ಸಾರಾಂಶ
ಕನ್ನಡಪ್ರಭ ವಾರ್ತೆ ಮಂಗಳೂರುಅಯೋಧ್ಯೆಯಲ್ಲಿ ಜ.22ರಂದು ನಡೆಯುವ ಶ್ರೀರಾಮ ಲಲ್ಲಾನ ಪ್ರತಿಷ್ಠಾ ಮಹೋತ್ಸವಕ್ಕೆ ಶ್ರೀ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ದೇಶದ ಹಲವು ಸಂತರು, ಗಣ್ಯರನ್ನು ಆಹ್ವಾನಿಸಲಾಗಿದೆ. ದ.ಕ., ಉಡುಪಿ ಸೇರಿ ಮಂಗಳೂರು ವಿಭಾಗದಿಂದ ಒಟ್ಟು 19 ಮಂದಿ ಸ್ವಾಮೀಜಿ ಹಾಗೂ ಪ್ರಮುಖರಿಗೆ ಆಹ್ವಾನ ನೀಡಲಾಗಿದೆ. ಇವರಲ್ಲಿ ಪ್ರತಿಷ್ಠಾಪನೆಯ ಬ್ರಹ್ಮಕಲಶೋತ್ಸವದ ನೇತೃತ್ವ ವಹಿಸಿರುವ ಉಡುಪಿ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ತೆರಳಿದ್ದಾರೆ. ಉಳಿದಂತೆ ದ.ಕ.ಜಿಲ್ಲೆಯಿಂದ ಧರ್ಮಸ್ಥಳ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಸೇರಿದಂತೆ ಸ್ವಾಮೀಜಿ ಹಾಗೂ ಪ್ರಮುಖರು ಸೇರಿ ಒಟ್ಟು 10 ಮಂದಿ ಈಗಾಗಲೇ ಅಯೋಧ್ಯೆಯತ್ತ ಹೊರಟಿದ್ದಾರೆ.
ಯಾರೆಲ್ಲ 9 ಮಂದಿ: ಧರ್ಮಸ್ಥಳ ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ. ವೀರೇಂದ್ರ ಹೆಗ್ಗಡೆ, ಆರ್‌ಎಸ್‌ಎಸ್ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಗುರುಪುರ ಶ್ರೀ ರಾಜಶೇಖರಾನಂದ ಸ್ವಾಮೀಜಿ, ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ಮಹರ್ಷಿ ಓಂಶ್ರೀ ವಿದ್ಯಾನಂದ ಸರಸ್ವತಿ ಹಾಗೂ ಮಾತಾಶ್ರೀ ಶಿವಜ್ಞಾನಮಯಿ ಸರಸ್ವತಿ, ಬಂಟ್ವಾಳ ಕಾಣಿಯೂರಿನ ಶ್ರೀ ಮಹಾಬಲ ಸರಸ್ವತಿ ಸ್ವಾಮೀಜಿ, ವಿಹಿಂಪ ಮುಖಂಡ ಎಂ.ಬಿ. ಪುರಾಣಿಕ್ ಮಂಗಳೂರು, ನಿಟ್ಟೆ ಎಜುಕೇಶನ್ ಟ್ರಸ್ಟ್‌ನ ಟ್ರಸ್ಟಿ ವಿಶಾಲ್ ಹೆಗ್ಡೆ, ಉದ್ಯಮಿ ಜಿತೇಂದ್ರ ಕೊಟ್ಟಾರಿ ಅಯೋಧ್ಯೆಗೆ ತೆರಳಿದ ಪ್ರಮುಖರು. ಬಾಕ್ಸ್‌ಗಳು----3 ದಿನವೂ ಯಕ್ಷಗಾನದಲ್ಲಿ ಶ್ರೀರಾಮ ಪಟ್ಟಾಭಿಷೇಕೋತ್ಸವ ಪ್ರದರ್ಶನಶ್ರೀ ಧರ್ಮಸ್ಥಳ ಮೇಳದಲ್ಲಿ ಅಯೋಧ್ಯೆಯ ಶ್ರೀ ರಾಮನ ಪ್ರಾಣ ಪ್ರತಿಷ್ಠೆಯ ಶುಭ ಸಂದರ್ಭದಲ್ಲಿ ಮೂರು ದಿನವೂ ವಿಶೇಷವಾಗಿ ಶ್ರೀರಾಮನ ಕುರಿತ ಪ್ರಸಂಗ ಪ್ರದರ್ಶನದ ಕೊನೆಗೆ ಶ್ರೀರಾಮ ಪಟ್ಟಾಭಿಷೇಕೋತ್ಸವವನ್ನು ವಿಶೇಷವಾಗಿ ಏರ್ಪಡಿಸಲಿದೆ.ಧರ್ಮಸ್ಥಳ ಧರ್ಮಾಧಿಕಾರಿ ರಾಜರ್ಷಿ ಡಾ. ವೀರೇಂದ್ರ ಹೆಗ್ಗಡೆ ಹಾಗೂ ಮೇಳದ ಯಜಮಾನ ಡಿ. ಹರ್ಷೇಂದ್ರ ಕುಮಾರ್ ಅವರ ಮಾರ್ಗದರ್ಶನದಲ್ಲಿ ಹೇಮಾವತಿ ಹೆಗ್ಗಡೆಯವರ ಆಶಯದಂತೆ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಶ್ರೀ ಧರ್ಮಸ್ಥಳ ಮೇಳದ ಯಕ್ಷಗಾನದಲ್ಲಿ ಮೂರು ದಿನಗಳ ಕಾಲ ಶ್ರೀರಾಮ ಪಟ್ಟಾಭಿಷೇಕದ ವಿಶೇಷ ಪಟ್ಟಾಭಿಷೇಕೋತ್ಸವ ಪ್ರದರ್ಶನವನ್ನು ಯಕ್ಷಗಾನೀಯವಾಗಿ ಪ್ರದರ್ಶಿಸಲಿದೆ. ಶ್ರೀರಾಮದ ಪಟ್ಟಾಭಿಷೇಕಕ್ಕೆ ಅದ್ದೂರಿಯ ಮೆರವಣಿಗೆ, ಪಟ್ಟಾಭಿಷೇಕದಲ್ಲಿ ವಿಶೇಷ ನೃತ್ಯೋತ್ಸವ ಹಾಗೂ ಪಟ್ಟಾಭಿಷಿಕ್ತ ಶ್ರೀರಾಮನ ಸಂದೇಶ ಇದರ ವಿಶೇಷವಾಗಿದೆ. ರಾಮರಾಜ್ಯದ ಕನಸು ಸಾಕಾರಗೊಂಡ ಶುಭ ದಿನದಂದು ಶ್ರೀ ರಾಮನ ಆದರ್ಶವನ್ನು ಸಮಾಜಕ್ಕೆ ಯಕ್ಷಗಾನ ಮೂಲಕ ಸಂದೇಶ ಸಾರುವ ವಿಶೇಷ ಪ್ರದರ್ಶನ ಇದಾಗಿರುತ್ತದೆ. ಮೇಳದ ಮೆನೇಜರ್ ಗಿರೀಶ ಹೆಗ್ಡೆ ಅವರು ಪಟ್ಟಾಭಿಷೇಕದ ವಿಶೇಷ ಪದ್ಯ ರಚನೆ ಮಾಡಿದ್ದು, ಪ್ರಧಾನ ಭಾಗವತ ಸಿರಿಬಾಗಿಲು ರಾಮಕೃಷ್ಣ ಮಯ್ಯ ನಿರ್ದೇಶಿಸಿದ್ದಾರೆ. ಚಾರಿತ್ರಿಕ ಶ್ರೀರಾಮದೇವರ ಪ್ರಾಣ ಪ್ರತಿಷ್ಠೆಯ ಸುಸಂದರ್ಭದಲ್ಲಿ ಕಲಾವಿದರಾದ ನಮಗೆ ಊರಿನ ಇನ್ನಿತರ ಉತ್ಸವದಲ್ಲಿ ಪಾಲ್ಗೊಳ್ಳುವಿಕೆ ಅಸಾಧ್ಯವಾಗಿರುತ್ತದೆ. ಆದ್ದರಿಂದ ಕಲಾವಿದರೆಲ್ಲ ಸೇರಿ ಮೇಳದ ಯಕ್ಷಗಾನದಲ್ಲಿ ವಿಶೇಷವಾಗಿ ಪಟ್ಟಾಭಿಷೇಕದ ಉತ್ಸವವನ್ನು ಆಚರಿಸಲು ನಿರ್ಧರಿಸಿದ್ದೇವೆ ಎಂದು ಸಿರಿಬಾಗಿಲು ರಾಮಕೃಷ್ಣ ಮಯ್ಯ ತಿಳಿಸಿದ್ದಾರೆ. ಮಂದಿರಕ್ಕಾಗಿ ದಾಡಿಬಿಟ್ಟ ನಿವೃತ್ತ ಉಪನ್ಯಾಸಕಅಯೋಧ್ಯೆಯಲ್ಲಿ ಶ್ರೀರಾಮನಿಗೆ ಭವ್ಯ ಮಂದಿರ ನಿರ್ಮಾಣಕ್ಕಾಗಿ ಕಾಸರಗೋಡಿನ ನಿವೃತ್ತ ಉಪನ್ಯಾಸಕರೊಬ್ಬರು ನಾಲ್ಕು ವರ್ಷಗಳಿಂದ ದಾಡಿಬಿಟ್ಟಿದ್ದಾರೆ. ಕಾಸರಗೋಡು ಧನ್ವಂತರಿ ನಗರದ ಅಕ್ಷತಾ ನಿವಾಸದ ಡಾ.ಕೆ.ಕಮಲಾಕ್ಷ ಎಂಬವರೇ ಗಡ್ಡಬಿಟ್ಟು ವ್ರತ ಕೈಗೊಂಡವರು. ಬಹುಭಾಷಾ ವಿದ್ವಾಂಸರಾಗಿ, ಲೇಖಕರಾಗಿರುವ ಡಾ.ಕಮಲಾಕ್ಷ ಅವರು ನಿತ್ಯವೂ ರಾಮನಾಮ ಸ್ಮರಣೆ ಮಾಡುತ್ತಾರೆ. ಮುಸ್ಸಂಜೆ ಕೈಕಾಲು ಮುಖ ತೊಳೆದು ದೇವವರಿಗೆ ದೀಪ ಹಚ್ಚಿ ರಾಮ ಭಜನೆ ಶುರು ಮಾಡುತ್ತಾರೆ. ಈ ಇಳಿವಯಸ್ಸಿನಲ್ಲೂ ಮೂರು ಬಾರಿ ತುಲಸಿ ರಾಮಾಯಣ ಓದಿದ್ದಾರೆ. ಅಲ್ಲದೆ ಲಭ್ಯ ರಾಮಾಯಣ ಕೃತಿ ಓದುತ್ತಾರೆ. ಇದೊಂದು ಅದ್ಭುತ ಅನುಭವ ಎನ್ನುತ್ತಾರೆ. ಆದಷ್ಟು ಬೇಗ ಅಯೋಧ್ಯೆಗೆ ತೆರಳಿ ಶ್ರೀರಾಮಲಲ್ಲಾನ ದರ್ಶನ ಪಡೆದ ಬಳಿಕವೇ ದಾಡಿ ತೆಗೆಸುತ್ತೇನೆ ಎಂದು ವಿನಮ್ರವಾಗಿ ಹೇಳುತ್ತಾರೆ.