು ಸರ್ಕಾರ ತೀರ್ಮಾನಿಸಿದೆ.ಸೋಮವಾರ ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ, ಬೆಂಗಳೂರು ಮಹಾನಗರ ಪ್ರದೇಶಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯ ಹೊಸಕೋಟೆ, ನೆಲಮಂಗಲ, ದೇವನಹಳ್ಳಿ, ದೊಡ್ಡಬಳ್ಳಾಪುರ (ಎಲೆಕ್ಟ್ರಾನಿಕ್ ಸಿಟಿ, ಬಿಡದಿ, ಆನೇಕಲ್ ಸೇರಿ) ಎರಡೂ ಜಿಲ್ಲೆ ಹಾಗೂ ಸುತ್ತಮುತ್ತಲ ಪ್ರದೇಶಗಳನ್ನು ಸೇರಿಸಿ ಗ್ರೇಟರ್ ಬೆಂಗಳೂರು ರಚಿಸಲು ತೀರ್ಮಾನಿಸಲಾಗಿದೆ.
10 ಲಕ್ಷ ಜನಸಂಖ್ಯೆಗೊಂದು ಪಾಲಿಕೆ
ಕನಿಷ್ಠ ಹತ್ತು ಲಕ್ಷ ಜನಸಂಖ್ಯೆಗೆ ಕಡಿಮೆ ಇಲ್ಲದಂತೆ ಒಂದೊಂದು ನಗರ ಪಾಲಿಕೆ ರಚನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಈ ವೇಳೆ ಪ್ರತಿ ಚದರ ಕಿ.ಮೀ.ಗೆ 5 ಸಾವಿರ ಜನಸಂಖ್ಯೆ ಇರಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ಒಂದೊಂದು ಪಾಲಿಕೆಗೆ 200 ವಾರ್ಡ್‌ವರೆಗೆ ರಚನೆ ಮಾಡಲು ಅವಕಾಶ ಕಲ್ಪಿಸಲಾಗಿದೆ. ಕನಿಷ್ಠ 50ರಿಂದ ಗರಿಷ್ಠ 200 ವಾರ್ಡ್‌ವರೆಗೆ ರಚನೆ ಮಾಡಲು ಅವಕಾಶ ಕಲ್ಪಿಸಿದ್ದು, ಈ ಮೂಲಕ ಗರಿಷ್ಠ 2,000 ವಾರ್ಡ್ ರಚನೆಗೆ ಬಿಲ್‌ನಲ್ಲಿ ಅವಕಾಶ ಸಿಗಲಿದೆ.
ಬಿಬಿಎಂಪಿ ವ್ಯಾಪ್ತಿ ಸದ್ಯ 708 ಚ.ಕಿ.ಮೀ. ಇದೆ. ಪ್ರತಿಯೊಂದು ಪಾಲಿಕೆಯು ಸರಾಸರಿ 200 ಚ.ಕಿ.ಮೀ. ವಿಸ್ತೀರ್ಣ ಹೊಂದಿರಲಿವೆ. ಜಿಬಿಎ ವ್ಯಾಪ್ತಿ ಸುಮಾರು 1400 ಚ.ಕಿ.ಮೀ. ಇರಲಿದೆ. ಎಲೆಕ್ಟ್ರಾನಿಕ್ ಸಿಟಿ ಸೇರಿದಂತೆ ಹೊರವಲಯದಲ್ಲಿ ಹೆಚ್ಚು ಅಭಿವೃದ್ಧಿ ಹೊಂದಿರುವ ಪ್ರದೇಶಗಳು ಜಿಬಿಎ ವ್ಯಾಪ್ತಿಗೆ ತರಲು ಶಿಫಾರಸು ಮಾಡಲಾಗಿದೆ.--
ಬಿಡಿಎಗೆ ನಕ್ಷೆ ಅನುಮೋದನೆ ಅಧಿಕಾರ ಕಟ್
ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಬಳಿಕ ಬಿಡಿಎ ಭೂಬಳಕೆ ಮತ್ತು ಅಭಿವೃದ್ಧಿ ನಕ್ಷೆ ಅನುಮೋದಿಸುವ ಅಧಿಕಾರ ಕಳೆದುಕೊಳ್ಳಲಿದೆ. ಕೇವಲ ಯೋಜನೆಗಳನ್ನು ಅನುಷ್ಠಾನಗೊಳಿಸುವ ಜವಾಬ್ದಾರಿ ಮಾತ್ರ ಹೊಂದಿರುತ್ತದೆ. ರಾಜ್ಯ ಸರ್ಕಾರವು ಬಿಡುಗಡೆ ಮಾಡುವ ಅನುದಾನವನ್ನು ಯಾವ ಪಾಲಿಕೆಗೆ ಎಷ್ಟು ಹಂಚಿಕೆ ಮಾಡಬೇಕೆಂಬುದನ್ನು ಪ್ರಾಧಿಕಾರವೇ ನಿರ್ಧರಿಸಲಿದೆ.
3 ಹಂತಗಳ ಆಡಳಿತ ವ್ಯವಸ್ಥೆ
ಗ್ರೇಟರ್ ಬೆಂಗಳೂರು, ನಗರ ಪಾಲಿಕೆ ಹಾಗೂ ವಾರ್ಡ್ ಸಮಿತಿಗಳು ಸೇರಿ ಮೂರು ಹಂತದ ಆಡಳಿತ ವ್ಯವಸ್ಥೆ ಜಾರಿಗೆ ಬರಲಿದೆ. ಇದರಡಿ ಮೇಯರ್, ಆಯುಕ್ತರು, ಜಂಟಿ ಆಯುಕ್ತರು, ಸ್ಥಾಯಿ ಸಮಿತಿ, ವಲಯ ಸಮಿತಿ, ವಾರ್ಡ್ ಸಮಿತಿ ಹಾಗೂ ಏರಿಯಾ ಸಭೆ ಕಾರ್ಯನಿರ್ವಹಿಸಲಿವೆ.
ಪ್ರಮುಖ ಮೇಲ್ಸೇತುವೆಗಳು, ಎಕ್ಸ್‌ಪ್ರೆಸ್ ಎಲಿವೇಟೆಡ್ ರಸ್ತೆಗಳು, ಆರ್ಟಿರಿಯಲ್, ಸಬ್ ಆರ್ಟಿರಿಯಲ್ ರಸ್ತೆ ನಿರ್ಮಾಣ ಹಾಗೂ ನಿರ್ವಹಣೆ, ಮಳೆ ನೀರು ಕಾಲುವೆಗಳ ನಿರ್ವಹಣೆ, ಕುಡಿಯುವ ನೀರು ಸರಬರಾಜು ಹಾಗೂ ಒಳಚರಂಡಿ ವ್ಯವಸ್ಥೆಯೂ ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಗೆ ಬರಲಿದೆ.ಆಸ್ತಿ ತೆರಿಗೆ ನಿಗದಿ, ರಿಬೇಟರ್ ಘೋಷಣೆ, ಹೊಸ ತೆರಿಗೆಗಳ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡುವುದು ಸೇರಿ ಬಹುತೇಕ ಅಧಿಕಾರಿಗಳನ್ನು ಪ್ರಾಧಿಕಾರಕ್ಕೆ ನೀಡಲಾಗಿದೆ.
ಗ್ರೇಟರ್ ಬೆಂಗಳೂರಿಗೆ ಸಿಎಂ ಅಧ್ಯಕ್ಷ
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಮುಖ್ಯಮಂತ್ರಿಗಳು ಅಧ್ಯಕ್ಷರಾಗಿದ್ದು, ಬೆಂಗಳೂರು ನಗರ ಉಸ್ತುವಾರಿ ಸಚಿವರು ಉಪಾಧ್ಯಕ್ಷರಾಗಿರುತ್ತಾರೆ. ಅವರೊಂದಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಉಪಾಧ್ಯಕ್ಷರಾಗಿ ಕೆಲಸ ಮಾಡಲಿದ್ದಾರೆ. ಹಾಗೆಯೇ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರು ಸದಸ್ಯ ಕಾರ್ಯದರ್ಶಿಯಾಗಿ ಕೆಲಸ ಮಾಡಲಿದ್ದಾರೆ.
ಉಳಿದಂತೆ ಗೃಹ ಸಚಿವ, ನಗರಾಭಿವೃದ್ಧಿ ಸಚಿವ, ಸಾರಿಗೆ ಸಚಿವ, ಇಂಧನ ಸಚಿವ, ಬೃಹತ್ ಬೆಂಗಳೂರು ವ್ಯಾಪ್ತಿಯ ಶಾಸಕರಾಗಿ ಸಚಿವರಾಗಿರುವವರು ಸದಸ್ಯರಾಗಿರಲಿದ್ದಾರೆ. ಅದೇ ರೀತಿ ಮಹಾನಗರ ಪಾಲಿಕೆಗಳ ಮೇಯರ್‌ಗಳು, ಪ್ರತಿ ಮಹಾನಗರ ಪಾಲಿಕೆಯಿಂದ ನಾಮ ನಿರ್ದೇಶನಗೊಂಡ ಇಬ್ಬರು, ಬಿಡಿಎ ಆಯುಕ್ತ, ಜಲಮಂಡಳಿ ಅಧ್ಯಕ್ಷ, ಬಿಎಂಟಿಸಿ ಎಂಡಿ, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ, ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ, ಬೆಂಗಳೂರು ನಗರ ಪೊಲೀಸ್ ಆಯುಕ್ತ, ಬೆಂಗಳೂರು ಮಹಾನಗರ ಭೂ ಸಾರಿಗೆ ಪ್ರಾಧಿಕಾರದ ಸಿಇಒ, ಬೆಂಗಳೂರು ಘನತ್ಯಾಜ್ಯ ನಿರ್ವಹಣೆಯ ವ್ಯವಸ್ಥಾಪಕ ನಿರ್ದೇಶಕ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ನಗರ ಯೋಜನಾಧಿಕಾರಿ, ಪ್ರಧಾನ ಮುಖ್ಯ ಎಂಜಿನಿಯರ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ನಿರ್ದೇಶಕರು ಸದಸ್ಯರಾಗಿರಲಿದ್ದಾರೆ.
ಜಲಮಂಡಳಿ, ಬೆಸ್ಕಾಂ, ಮೆಟ್ರೋ ಗ್ರೇಟರ್ ಬೆಂಗಳೂರು ವ್ಯಾಪ್ತಿಗೆ
ಜಿಬಿಎ ಅಡಿಯಲ್ಲಿಯೇ ಬಿಬಿಎಂಪಿ, ಬಿಡಿಎ, ಜಲಮಂಡಳಿ, ಬೆಸ್ಕಾಂ, ಮೆಟ್ರೋ, ಸಂಚಾರ ಪೊಲೀಸ್ ಹಾಗೂ ಸಾರಿಗೆ ಇಲಾಖೆ ಸೇರಿದಂತೆ ನಗರಕ್ಕೆ ಸಂಬಂಧಿಸಿದ ಎಲ್ಲ ಇಲಾಖೆಗಳೂ ಕಾರ್ಯ ನಿರ್ವಹಿಸಬೇಕಾಗುತ್ತದೆ.==
ಪ್ರತಿ ಪಾಲಿಕೆಗೆ 10 ಸದಸ್ಯರ ಸಂಪುಟ
ಬಿಬಿಎಂಪಿಯನ್ನು ಐದು ಪಾಲಿಕೆಗಳನ್ನಾಗಿ ವಿಭಜಿಸುವ ಪ್ರಸ್ತಾವವೂ ಸಮಿತಿ ಸಲ್ಲಿಸಿರುವ ಕರಡು ವಿಧೇಯಕದಲ್ಲಿದೆ. ತಲಾ ಒಬ್ಬರು ಮೇಯರ್, ಉಪ ಮೇಯರ್ ಜತೆಗೆ 10 ಸದಸ್ಯರ ಸಂಪುಟವೂ ಇರಲಿದೆ. ಆದರೆ, ಸ್ಥಾಯಿ ಸಮಿತಿಗಳು ರದ್ದಾಗಲಿವೆ. ಪ್ರತಿ ಪಾಲಿಕೆಗೂ ಸರ್ಕಾರದಿಂದ ನೇಮಿಸಲ್ಪಟ್ಟ ಒಬ್ಬ ಆಯುಕ್ತರು ಮತ್ತು ಪ್ರತಿ ವಲಯಕ್ಕೆ ಒಬ್ಬ ವಲಯ ಆಯುಕ್ತರು ಇರಲಿದ್ದಾರೆ.
ಕಾರ್ಯಕಾರಿ ಸಮಿತಿ ರಚನೆ:
ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಿಎಂ ಅಥವಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ 3 ತಿಂಗಳಲ್ಲಿ ಒಮ್ಮೆಯಾದರೂ ಸಭೆ ನಡೆಸಬೇಕಿದೆ. ಅಲ್ಲದೆ, ಈ ಸಭೆಯಲ್ಲಿ ನಿರ್ಧರಿಸುವ ಹಾಗೂ ಇತರ ಕಾರ್ಯಗಳನ್ನು ಅನುಷ್ಠಾನಗೊಳಿಸಲು ಪ್ರತ್ಯೇಕ ಕಾರ್ಯಕಾರಿ ಸಮಿತಿ ರಚನೆಗೆ ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಈ ಸಮಿತಿಗೆ ಬೆಂಗಳೂರು ನಗರಾಭಿವೃದ್ಧಿ ಸಚಿವ ಅಥವಾ ಮುಖ್ಯಮಂತ್ರಿಗಳು ಸೂಚಿಸುವ ಸಚಿವರು ಅಧ್ಯಕ್ಷರಾಗಿ ಕೆಲಸ ಮಾಡಲಿದ್ದಾರೆ. ಅವರೊಂದಿಗೆ ಮುಖ್ಯ ಆಯುಕ್ತ ಸದಸ್ಯ ಕಾರ್ಯದರ್ಶಿಯಾಗಿ ಹಾಗೂ ಉಳಿದ ಅಧಿಕಾರಿಗಳು ಸದಸ್ಯರಾಗಿರಲಿದ್ದಾರೆ.
==ಗ್ರೇಟರ್ ಪ್ರಾಧಿಕಾರಕ್ಕೆ ಪಾಲಿಕೆಗಳಿಂದ ಪಾಲು
ನಗರ ಪಾಲಿಕೆಗಳು ಸಂಗ್ರಹಿಸುವ ಆದಾಯದಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕೆ ಪಾಲು ನೀಡಬೇಕಿದೆ. ಅದು ರಾಜ್ಯ ಸರ್ಕಾರ ಸೂಚಿಸುವಷ್ಟು ಆದಾಯದಿಂದ ಘನತ್ಯಾಜ್ಯ ನಿರ್ವಹಣೆ ಸೇರಿದಂತೆ ಇನ್ನಿತರ ಕಾರ್ಯಗಳನ್ನು ಮಾಡುತ್ತದೆ. ಅಲ್ಲದೆ, ಆ ಆದಾಯವನ್ನು ಕಡಿಮೆ ಆದಾಯ ಹೊಂದಿದ ನಗರ ಪಾಲಿಕೆಗೆ ಹಂಚಿಕೆ ಮಾಡಲಾಗುತ್ತದೆ.
ಆರ್ಥಿಕ ಅಭಿವೃದ್ಧಿ ಸಂಸ್ಥೆ ರಚನೆ:
ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಹೂಡಿಕೆ ಆಕರ್ಷಣೆ ಸೇರಿದಂತೆ ಆರ್ಥಿಕವಾಗಿ ಬಲ ತುಂಬಲು ಆರ್ಥಿಕ ಅಭಿವೃದ್ಧಿ ಸಂಸ್ಥೆ ರಚಿಸುವ ಕುರಿತು ವಿಧೇಯಕದಲ್ಲಿ ಪ್ರಸ್ತಾಪಿಸಲಾಗಿದೆ. ಪ್ರಾಧಿಕಾರ ರಚನೆಯಾದ ಒಂದು ವರ್ಷದಲ್ಲಿ ಆರ್ಥಿಕ ಅಭಿವೃದ್ಧಿ ಸಂಸ್ಥೆ ರಚನೆಯಾಗಲಿದೆ. ಈ ಸಂಸ್ಥೆಗೆ ಬೆಂಗಳೂರು ನಗರಾಭಿವೃದ್ಧಿ ಸಚಿವರು ಅಧ್ಯಕ್ಷರಾಗಿರಲಿದ್ದು, ಹೂಡಿಕೆ ಆಕರ್ಷಣೆ, ಉದ್ಯೋಗ ಸೃಷ್ಟಿಯಂತಹ ಕೆಲಸ ಮಾಡಲಿದೆ.ಪ್ರತ್ಯೇಕ ಭದ್ರತಾ ಪಡೆ ರಚನೆ
ಗ್ರೇಟರ್ ಬೆಂಗಳೂರು ಪ್ರಾಧಿಕಾರಕ್ಕಾಗಿ ಪ್ರತ್ಯೇಕ ಭದ್ರತಾ ಪಡೆ ರಚಿಸುವುದಾಗಿ ವಿಧೇಯಕದಲ್ಲಿ ತಿಳಿಸಲಾಗಿದೆ. ಈ ಪಡೆಯು ನಗರ ಪಾಲಿಕೆಗಳ ಆಸ್ತಿ ರಕ್ಷಣೆ, ಆದಾಯ ಸೋರಿಕೆ ತಡೆ, ಬೈಲಾಗಳ ಉಲ್ಲಂಘನೆ ಮಾಡುವವರ ವಿರುದ್ಧ ಕ್ರಮದಂತಹ ಕೆಲಸ ಮಾಡಲಿದೆ ಎಂದು ಹೇಳಲಾಗಿದೆ.50% ಸ್ಥಾನ ಎಸ್ಸಿ, ಎಸ್ಟಿ, ಒಬಿಸಿಗೆ
ಗ್ರೇಟರ್ ಬೆಂಗಳೂರು ಪ್ರದೇಶ ವ್ಯಾಪ್ತಿಯಲ್ಲಿ ರಚಿಸಲಾಗುವ ನಗರ ಪಾಲಿಕೆಗಳಿಗೆ ನಡೆಯುವ ಚುನಾವಣೆಯಲ್ಲಿ ಶೇ.50ರಷ್ಟು ಸ್ಥಾನಗಳನ್ನು ಪರಿಶಿಷ್ಟ ಜಾತಿ/ಪಂಗಡ ಹಾಗೂ ಹಿಂದುಳಿದ ವರ್ಗಗಳಿಗೆ ಮೀಸಲಿಡಲಾಗುವುದು ಎಂದು ತಿಳಿಸಲಾಗಿದೆ. ಹಾಗೆಯೇ, ಪ್ರತಿ ನಗರ ಪಾಲಿಕೆಗಳು 50ರಿಂದ 200 ವಾರ್ಡ್‌ಗಳನ್ನು ಹೊಂದಿರುವುದು ಕಡ್ಡಾಯವಾಗಿಸಿ ಕಾಯ್ದೆಯಲ್ಲಿ ಉಲ್ಲೇಖಿಸಲಾಗಿದೆ.--
ಬಿ.ಎಸ್.ಪಾಟೀಲ್ ವರದಿ ಆಧರಿಸಿ ಮಸೂದೆ ರಚನೆಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿ ಜುಲೈನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಸುಧಾರಣಾ ಸಮಿತಿ ಸರ್ಕಾರಕ್ಕೆ ಸಲ್ಲಿಸಿತ್ತು. ನಿವೃತ್ತ ಐಎಎಸ್ ಅಧಿಕಾರಿ ಸಿದ್ದಯ್ಯ, ನಗರತಜ್ಞ ವಿ.ರವಿಚಂದರ್ ಅವರು ಈ ವರದಿ ಸಿದ್ಧಪಡಿಸಿ ಸಲ್ಲಿಸಿದ್ದರು. ಈ ವರದಿ ಆಧಾರದ ಮೇಲೆ ಬಿಲ್ ರಚನೆ ಮಾಡಿದ್ದು, ಇದಕ್ಕೆ ಸಂಪುಟ ಒಪ್ಪಿಗೆ ನೀಡಿದೆ.
--ಮೇಯರ್ ಅವಧಿ 5 ವರ್ಷಕ್ಕೆ ಹೆಚ್ಚಳ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಅಡಿಯಲ್ಲಿ ರಚನೆ ಆಗುವ ನಗರ ಪಾಲಿಕೆ ಚುನಾವಣೆ ನಂತರ ನಡೆಯುವ ಮೊದಲ ಸಭೆಯಲ್ಲಿ ಮೇಯರ್ ಮತ್ತು ಉಪ ಮೇಯರ್‌ಗಳನ್ನು ಸದಸ್ಯರು ಆಯ್ಕೆ ಮಾಡಬೇಕಿದೆ. ಅಲ್ಲದೆ, ಮೇಯರ್ ಮತ್ತು ಉಪಮೇಯರ್ ಅವಧಿಯನ್ನು 5 ವರ್ಷಕ್ಕೆ ಹೆಚ್ಚಿಸಲಾಗಿದೆ ಎಂದು ವಿಧೇಯಕದಲ್ಲಿ ತಿಳಿಸಲಾಗಿದೆ.
6 ಸ್ಥಾಯಿ ಸಮಿತಿಗಳ ರಚನೆ
ಪ್ರತಿ ನಗರ ಪಾಲಿಕೆಯಲ್ಲಿ 6 ಸ್ಥಾಯಿ ಸಮಿತಿ ರಚಿಸಲಾಗುತ್ತದೆ. ಆಡಳಿತ, ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ, ಕಂದಾಯ, ಆದಾಯ ಮತ್ತು ಲೆಕ್ಕಪತ್ರ ಸ್ಥಾಯಿ ಸಮಿತಿ, ಸಾರ್ವಜನಿಕ ಕಾಮಗಾರಿ ಮತ್ತು ಎಂಜಿನಿಯರಿಂಗ್ ಸ್ಥಾಯಿ ಸಮಿತಿ, ಸಾರ್ವಜನಿಕ ಆರೋಗ್ಯ ಮತ್ತು ನೈಸರ್ಗಿಕ ವಿಕೋಪ ನಿರ್ವಹಣಾ ಸ್ಥಾಯಿ ಸಮಿತಿ, ಅರಣ್ಯ, ಪರಿಸರ, ಕೆರೆ ಮತ್ತು ತೋಟಗಾರಿಕೆ ಸ್ಥಾಯಿ ಸಮಿತಿ, ನಗರ ಯೋಜನೆ ಮತ್ತು ಮೂಲಸೌಕರ್ಯ ಸ್ಥಾಯಿ ಸಮಿತಿಗಳನ್ನು ರಚಿಸಲಾಗುತ್ತದೆ. ಪ್ರತಿ ಸ್ಥಾಯಿ ಸಮಿತಿಯೂ 5 ಸದಸ್ಯರಿರಲಿದ್ದು, ಅವರನ್ನು ನಗರ ಪಾಲಿಕೆ ಸಭೆಯಲ್ಲಿ ಕೌನ್ಸಿಲರ್‌ಗಳು ಆಯ್ಕೆ ಮಾಡಲಿದ್ದಾರೆ. ಅಲ್ಲದೆ, ಆ ಐವರಲ್ಲಿ ಒಬ್ಬರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗುತ್ತದೆ. ಈ ಸ್ಥಾಯಿ ಸಮಿತಿಗಳಿಗೆ ಆಯ್ಕೆಯಾದ ಸದಸ್ಯರ ಅವಧಿ 30 ತಿಂಗಳವರೆಗೆ ಇರಲಿದೆ ಎಂದು ವಿಧೇಯಕದಲ್ಲಿ ಉಲ್ಲೇಖಿಸಲಾಗಿದೆ.
5 ಪಾಲಿಕೆ ಮಾಡಲು ಸರ್ಕಾರ ನಿರ್ಧಾರ?
ಕಳೆದ ಐದು ವರ್ಷಗಳ ಹಿಂದೆಯೇ ಬಿಬಿಎಂಪಿ ಪುನರ್‌ರಚನಾ ವರದಿ ಸಲ್ಲಿಸಲಾಗಿದೆ. ಅದರಲ್ಲಿ 5 ಪಾಲಿಕೆ ರಚನೆ, 400 ವಾರ್ಡ್‌ಗಳ ವಿಂಗಡಣೆ ಕುರಿತು ಪ್ರಸ್ತಾಪಿಸಲಾಗಿತ್ತು. ಆ ವರದಿಯನ್ನು ಸರ್ಕಾರ ಈ ಹಿಂದೆಯೇ ಅಂಗೀಕರಿಸಿದೆ. ಹೀಗಾಗಿ, ಆ ವರದಿಯಲ್ಲಿನ ಶಿಫಾರಸುಗಳ ಅನುಷ್ಠಾನಕ್ಕಾಗಿ ಕಾಯಿದೆ ರೂಪಿಸಬೇಕಿದೆ. ಈ ವಿಧೇಯಕದ ಅನ್ವಯ 1ರಿಂದ 10 ಪಾಲಿಕೆ ರಚಿಸಬಹುದು. ಆದರೆ ಸರ್ಕಾರ ಐದು ಪಾಲಿಕೆ ಮಾತ್ರ ರಚಿಸಬಹುದು ಎಂದು ಸಮಿತಿ ಸದಸ್ಯರೊಬ್ಬರು ತಿಳಿಸಿದರು.
ಶಿಫಾರಸು ಯಥಾವತ್ ಅಳವಡಿಕೆ ಇಲ್ಲ?
ಬಿ.ಎಸ್.ಪಾಟೀಲ್ ನೇತೃತ್ವದ ಸಮಿತಿಯು ಜುಲೈ ತಿಂಗಳಲ್ಲಿ ವರದಿ ಸಲ್ಲಿಸಿರುವ ಅಂತಿಮ ವರದಿಯಲ್ಲಿನ ಅಂಶಗಳಿಗೂ ಸೋಮವಾರ ಸಂಜೆ ಸಚಿವ ಸಂಪುಟದಲ್ಲಿ ಒಪ್ಪಿಗೆ ಪಡೆದಿರುವ ವಿಧೇಯಕದಲ್ಲಿರುವ ಅಂಶಗಳಲ್ಲಿ ಹಲವು ಬದಲಾವಣೆಗಳು ಆಗಿವೆ ಎಂದು ತಿಳಿದುಬಂದಿದೆ. ಹೀಗಾಗಿ ಪಾಟೀಲ್ ಸಮಿತಿ ವರದಿಯ ಶಿಫಾರಸುಗಳನ್ನು ಸರ್ಕಾರ ಯಥಾವತ್ತಾಗಿ ಅಂಗೀಕರಿಸಲಿದೆ ಎಂಬ ನಿರೀಕ್ಷೆ ಹುಸಿಯಾಗಿದೆ.