ಎಸ್‌ಟಿಜಿ ಶಿಕ್ಷಣ ಸಂಸ್ಥೆ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಅತ್ಯುತ್ತಮ ಸೌಲಭ್ಯಗಳು, ಅನುಭವಿ ಉಪನ್ಯಾಸಕರಿಂದ ಮಕ್ಕಳಿಗೆ ಭೋದನೆ ಮಾಡುವ ಕ್ರಮವಹಿಸಿದ್ದೇವೆ. ಪೋಷಕರು ಮಕ್ಕಳ ಸುರಕ್ಷತೆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ.

ಕನ್ನಡಪ್ರಭ ವಾರ್ತೆ ಪಾಂಡವಪುರ

ಎಸ್‌ಟಿಜಿ ಶಿಕ್ಷಣ ಸಂಸ್ಥೆಯೂ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಜತೆಗೆ ಇಲ್ಲಿ ಉತೀರ್ಣರಾಗಿ ಹೊರ ಹೋದ ಪ್ರತಿಭಾವಂತ ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಪ್ರಗತಿಗೂ ನೆರವಾಗುತ್ತಿದೆ ಎಂದು ಸಂಸ್ಥೆ ಅಧ್ಯಕ್ಷರು ಹಾಗೂ ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಹೇಳಿದರು.

ತಾಲೂಕಿನ ಚಿನಕುರಳಿ ಗ್ರಾಮದಲ್ಲಿ ಇರುವ ಎಸ್‌ಟಿಜಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಪ್ರಥಮ ಪಿಯುಸಿ ವಿದ್ಯಾರ್ಥಿಗಳ-ಪೋಷಕರ ಅಭಿಯಾನ ಹಾಗೂ ಕಾಲೇಜು ಪ್ರಾರಂಭೋತ್ಸವದಲ್ಲಿ ದ್ವಿತೀಯ ಪಿಯುಸಿಯಲ್ಲಿ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ತಲಾ 10 ಗ್ರಾಂ ಚಿನ್ನದ ಉಡುಗೊರೆ ನೀಡಿ ಗೌರವಿಸಿ ಬಳಿಕ ಮಾತನಾಡಿದರು.

ಸಂಸ್ಥೆಯೂ ಗುಣಮಟ್ಟದ ಶಿಕ್ಷಣ ನೀಡಲು ಶ್ರಮಿಸುತ್ತಿದೆ. ಅದಕ್ಕೆ ಪೂರಕವಾಗಿ ವಿದ್ಯಾರ್ಥಿಗಳಿಗೆ ಅಗತ್ಯವಿರುವ ಅತ್ಯುತ್ತಮ ಸೌಲಭ್ಯಗಳು, ಅನುಭವಿ ಉಪನ್ಯಾಸಕರಿಂದ ಮಕ್ಕಳಿಗೆ ಭೋದನೆ ಮಾಡುವ ಕ್ರಮವಹಿಸಿದ್ದೇವೆ. ಪೋಷಕರು ಮಕ್ಕಳ ಸುರಕ್ಷತೆ ಬಗ್ಗೆ ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು.

ಸಂಸ್ಥೆ ಸಿಇಒ ಸಿ.ಪಿ.ಶಿವರಾಜು ಮಾತನಾಡಿ, ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಜತೆಗೆ ಉನ್ನತ ಶಿಕ್ಷಣಕ್ಕೆ ಅನುಕೂಲವಾಗಲು ಎಸ್‌ಟಿಜಿ ಅಕಾಡೆಮಿ ಪ್ರಾರಂಭಿಸಿ ನುರಿತ ಉಪನ್ಯಾಸಕರಿಂದ ನೀಟ್, ಸಿಇಟಿ ಹಾಗೂ ಜೆಇಇ ತರಬೇತಿಯನ್ನು ಕೊಡಿಸಲಾಗುತ್ತಿದೆ ಎಂದರು.

ಕಾಲೇಜಿನಲ್ಲಿ ಓದಿದಂತಹ ವಿದ್ಯಾರ್ಥಿಗಳು ವೈದ್ಯಕೀಯ ಹಾಗೂ ತಾಂತ್ರಿಕ ವಿಶ್ವವಿದ್ಯಾಲಯಗಳಿಗೆ ಆಯ್ಕೆಯಾಗುವ ಮೂಲಕ ಉನ್ನತ ಶಿಕ್ಷಣ ಪಡೆಯುತ್ತಿದ್ದಾರೆ. ಇದು ನಮ್ಮ ಹಾಗೂ ವಿದ್ಯಾರ್ಥಿಗಳ ಶ್ರಮಕ್ಕೆ ಸಿಕ್ಕ ಪ್ರತಿಫಲವಾಗಿದೆ ಎಂದು ತಿಳಿಸಿದರು.

ಈಗ ಕಾಲೇಜಿಗೆ ದಾಖಲಾಗಿರುವ ಎಲ್ಲಾ ವಿದ್ಯಾರ್ಥಿಗಳು ಸಹ ಉಪನ್ಯಾಸಕರ ಬೋದನೆ ಜತೆಗೆ ಕಾಲೇಜಿನಲ್ಲಿ ದೊರೆಯುವ ಎಲ್ಲಾ ಶೈಕ್ಷಣಿಕ ಚಟುವಟಿಕೆಗಳಲ್ಲೂ ಶ್ರದ್ಧೆಯಿಂದ ತೊಡಗಿಸಿಕೊಳ್ಳುವ ಮೂಲಕ ಮುಂದಿನ ತಮ್ಮ ಉಜ್ವಲ ಭವಿಷ್ಯವನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಇದೇ ವೇಳೆ ದ್ವಿತೀಯ ಪರೀಕ್ಷೆಯಲ್ಲಿ ಅಧಿಕ ಅಂಕಗಳಿಸಿದ ಚಿರಾಗ್‌ಗೌಡ ಆರ್., ಮತ್ತು ಸಹನ ಟಿ.ಎಸ್ ಎಂಬ ಇಬ್ಬರು ವಿದ್ಯಾರ್ಥಿಗಳಿಗೆ ತಲಾ 10 ಗ್ರಾಂ ಚಿನ್ನದ ಬಹುಮಾನ ನೀಡಿ ಗೌರವಿಸಲಾಯಿತು. ಜತೆಗೆ ಕಳೆದ ಶೈಕ್ಷಣಿಕ ಸಾಲಿನಲ್ಲಿ ಕಾಲೇಜಿನಲ್ಲಿ ಓದಿ ವೈದ್ಯಕೀಯ ಶಿಕ್ಷಣ ಕ್ಷೇತ್ರಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಸ್ಚೆತಸ್ಕೋಪ್ ಹಾಗೂ ಏಪ್ರಾನ್ ನೀಡಿ ಗೌರವಿಸಲಾಯಿತು. ಕಾರ್‍ಯಕ್ರಮದಲ್ಲಿ ಪಾಲ್ಗೊಂಡಿದ್ದ 4 ಸಾವಿರಕ್ಕೂ ಅಧಿಕ ಮಂದಿ ಪೋಷಕರು, ವಿದ್ಯಾರ್ಥಿಗಳಿಗೆ ದೇಶಿ ಸಂಸ್ಕೃತಿಯ ಓಳಿಗೆ ಊಟ ಹಾಕುವ ಮೂಲಕ ಸತ್ಕರಿಸಲಾಯಿತು.

ಕಾರ್‍ಯಕ್ರಮದಲ್ಲಿ ಜಿಪಂ ಮಾಜಿ ಸದಸ್ಯೆ ನಾಗಮ್ಮ ಪುಟ್ಟರಾಜು, ಕಾಲೇಜಿ ಪ್ರಾಂಶುಪಾಲ ಟಿ.ಮಾರುತಿ, ಆಡಳಿತಾಧಿಕಾರಿ ನಿವೇದಿತಾ ನಾಗೇಶ್, ಜೀವಶಾಸ್ತ್ರ ಮುಖ್ಯಸ್ಥ ವಿ.ಟಿ.ರಘುಸ್ವಾಮಿ, ನೀಟ್ ಮುಖ್ಯಸ್ಥ ದೇವಿ ಪ್ರಸಾದ್, ಜೆಇಇ ಮುಖ್ಯಸ್ಥ ವಿಜಯ್ ಪ್ರಕಾಶ್ ಹಾಗೂ ಸಿಬ್ಬಂದಿ ಪೋಷಕರು ಹಾಜರಿದ್ದರು.