ಸಾರಾಂಶ
ಸವಣೂರು: ಪಟ್ಟಣದ ಪುರಸಭೆಯ ಸಭಾಭವನದಲ್ಲಿ ಸೋಮವಾರ 2025- 26ನೇ ಸಾಲಿನ ಆಯವ್ಯಯವನ್ನು ಪುರಸಭೆ ಅಧ್ಯಕ್ಷ ಅಲ್ಲಾವುದ್ದೀನ ಮನಿಯಾರ ಪರವಾಗಿ ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ಅವರು ₹42 ಲಕ್ಷ ಉಳಿತಾಯ ಅಂದಾಜಿನ ಬಜೆಟ್ ಮಂಡಿಸಿದರು.ಪಟ್ಟಣದ ಅಭಿವೃದ್ಧಿಯನ್ನು ದೃಷ್ಟಿಯಲ್ಲಿಟ್ಟುಕೊಂಡು 2025- 26ನೇ ಸಾಲಿನಲ್ಲಿ ರಾಜಸ್ವ ಖಾತೆಯಲ್ಲಿ ₹1009.70 ಲಕ್ಷ ಬಂಡವಾಳ ಖಾತೆಯಲ್ಲಿ ₹1477 ಲಕ್ಷ ಹಾಗೂ ಅಸಾಧಾರಣ ವೆಚ್ಚದ ಖಾತೆಯಲ್ಲಿ ₹472.22 ಲಕ್ಷ ಸೇರಿದಂತೆ ಒಟ್ಟು ₹2958.92 ಲಕ್ಷ ಸ್ವೀಕೃತಿಯನ್ನು ನಿರೀಕ್ಷಿಸುವ ಮೂಲಕ ₹2916.83 ಲಕ್ಷ ಅಂದಾಜು ವೆಚ್ಚದೊಂದಿಗೆ ₹42.09 ಲಕ್ಷ ಅಂದಾಜಿನ ಉಳಿತಾಯದ ಬಜೆಟ್ಟನ್ನು ರೂಪಿಸಲಾಗಿದೆ ಎಂದರು.ಸರ್ಕಾರದ ವಿಶೇಷ ಅನುದಾನ ನಿರೀಕ್ಷೆಯಲ್ಲಿ ವಿವಿಧ ಮೂಲಗಳಿಂದ ಸುಮಾರು ₹2959 ಲಕ್ಷದಲ್ಲಿ ₹2917 ಲಕ್ಷ ಖರ್ಚಿನೊಂದಿಗೆ ಅಂದಾಜು ₹42 ಲಕ್ಷ ಉಳಿತಾಯ ಯೋಜನೆಯನ್ನು ರೂಪಿಸಲಾಗಿದೆ ಎಂದು ಮುಖ್ಯಾಧಿಕಾರಿ ನೀಲಪ್ಪ ಹಾದಿಮನಿ ತಿಳಿಸಿದರು.ರಾಜಸ್ವ ಸಂಗ್ರಹಣೆ: ನೀರು ಬಳಕೆ ಶುಲ್ಕದಿಂದ ₹65 ಲಕ್ಷ, ಹೊಸ ಸಂಪರ್ಕಗಳು, ದಂಡ, ಇತರೆ ಶುಲ್ಕಗಳಿಂದ ₹5 ಲಕ್ಷ, ಆಸ್ತಿ ತೆರಿಗೆ ವಸೂಲಾತಿಯಿಂದ ₹90 ಲಕ್ಷ, ವಾಣಿಜ್ಯ ಮಳಿಗೆಗಳಿಂದ ₹16 ಲಕ್ಷ, ವ್ಯಾಪಾರ ಪರವಾನಗಿಯಿಂದ ₹3.30 ಲಕ್ಷ, ಸಂತೆ ಹಾಗೂ ಮಾರುಕಟ್ಟೆ ಹರಾಜುಗಳಿಂದ ₹8.25 ಲಕ್ಷ, ಎಸ್‌ಡಬ್ಲ್ಯುಎಂ ಶುಲ್ಕ ₹22 ಲಕ್ಷ, ಕಟ್ಟಡ ಪರವಾನಗಿಯಿಂದ ₹8 ಲಕ್ಷ, ಅಭಿವೃದ್ಧಿ ಶುಲ್ಕ ₹6 ಲಕ್ಷ, ಸಕ್ಕಿಂಗ್ ಮಷಿನ್ ಬಾಡಿಗೆ ಆದಾಯ ₹1.50 ಲಕ್ಷ ಹಾಗೂ ಇತರೆ ಮೂಲಗಳಿಂದ ₹36.15 ಲಕ್ಷ ಸೇರಿ ಒಟ್ಟು ₹261.20 ಲಕ್ಷಗಳನ್ನು ಸ್ವಂತ ಮೂಲದಿಂದ ಸಂಗ್ರಹಿಸಲಾಗುವುದು.ಮುಕ್ತನಿಧಿ ಅನುದಾನ 60 ಲಕ್ಷ, ವೇತನ ನಿಧಿ ₹437 ಲಕ್ಷ, ವಿದ್ಯುತ್ ಬಿಲ್ ಪಾವತಿ ಅನುದಾನ ₹240 ಲಕ್ಷ, ಕುಡಿಯುವ ನೀರಿನ ಪರಿಹಾರ ಯೋಜನೆ ₹11.50 ಲಕ್ಷ ಸೇರಿ ಒಟ್ಟು ₹668.50 ಲಕ್ಷ ನಿರೀಕ್ಷೆಯನ್ನು ಹೊಂದಲಾಗಿದೆ. ಈ ಅನುದಾನದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳು, ಸ್ಮಶಾನಗಳ ಅಭಿವೃದ್ಧಿ, ಶವ ವಾಹನ ಖರೀದಿ ಸೇರಿದಂತೆ ಹಲವಾರು ಯೋಜನೆಗಳನ್ನು ರೂಪಿಸಲಾಗಿದೆ. ಕೇಂದ್ರ ಹಣಕಾಸು ಆಯೋಗದಿಂದ ಸುಮಾರು ₹200 ಲಕ್ಷ ಅನುದಾನ(15ನೇ ಹಣಕಾಸು) ನಿರೀಕ್ಷೆ ಹೊಂದಲಾಗಿದೆ.
ವಿಶೇಷ ಅನುದಾನ: ಸರ್ಕಾರದಿಂದ ವಿಶೇಷ ಅನುದಾನದಡಿ ₹1100 ಲಕ್ಷ, ಆಶ್ರಯ ಬಡಾವಣೆಗಳ ಅಭಿವೃದ್ಧಿಗೆ ₹10 ಲಕ್ಷ, ಪೌರಕಾರ್ಮಿಕರ ಗೃಹಭಾಗ್ಯ ನಿರ್ಮಾಣಕ್ಕೆ ₹20 ಲಕ್ಷ ಅನುದಾನ ನಿರೀಕ್ಷೆಯೊಂದಿಗೆ ರಸ್ತೆ, ಚರಂಡಿ, ಸಣ್ಣ ಸೇತುವೆ, ನೀರು ಸರಬರಾಜು, ಬಡಾವಣೆ ವಿದ್ಯುದ್ದೀಕರಣ ಮಾರ್ಗಗಳು, ಪೌರಕಾರ್ಮಿಕರಿಗೆ ಮನೆಗಳ ನಿರ್ಮಾಣ ಸೇರಿದಂತೆ ವಿವಿಧ ಯೋಜನೆ ರೂಪಿಸಲಾಗಿದೆ.2025- 26ನೇ ಸಾಲಿನ ವಿವಿಧ ಮೂಲದ ವೆಚ್ಚಗಳ ಅಡಿಯಲ್ಲಿ ಸಾಮಾನ್ಯ ಕಚೇರಿ ವೆಚ್ಚಗಳಿಗೆ ₹36.90 ಲಕ್ಷ ಅಂದಾಜು ಮಾಡಲಾಗಿದೆ. ವಿವಿಧ ಮೂಲಭೂತ ಆಸ್ತಿಗಳ ದುರಸ್ತಿ ಮತ್ತು ಕಾರ್ಯಾಚರಣೆಗೆ ಉದ್ದೇಶಿಸಲಾಗಿದೆ. ಸಮಾಜ ಕಲ್ಯಾಣ ಹಾಗೂ ಸಬಲೀಕರಣ ಕಾರ್ಯಕ್ರಮಗಳಾದ ಪರಿಶಿಷ್ಟ ಪಂಗಡಗಳ ಯೋಜನೆ(ಶೇ. 29.10), ಪಟ್ಟಣದ ಇತರೆ ಬಡ ಜನರ ಕಲ್ಯಾಣ ಯೋಜನೆ(ಶೇ. 7.25), ವಿಕಲಚೇತನರ ಕಲ್ಯಾಣ ಯೋಜನೆ(ಶೇ. 5) ಗಳ ಅಭಿವೃದ್ಧಿಗೆ ಕೈಗೊಳ್ಳಲಾಗುವುದು ಎಂದರು.
ಉಪಾಧ್ಯಕ್ಷೆ ಖಮುರಿನ್ನಾಸಾ ಪಟೇಲ್, ಸ್ಥಾಯಿ ಸಮಿತಿ ಅಧ್ಯಕ್ಷ ಉಮೇಶ ಕಲ್ಮಠ, ಮುಖ್ಯ ಎಂಜಿನಿಯರ್ ನಾಗರಾಜ ಮಿರ್ಜಿ, ವ್ಯವಸ್ಥಾಪಕ ಮಹೇಶ ದೊಡ್ಡಣ್ಣವರ ಹಾಗೂ ಸದಸ್ಯರು ಪಾಲ್ಗೊಂಡಿದ್ದರು.