ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಇತರರ ವಿರುದ್ಧದ ಮುಡಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು (ಇ.ಡಿ.) ₹20.85 ಕೋಟಿ ಮೌಲ್ಯದ ಆರು ಅಕ್ರಮ ಮುಡಾ ನಿವೇಶನಗಳು, ಒಂದು ವಾಣಿಜ್ಯ ಕಟ್ಟಡ ಸೇರಿದಂತೆ 10 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.
ಕನ್ನಡಪ್ರಭ ವಾರ್ತೆ ಬೆಂಗಳೂರು
ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ಇತರರ ವಿರುದ್ಧದ ಮುಡಾ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಜಾರಿ ನಿರ್ದೇಶನಾಲಯವು (ಇ.ಡಿ.) ₹20.85 ಕೋಟಿ ಮೌಲ್ಯದ ಆರು ಅಕ್ರಮ ಮುಡಾ ನಿವೇಶನಗಳು, ಒಂದು ವಾಣಿಜ್ಯ ಕಟ್ಟಡ ಸೇರಿದಂತೆ 10 ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ.ಈ ಮೂಲಕ ಈ ಪ್ರಕರಣದಲ್ಲಿ ಈವರೆಗೆ ಇ.ಡಿ.ಒಟ್ಟು ₹460 ಕೋಟಿ ಮೌಲ್ಯದ ಅಕ್ರಮ ಆದಾಯ ಜಪ್ತಿ ಮಾಡಿದಂತಾಗಿದೆ. ಇ.ಡಿ.ತನಿಖೆಯಲ್ಲಿ ಸಿದ್ಧರಾಮಯ್ಯ ಅವರ ಆಪ್ತ ಹಾಗೂ ಮುಡಾದ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರು ಮುಡಾ ನಿವೇಶನಗಳ ರೂಪದಲ್ಲಿ ಅಕ್ರಮ ನಿವೇಶನ ಹಂಚಿಕೆಗಾಗಿ ಪರಿಹಾರ ಪಡೆದಿರುವುದು ಬೆಳಕಿಗೆ ಬಂದಿದೆ.
ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣ ಸಂಬಂಧ ಮೈಸೂರು ಲೋಕಾಯುಕ್ತ ಪೊಲೀಸರು ದಾಖಲಿಸಿದ್ದ ಎಫ್‌ಐಆರ್ ಆಧಾರದ ಮೇಲೆ ಇ.ಡಿ.ತನಿಖೆ ಆರಂಭಿಸಿತ್ತು. ಇ.ಡಿ.ಅಧಿಕಾರಿಗಳು 2024ರ ಅ.18 ಮತ್ತು 28ರಂದು ಮೈಸೂರಿನ ಮುಡಾ ಕಚೇರಿ ಮೇಲೆ ದಾಳಿ ನಡೆಸಿ ಶೋಧ ನಡೆಸಿದ್ದರು. ಈ ವೇಳೆ ನಿಯಮ ಉಲ್ಲಂಘಿಸಿ ಅಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವುದು ಬೆಳಕಿಗೆ ಬಂದಿತ್ತು. ಈ ಹಗರಣದಲ್ಲಿ ಮುಡಾ ಅಧಿಕಾರಿಗಳು, ರಿಯಲ್ ಎಸ್ಟೇಟ್ ಉದ್ಯಮಿಗಳು ಭಾಗಿಯಾಗಿರುವುದು ಬಹಿರಂಗವಾಗಿತ್ತು. ಪರಿಹಾರವಾಗಿ ನಿವೇಶನಗಳ ಹಂಚಿಕೆ ಮತ್ತು ವಿನ್ಯಾಸಗಳ ಅನುಮೋದನೆಗೆ ಹಣಕಾಸು ವ್ಯವಹಾರ ನಡೆದಿರುವುದಕ್ಕೆ ಇ.ಡಿ.ಪುರಾವೆಗಳನ್ನು ಸಂಗ್ರಹಿಸಿತ್ತು.ಈ ಮುಡಾ ಹಗರಣ ಸಂಬಂಧ ಇ.ಡಿ.ಈ ಹಿಂದೆ ಅಕ್ರಮವಾಗಿ ಮಂಜೂರಾದ 283 ಮುಡಾ ನಿವೇಶನಗಳು ಮತ್ತು ಮೂರು ವೈಯಕ್ತಿಕ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಮುಡಾ ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ್ದ ಮುಡಾ ಮಾಜಿ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ಅವರ ನಿವಾಸದ ಮೇಲೂ ಇ.ಡಿ.ಅಧಿಕಾರಿಗಳು ದಾಳಿ ನಡೆಸಿದ್ದರು. ಬಳಿಕ, ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಸೆ.16ರಂದು ಜಿ.ಟಿ.ದಿನೇಶ್ ಕುಮಾರ್ ಅವರನ್ನು ಬಂಧಿಸಿದ್ದರು. ಸದ್ಯ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
ಇ.ಡಿ.ತನಿಖೆಯಲ್ಲಿ ಜಿ.ಟಿ.ದಿನೇಶ್ ಕುಮಾರ್ ಅವರ ಮುಡಾ ಅಕ್ರಮಗಳು ಬಹಿರಂಗವಾಗಿದ್ದವು. ಈ ಅಕ್ರಮಗಳಿಂದ ಗಳಿಸಿದ ಆದಾಯವನ್ನು ಸಂಬಂಧಿಕರು, ಸಹಚರರ ಹೆಸರಿನಲ್ಲಿ ಸ್ಥಿರಾಸ್ತಿ ಖರೀದಿಸಲು ಮತ್ತು ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಬಳಸಿರುವುದು ಬೆಳಕಿಗೆ ಬಂದಿತ್ತು. ಇದೀಗ ಹೆಚ್ಚಿನ ತನಿಖೆಯಲ್ಲಿ ಮುಡಾದ ಮಾಜಿ ಅಧ್ಯಕ್ಷ ಕೆ.ಮರೀಗೌಡ ಅವರು ಮುಡಾ ನಿವೇಶನಗಳ ರೂಪದಲ್ಲಿ ಅಕ್ರಮ ನಿವೇಶನ ಹಂಚಿಕೆಗಾಗಿ ಪರಿಹಾರ ಪಡೆದಿರುವುದು ತಿಳಿದು ಬಂದಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ ಎಂದು ಇ.ಡಿ.ತಿಳಿಸಿದೆ.