ಮಳೆಯ ಅನಿಶ್ಚಿತತೆಯ ನಡುವೆಯೂ ೧೦ ಸಾವಿರ ಹೆಕ್ಟೇರ್ ಭತ್ತದ ನಾಟಿಗೆ ಸಿದ್ಧವಾದ ಹಾನಗಲ್ಲ ತಾಲೂಕಿನ ರೈತ ಸಮುದಾಯ ಈ ವರ್ಷ ಆತಂಕದಲ್ಲಿಯೇ ಕೃಷಿ ಚಟುವಟಿಕೆಗಳಿಗೆ ಮುನ್ನುಗ್ಗುತ್ತಿದೆ.

ಮಳೆ ಕೊರತೆಯಿಂದಾಗಿ ಆತಂಕದಲ್ಲಿಯೇ ಕೃಷಿ ಚಟುವಟಿಕೆ

ಮಾರುತಿ ಶಿಡ್ಲಾಪೂರ

ಕನ್ನಡಪ್ರಭ ವಾರ್ತೆ ಹಾನಗಲ್ಲ

ಮಳೆಯ ಅನಿಶ್ಚಿತತೆಯ ನಡುವೆಯೂ ೧೦ ಸಾವಿರ ಹೆಕ್ಟೇರ್ ಭತ್ತದ ನಾಟಿಗೆ ಸಿದ್ಧವಾದ ಹಾನಗಲ್ಲ ತಾಲೂಕಿನ ರೈತ ಸಮುದಾಯ ಈ ವರ್ಷ ಆತಂಕದಲ್ಲಿಯೇ ಕೃಷಿ ಚಟುವಟಿಕೆಗಳಿಗೆ ಮುನ್ನುಗ್ಗುತ್ತಿದೆ.

ಭತ್ತದ ಕಣಜ ಎಂದೇ ಖ್ಯಾತವಾಗಿದ್ದ ಹಾನಗಲ್ಲ ತಾಲೂಕಿನಲ್ಲಿ ಶೇ.೭೫ರಷ್ಟು ಭತ್ತ ಬೆಳೆಯಲಾಗುತ್ತಿತ್ತು. ತಾಲೂಕಿನಲ್ಲಿರುವ ೮೦೦ಕ್ಕೂ ಅಧಿಕ ನೀರಾವರಿ ಕೆರೆಗಳನ್ನು ಅವಲಂಬಿಸಿ ಭತ್ತದ ನಾಟಿಗೆ ರೈತರು ಮುಂದಾಗುತ್ತಿದ್ದರು. ಕಳೆದ ೩-೪ ದಶಕಗಳಿಂದ ಕೊಳವೆ ಬಾವಿಗಳನ್ನು ಅವಲಂಬಿಸಿ ಕೃಷಿ, ಅದರಲ್ಲೂ ಭತ್ತದ ನಾಟಿಗೆ ಮುಂದಾದ ರೈತರು ಮಳೆಯ ಅಭಾವದಿಂದಾಗಿ ಗೋವಿನಜೋಳ, ಸೋಯಾಅವರೆಯತ್ತ ಚಿತ್ತ ಬೆಳೆಸಿದರು. ಆದರೆ ಬಾಳಂಬೀಡ, ಹಿರೇಕಾಂಸಿ ಸೇರಿದಂತೆ ೧೪ ಏತ ನೀರಾವರಿ ಮೂಲಕ ತಾಲೂಕಿನ ಕೆರೆಗಳಿಗೆ ನೀರು ತುಂಬುವ ಯೋಜನೆ ಮತ್ತೆ ಭತ್ತ ಬೆಳೆಯತ್ತ ರೈತರನ್ನು ಸೆಳೆದಿದೆ.

ಆದರೆ ಪ್ರಸ್ತುತ ವರ್ಷ ಇಡೀ ರಾಜ್ಯದಲ್ಲಿಯೇ ಮಳೆ ಅಭಾವದ ಸೂಚನೆ ಇರುವುದರಿಂದ ಅತಿ ಹೆಚ್ಚು ನೀರಿನ ಲಭ್ಯತೆಯನ್ನು ಅನುಸರಿಸಿ ಬೆಳೆಯಬೇಕಾದ ಭತ್ತದ ನಾಟಿಗೆ ಮತ್ತೆ ಮುಂದಾಗಿದ್ದಾರೆ. ಈಗಾಗಲೇ ಭತ್ತದ ಮಡಿಗಳನ್ನು ಮಾಡಿ ನಾಟಿಗಾಗಿ ಸಸಿಗಳು ಅವರವರ ಜಮೀನಿನಲ್ಲಿ ಸಿದ್ಧವಾಗುತ್ತಿವೆ. ಆದರೆ ಧರ್ಮಾ ಹಾಗೂ ವರದಾ ನದಿಗಳಲ್ಲಿ ನೀರೀಕ್ಷಿತ ನೀರು ಹರಿಯುತ್ತಿಲ್ಲ.

ಆದರೆ ಧರ್ಮಾ ಜಲಾಶಯದ ನೀರನ್ನು ಆಸರೆಯಾಗಿಟ್ಟುಕೊಳ್ಳುವ ವಿಶ್ವಾಸದಿಂದ ಧರ್ಮಾ ಕಾಲುವೆಯ ನೀರನ್ನು ಆಧರಿಸಿದ ರೈತರು ಹೆಚ್ಚು ಪಾಲು ಭತ್ತದ ನಾಟಿಗೆ ಮುಂದಾಗಿದ್ದಾರೆ. ಜುಲೈ ತಿಂಗಳ ಆರಂಭದಲ್ಲಿಯೇ ಭತ್ತದ ನಾಟಿ ಕಾರ್ಯ ಆರಂಭವಾಗಬೇಕಾಗಿತ್ತು. ಆಗಸ್ಟ ೨೦ರ ಹೊತ್ತಿಗೆ ನಾಟಿ ಮುಗಿಯಬೇಕಾಗಿತ್ತು. ಆದರೂ ಇನ್ನೂ ನಾಟಿ ಕಾರ್ಯ ಎಲ್ಲಿಯೂ ಆರಂಭವಾಗಿಲ್ಲ. ಸಸಿಗಳನ್ನು ಸಿದ್ಧಪಡಿಸಿಕೊಳ್ಳುವುದೂ ಕೂಡ ತಡವಾಗಿದೆ. ಆದರೆ ಜೂನ್ ತಿಂಗಳಿನಲ್ಲಿ ೧೮೯ ಮಿಮೀ ವಾಡಿಕೆ ಮಳೆ ಇದ್ದರೂ, ಮಳೆ ಬಂದಿದ್ದು ಕೇವಲ ೬೬ ಮಿಮಿ ಮಾತ್ರ. ಜುಲೈ ತಿಂಗಳಿನಲ್ಲಿ ವಾಡಿಕೆ ಮಳೆ ೧೯೫ ಮಿಮೀ. ಮಳೆ ಬಂದದ್ದು ಕೇವಲ ೮೬ ಮಿಮೀ.

ಇದೆಲ್ಲದರ ನಡುವೆ ಈ ಬಾರಿ ಧರ್ಮಾ ಜಲಾಶಯದ ನೀರನ್ನು ಹಾನಗಲ್ಲ ಹಾಗೂ ಮುಂಡಗೋಡ ಪಟ್ಟಣಗಳಿಗೆ ಕಳೆದ ವರ್ಷಕ್ಕಿಂತ ಹೆಚ್ಚು ನೀರನ್ನು ಕುಡಿಯುವ ನೀರಿಗಾಗಿ ಕಾದಿರಿಸುವ ಅನಿವಾರ್ಯತೆಯೂ ಕಂಡು ಬಂದಿದೆ. ಹೀಗಾಗಿ ಧರ್ಮಾ ಜಲಾಶಯದ ಎಷ್ಟು ನೀರು ಭತ್ತದ ನಾಟಿಗಾಗಿ ಲಭ್ಯವಾಗಬಹುದು ಎಂಬ ಆತಂಕ ರೈತರಲ್ಲಿ ಮನೆ ಮಾಡಿದೆ. ವರದಾ ನದಿಯ ನೀರನ್ನು ನಂಬಿ ೨೫೦೦ ಹೆಕ್ಟೇರ್, ಧರ್ಮಾ ನದಿಯ ನೀರನ್ನು ನಂಬಿ ೩೫೦೦ ಹೆಕ್ಟೇರ್, ಕೆರೆಗಳ ನೀರನ್ನು ನಂಬಿ ೩೯೦೦ ಹೆಕ್ಟೇರ್ ಭತ್ತದ ನಾಟಿಗಾಗಿ ರೈತರು ಸಿದ್ಧರಾಗಿದ್ದಾರೆ. ಆದರೆ ನದಿ ಕೆರೆಗಳಲ್ಲಿ ನೀರಿಲ್ಲ.

ಮಳೆಯ ಅನಿಶ್ಚಿತತೆ ರೈತರನ್ನು ತೀರ ಚಿಂತೆಗೀಡು ಮಾಡಿದ್ದು, ನಾಟಿಗೆ ಸಸಿ ಸಿದ್ಧ ಇವೆ. ಬಿತ್ತನೆ ಮಾಡಬೇಕಾದ ರೈತ ಮಾತ್ರ ಮಳೆ, ನದಿಯ ನೀರು, ಧರ್ಮಾ ಜಲಾಶಯದತ್ತ ಕಣ್ಬಿಟ್ಟು ನೋಡುತ್ತಿದ್ದಾನೆ. ಇನ್ನು ೧೦-೧೨ ದಿನಗಳಲ್ಲಿ ಮಳೆಯ ಸ್ಥಿತಿ ಆಧರಿಸಿ ಮಾತ್ರ ನಾಟಿ ಮಾಡಬಹುದಾಗಿದೆ. ಕೊಳವೆ ಬಾವಿ ಇರುವವರು ಸ್ವಲ್ಪ ಧೈರ್ಯದಿಂದ ಭತ್ತದ ನಾಟಿಗೆ ಮುಂದಾಗಬಹುದು.

ಮಳೆಯ ಅನಿಶ್ಚಿತತೆಯಿಂದಾಗಿ ಭತ್ತದ ನಾಟಿಗಾಗಿ ಹೊಯ್ದಾಟ ಆರಂಭವಾಗಿದೆ. ರೈತರು ಸಸಿ ಮಡಿ ಮಾಡಿಕೊಂಡಿದ್ದಾರೆ. ರೈತರು ತುಂಬ ಯೋಚಿಸಿ ಯೋಜಿಸಿ ನಿರ್ಣಯಿಸಬೇಕಾಗಿದೆ. ಹವಾಮಾನ ವರದಿಯಂತೆ ಈ ಬಾರಿ ಮಳೆ ಕಡಿಮೆ ಎಂದಿದೆ. ಹೆಚ್ಚು ನೀರಿಲ್ಲದೆ ಭತ್ತದ ನಾಟಿ ಬಾರದು. ಈ ನಡುವೆ ರೈತರು ತಮ್ಮ ಅನುಭವ, ನೀರಿನ ಅಗತ್ಯತೆಯನ್ನು ಅನುಸರಿಸಿ ನಿರ್ಣಯಿಸಬೇಕಾಗಿದೆ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿ.ಟಿ.ಸುರೇಶ.ಧರ್ಮಾ ಕಾಲುವೆ ನೀರನ್ನು ಅವಲಂಬಿಸಿ ನಾವು ನಾಟಿಗಾಗಿ ಸಿದ್ಧರಾಗಿದ್ದೇವೆ. ಈಗ ಭತ್ತದ ಸಸಿಗಳು ಕೂಡ ಸಿದ್ಧವಾಗಿವೆ. ಆದರೆ ಭತ್ತದ ನಾಟಿಗೆ ಅಗತ್ಯವಿರುವಷ್ಟು ನೀರಿನ ಲಭ್ಯತೆ ಇಲ್ಲ ಎಂದೆನಿಸುತ್ತಿದೆ. ಹೀಗಾಗಿ ಹೊಯ್ಧಾಟದಲ್ಲಿದ್ದೇವೆ ಎನ್ನುತ್ತಾರೆ ಡೊಳ್ಳೇಶ್ವರದ ರೈತ ಪ್ರಕಾಶ ವರ್ದಿ