ಬೆಂಗಳೂರು : ಗುಣಮಟ್ಟದ ಆರೋಗ್ಯ ಸೇವೆ ನೀಡುವ 10 ನಮ್ಮ ಕ್ಲಿನಿಕ್‌ನಲ್ಲಿ ರೋಗಿಗಳ ಕೊರತೆ!

| Published : Nov 15 2024, 01:30 AM IST / Updated: Nov 15 2024, 10:52 AM IST

ಬೆಂಗಳೂರು : ಗುಣಮಟ್ಟದ ಆರೋಗ್ಯ ಸೇವೆ ನೀಡುವ 10 ನಮ್ಮ ಕ್ಲಿನಿಕ್‌ನಲ್ಲಿ ರೋಗಿಗಳ ಕೊರತೆ!
Share this Article
  • FB
  • TW
  • Linkdin
  • Email

ಸಾರಾಂಶ

ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಆರಂಭಗೊಂಡ 222 ನಮ್ಮ ಕ್ಲಿನಿಕ್‌ಗಳ ಪೈಕಿ 10 ಕ್ಲಿನಿಕ್‌ಗಳಲ್ಲಿ ದಿನಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ ಎರಡಂಕಿಯನ್ನೂ ತಲುಪುತ್ತಿಲ್ಲ.

ವಿಶ್ವನಾಥ ಮಲೇಬೆನ್ನೂರು

 ಬೆಂಗಳೂರು : ಗುಣಮಟ್ಟದ ಆರೋಗ್ಯ ಸೇವೆ ನೀಡುವ ಉದ್ದೇಶದಿಂದ ಆರಂಭಗೊಂಡ 222 ನಮ್ಮ ಕ್ಲಿನಿಕ್‌ಗಳ ಪೈಕಿ 10 ಕ್ಲಿನಿಕ್‌ಗಳಲ್ಲಿ ದಿನಕ್ಕೆ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಸಂಖ್ಯೆ ಎರಡಂಕಿಯನ್ನೂ ತಲುಪುತ್ತಿಲ್ಲ.

ನಗರದ ನಮ್ಮ ಕ್ಲಿನಿಕ್‌ಗಳ ಕಾರ್ಯ ವೈಖರಿ ಪರಿಶೀಲನೆಗೆ ಬಿಬಿಎಂಪಿ ಆರೋಗ್ಯ ವಿಭಾಗವು 2024ರ ಏಪ್ರಿಲ್‌ನಿಂದ ಅಕ್ಟೋಬರ್‌ ವರೆಗಿನ 7 ತಿಂಗಳು ನಮ್ಮ ಕ್ಲಿನಿಕ್‌ಗಳಲ್ಲಿ ಚಿಕಿತ್ಸೆ ಪಡೆದ ರೋಗಿಗಳ ಸಂಖ್ಯೆಯ ಪರಿಶೀಲನೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

ಅಂತಹ ನಮ್ಮ ಕ್ಲಿನಿಕ್‌ಗಳು ಬೊಮ್ಮನಹಳ್ಳಿ, ಮಹದೇವಪುರ, ದಕ್ಷಿಣ, ಪೂರ್ವ ವಲಯದ ತಲಾ 2 ನಮ್ಮ ಕ್ಲಿನಿಕ್‌ ಇವೆ. ಯಲಹಂಕ ಹಾಗೂ ಆರ್‌ ಆರ್‌ನಗರ ವಲಯದಲ್ಲಿ ತಲಾ 1 ಕ್ಲಿನಿಕ್‌ ಇವೆ.

ಸರಾಸರಿ ದಿನಕ್ಕೆ ಒಬ್ಬ ರೋಗಿಗೆ ಚಿಕಿತ್ಸೆ:  ಆರ್‌ಆರ್‌ನಗರ ವಲಯದ ತಲಘಟ್ಟಪುರದ ನಮ್ಮ ಕ್ಲಿನಿಕ್‌ನಲ್ಲಿ ಕಳೆದ 7 ತಿಂಗಳಲ್ಲಿ ಸರಾಸರಿ ದಿನಕ್ಕೆ ಒಬ್ಬ ರೋಗಿ ಮಾತ್ರ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಒಟ್ಟಾರೆ 7 ತಿಂಗಳಲ್ಲಿ 203 ರೋಗಿಗಳು ನಮ್ಮ ಕ್ಲಿನಿಕ್‌ಗೆ ಭೇಟಿ ನೀಡಿ ಚಿಕಿತ್ಸೆ ಪಡೆದಿದ್ದಾರೆ. ಸರಾಸರಿ ಪ್ರತಿ ತಿಂಗಳಿಗೆ 29 (ಅಂದಾಜು ದಿನಕ್ಕೆ ಒಬ್ಬರು) ಮಂದಿಯಂತೆ ಚಿಕಿತ್ಸೆ ಪಡೆದಿದ್ದಾರೆ.

ಉಳಿದಂತೆ ಬೊಮ್ಮನಹಳ್ಳಿಯ ಆರ್‌ಬಿಐ ಲೇಔಟ್‌ನ ನಮ್ಮ ಕ್ಲಿನಿಕ್‌ನಲ್ಲಿ ಸರಾಸರಿ 9 ಮಂದಿ, ವಿನಾಯಕನಗರ ಲೇಔಟ್‌ನ ಕ್ಲಿನಿಕ್‌ನಲ್ಲಿ 6 ಮಂದಿ, ಪೂರ್ವದ ಕೋನೇನ ಆಗ್ರಹಾರದ ಕ್ಲಿನಿಕ್‌ನಲ್ಲಿ 4 ಮಂದಿ, ಪುಲಕೇಶಿನಗರದ ಕ್ಲಿನಿಕ್‌ನಲ್ಲಿ 9 ಮಂದಿ, ಮಹದೇವಪುರದ ದೊಡ್ಡಾನೆಕುಂದಿಯ ಕ್ಲಿನಿಕ್‌ನಲ್ಲಿ 6 ಮಂದಿ, ಮಹದೇವಪುರದ ಮುನ್ನೆಕೊಳಾಲದ ಕ್ಲಿನಿಕ್‌ನಲ್ಲಿ 7 ಮಂದಿ, ದಕ್ಷಿಣ ವಲಯದ ಚಿಕ್ಕಪೇಟೆ ಕ್ಲಿನಿಕ್‌ನಲ್ಲಿ 5, ಲಕ್ಕಸಂದ್ರದ ಕ್ಲಿನಿಕ್‌ ಹಾಗೂ ಯಲಹಂಕದ ಅಮೃತ್‌ ಹಳ್ಳಿಯ ನಮ್ಮ ಕ್ಲಿನಿಕ್‌ನಲ್ಲಿ ಸರಾಸರಿ ತಲಾ 9 ಮಂದಿ ಮಾತ್ರ ಚಿಕಿತ್ಸೆ ಪಡೆದುಕೊಂಡಿದ್ದಾರೆ.

ಬೊಮ್ಮನಹಳ್ಳಿ ಕ್ಲಿನಿಕ್‌ಗೆ 50 ಕ್ಕಿಂತ ಹೆಚ್ಚು ರೋಗಿ ಭೇಟಿ :  222 ನಮ್ಮ ಕ್ಲಿನಿಕ್‌ಗಳ ಪೈಕಿ ಸರಾಸರಿ ದಿನಕ್ಕೆ 50ಕ್ಕಿಂತ ಹೆಚ್ಚು ರೋಗಿಗಳು ಭೇಟಿ ನೀಡುವ ಒಂದೇ ಒಂದು ನಮ್ಮ ಕ್ಲಿನಿಕ್‌ ಬೊಮ್ಮನಹಳ್ಳಿಯ ರೂಪೇನ ಅಗ್ರಹಾರದಲ್ಲಿದೆ. ಈ ಕ್ಲಿನಿಕ್‌ಗೆ ಸರಾಸರಿ ದಿನಕ್ಕೆ 53 ಮಂದಿ ಭೇಟಿ ನೀಡಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದಂತೆ 10ರಿಂದ 19 ರೋಗಿ ಭೇಟಿ ನೀಡುವ 63 ನಮ್ಮ ಕ್ಲಿನಿಕ್‌ಗಳಿವೆ. 20 ರಿಂದ 29 ರೋಗಿಗಳ ಭೇಟಿ ನೀಡುವ ಸಂಖ್ಯೆ 106 ಕ್ಲಿನಿಕ್‌, 30 ರಿಂದ 39 ಮಂದಿ ಭೇಟಿ ನೀಡುವ 29 ಕ್ಲಿನಿಕ್‌, 40 ರಿಂದ 49 ಮಂದಿ ಭೇಟಿ ನೀಡುವ 13 ನಮ್ಮ ಕ್ಲಿನಿಕ್‌ ಇವೆ.

ಸುಧಾರಣೆಗೂ ಕ್ರಮ : ಕೆಲವು ಕಡೆ ವೈದ್ಯರ ಸಮಸ್ಯೆಯಿಂದ ರೋಗಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿಲ್ಲ. ಇದೀಗ ಆ ಕ್ಲಿನಿಕ್‌ಗಳಿಗೆ ಇದೀಗ ವೈದ್ಯರನ್ನು ನೇಮಕ ಮಾಡಲಾಗಿದೆ. ವೈದ್ಯರು ಇದ್ದರೂ ರೋಗಿ ಸಂಖ್ಯೆ ಕಡಿಮೆ ಇರುವ ಕಡೆ ವೈದ್ಯರ ಬದಲಾವಣೆ ಮಾಡಲಾಗಿದೆ. ನಮ್ಮ ಕ್ಲಿನಿಕ್‌ ವೈದ್ಯರ ವೇತನವನ್ನು ₹60 ಸಾವಿರಕ್ಕೆ ಹೆಚ್ಚಳ ಮಾಡಿ ಆದೇಶಿಸಲಾಗಿದೆ. ಸಿಬ್ಬಂದಿ ಸೇರಿ ಔಷಧಿ ಶೇಖರಣೆಗೆ ಫ್ರಿಡ್ಜ್‌, ಸಿಸಿಟಿವಿ ಕ್ಯಾಮೆರಾ, ಎಲ್‌ಇಡಿ ಟಿವಿ ಸೇರಿ ಮೊದಲಾದ ಅಗತ್ಯ ಮೂಲಸೌಕರ್ಯ ಒದಗಿಸುವುದಕ್ಕೆ ಕ್ರಮವಹಿಸಲಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ಇನ್ನೂ 38 ನಮ್ಮ ಕ್ಲಿನಿಕ್‌ ಆರಂಭ: ಬಿಬಿಎಂಪಿ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರವಾರು ಒಂದರಂತೆ ನಮ್ಮ ಕ್ಲಿನಿಕ್‌ ಆರಂಭಿಸುವುದಕ್ಕೆ ಸರ್ಕಾರ ಆದೇಶಿಸಿದೆ. ಜತೆಗೆ, ವಿಧಾನಸೌಧ, ಆರೋಗ್ಯ ಸೌಧ, ಹೈಕೋರ್ಟ್‌, ಸಿಟಿ ಸಿವಿಲ್‌ ಕೋರ್ಟ್‌, ಎಂಎಸ್‌ ಕಟ್ಟಡ ಸೇರಿ ನಗರದ ವಿವಿಧ ಕಡೆ ಇರುವ 7 ಆರೋಗ್ಯ ಇಲಾಖೆಯ ಚಿಕಿತ್ಸಾಲಯಗಳನ್ನು ಮೇಲ್ದರ್ಜೆಗೇರಿಸಿ ನಮ್ಮ ಕ್ಲಿನಿಕ್‌ಗಳಾಗಿ ಪರಿವರ್ತನೆಗೆ ಮಾಡಲಾಗುತ್ತಿದೆ.