ಶಿವಾನಂದ ಗೊಂಬಿ
ಹುಬ್ಬಳ್ಳಿ:ಇಷ್ಟು ದಿನ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ಆಯ್ಕೆಗೆ ಶಿಫಾರಸು, ಜಾತಿ, ಸಮುದಾಯ ಆಧಾರಿತ ಹಾಗೂ ಮುಖಂಡರು ಸೂಚಿಸಿದ ಹೆಸರಿಗೆ ಅಂಕಿತ ಹಾಕಿದ್ದರ ಪರಿಣಾಮ ಅರ್ಹರಿಗೆ ಅನ್ಯಾಯವಾಗಿ ಪಕ್ಷ ಸಂಘಟನೆಗೆ ಹೊಡೆತ ಬೀಳುತ್ತಿತ್ತು. ಇದನ್ನರಿತ ನಾಯಕರು ಇದೀಗ ಪಕ್ಷದ ಸಂಘಟನೆ ಗಟ್ಟಿಗೊಳಿಸುವ ಉದ್ದೇಶದಿಂದ "ಸಂಘಟನ್ ಸೃಜನ್ ಅಭಿಯಾನ "ದ ಮೂಲಕ ಜಿಲ್ಲಾಧ್ಯಕ್ಷರನ್ನು ನೇಮಿಸುತ್ತಿದೆ. ಈ ಮೂಲಕ ಕೆಪಿಸಿಸಿ ಪಾತ್ರವಿಲ್ಲದೆ ಜಿಲ್ಲಾಧ್ಯಕ್ಷರ ನೇಮಕವಾಗುತ್ತಿದೆ.
ಪ್ರತಿ ಜಿಲ್ಲೆಯ ಅಧ್ಯಕ್ಷರ ನೇಮಕಕ್ಕೆ ಹೊರರಾಜ್ಯದ ಮುಖಂಡರನ್ನು ವೀಕ್ಷಕರನ್ನಾಗಿ ಮಾಡಿದ್ದು, ಇವರಿಗೆ ನೆರವಾಗಲು ಇಲ್ಲಿನ ಮೂವರು ಎರಡನೆಯ ಹಂತದ ನಾಯಕರನ್ನು ನಿಯೋಜಿಸಲಾಗಿರುತ್ತದೆ. ಆದರೆ ಸ್ಥಳೀಯ ನಾಯಕರು ಬರೀ ಅವರಿಗೆ ಸಭೆ ನಡೆಸಲು, ಮಾಹಿತಿ ಕೊಡಿಸಲಷ್ಟೇ ಸೀಮಿತ. ಜಿಲ್ಲಾಧ್ಯಕ್ಷರ ನೇಮಕಾತಿ ಪ್ರಕ್ರಿಯೆಯಲ್ಲಿ ತಮ್ಮ ಕೈಚಳಕವನ್ನೇನೂ ತೋರಿಸಲು ಅವಕಾಶವಿಲ್ಲ. ಅಧ್ಯಕ್ಷ ಸ್ಥಾನಕ್ಕೆ ಯಾರು ಅರ್ಜಿ ಹಾಕಿದ್ದಾರೆ, ವೀಕ್ಷಕರು ಆಯಾ ಜಿಲ್ಲೆಗೆ ತೆರಳಿ ಬ್ಲಾಕ್, ಗ್ರಾಪಂ, ಜಿಪಂ, ತಾಪಂ, ಕಾರ್ಯಕರ್ತರ ಸಭೆ ನಡೆಸಿ ಯಾರನ್ನು ಮಾಡಿದರೆ ಉತ್ತಮ ಎಂಬ ಬಗ್ಗೆ ಅಭಿಪ್ರಾಯ ಪಡೆಯುತ್ತಾರೆ. ಅವರ ಬಗ್ಗೆ ಕಾರ್ಯಕರ್ತರ ಹಾಗೂ ಖಾಸಗಿ ಸಂಘ- ಸಂಸ್ಥೆಗಳಿಂದಲೂ ಅಭಿಪ್ರಾಯ ಪಡೆಯುತ್ತಾರೆ. ಪತ್ರಕರ್ತರು ಬುದ್ಧಿಜೀವಿಗಳಿಂದಲೂ ಅಭಿಪ್ರಾಯ ಪಡೆಯುತ್ತಾರೆ.ಬಳಿಕ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದವರ ಅರ್ಹರ ಹೆಸರನ್ನು ಪಟ್ಟಿ ಮಾಡಿ ಪಕ್ಷದ ರಾಜ್ಯ ಉಸ್ತುವಾರಿ, ಎಐಸಿಸಿ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಭೆ ನಡೆಸುತ್ತಾರೆ. ಜತೆಗೆ ಅರ್ಜಿ ಹಾಕದೆ ಅರ್ಹ ಅಭ್ಯರ್ಥಿಗಳು ಇದ್ದರೆ ಅವರನ್ನು ಹೆಸರನ್ನು ಗಣನೆಗೆ ತೆಗೆದುಕೊಳ್ಳಲಾಗುತ್ತದೆ.
ಕೆಪಿಸಿಸಿ ಪಾತ್ರ ಗೌಣ್ಯ:
ಹೊರರಾಜ್ಯದ ವೀಕ್ಷಕರಿಗೆ ಇಲ್ಲಿನವರು ನೆರವು ಮಾತ್ರ ನೀಡಬಹುದು. ನೇಮಕಾತಿ ಪ್ರಕ್ರಿಯೆಯನ್ನು ವೀಕ್ಷಕರೇ ಮಾಡಲಿದ್ದು ಅವರು ಕೊಟ್ಟ ಹೆಸರೇ ಬಹುತೇಕ ಅಂತಿಮವಾಗುತ್ತದೆ. ಎಐಸಿಸಿಯೇ ಜಿಲ್ಲಾಧ್ಯಕ್ಷರ ಹೆಸರು ಅಂತಿಮಗೊಳಿಸಿ ಪ್ರಕಟಿಸುತ್ತದೆ. ಹೀಗಾಗಿ ಇದರಲ್ಲಿ ಕೆಪಿಸಿಸಿಯ ಯಾವ ಪಾತ್ರವೂ ಇರುವುದಿಲ್ಲ.
ವರ್ಷಾಂತ್ಯದೊಳಗೆ ಪೂರ್ಣ:2026ರನ್ನು ಸಂಘಟನಾ ಸೃಜನ್ ಅಭಿಯಾನ ವರ್ಷವನ್ನಾಗಿ ಘೋಷಿಸಿರುವ ಕಾಂಗ್ರೆಸ್, ಡಿಸೆಂಬರ್ ಒಳಗೆ ಎಲ್ಲ ಜಿಲ್ಲೆಗಳ ಅಧ್ಯಕ್ಷರ ನೇಮಕ ಮಾಡುವ ಇರಾದೆ ಹೊಂದಿದೆ. ಹೀಗಾಗಿ ಎಲ್ಲ ಜಿಲ್ಲೆಗಳಿಗೆ ಎಐಸಿಸಿ ವೀಕ್ಷಕರ ನೇಮಕ ಮಾಡಿದೆ. ಇವರ ಪ್ರವಾಸ ಆರಂಭವಾಗುತ್ತಿದ್ದಂತೆ ಅವರಿಗೆ ನೆರವು ನೀಡಲು ನೇಮಿಸಿರುವ ನಾಯಕರು, ಇಲ್ಲಿನ ಬ್ಲಾಕ್‌ಗಳೊಂದಿಗೆ ಸಭೆ ನಡೆಸಲಿದ್ದಾರೆಂದು ಮೂಲಗಳು ತಿಳಿಸಿವೆ.
ಲಾಬಿಗೆ ಮಣಿಯದಿರಲಿ:ಜಿಲ್ಲಾಧ್ಯಕ್ಷರ ನೇಮಕಕ್ಕೆ ಇದೇ ಮೊದಲ ಬಾರಿಗೆ ಕೇಡರ್ ಮಾದರಿ ಅನುಸರಿಸುತ್ತಿರುವುದು ಕಾರ್ಯಕರ್ತರಲ್ಲಿ ಹುಮ್ಮಸ್ಸು ಮೂಡಿಸಿದೆ. ವೀಕ್ಷಕರೇ ಹಲವರ ಅಭಿಪ್ರಾಯ ಪಡೆದು ನೇಮಕಕ್ಕೆ ಹೆಸರು ತಿಳಿಸುವುದರಿಂದ ಅರ್ಹರಿಗೆ ಸ್ಥಾನ ಸಿಗಲಿದೆ. ಆದರೆ, ಹೀಗೆ ಹೊರ ರಾಜ್ಯಗಳಿಂದ ಬರುವ ವೀಕ್ಷಕರು ಯಾವುದೇ ಕಾರಣಕ್ಕೂ ಶಿಫಾರಸು, ಲಾಬಿಗಳಿಗೆ ಮಣಿಯದೇ ಎಐಸಿಸಿ ಸೂಚನೆಯನ್ವಯವೇ ನೇಮಕ ಮಾಡಲು ಶ್ರಮಿಸಿದರೆ, ಪಕ್ಷ ಸಂಘಟನೆಗೂ ಹೆಚ್ಚಿನ ಒತ್ತು ನೀಡಿದಂತಾಗುತ್ತದೆ. 2028ರ ವಿಧಾನಸಭೆ ಹಾಗೂ 2029ರ ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಜಿಲ್ಲಾ ಘಟಕಗಳನ್ನು ಪುನರ್ ರಚಿಸುವ ಕಾರ್ಯಕ್ಕೆ ಎಐಸಿಸಿ ಮುಂದಾಗಿದೆ. ಒಂದು ವೇಳೆ ಎಐಸಿಸಿ ಸೂಚನೆಯಂತೆ ಜಿಲ್ಲಾಧ್ಯಕ್ಷರ ನೇಮಕವಾದರೆ ಪಕ್ಷ ಸಂಘಟನೆ ಖಂಡಿತ ಗಟ್ಟಿಯಾಗುವುದರಲ್ಲಿ ಸಂಶಯವಿಲ್ಲ ಎಂಬುದು 2ನೇ ಹಂತದ ಮುಖಂಡರ ಅಂಬೋಣ.ಜಿಲ್ಲಾಧ್ಯಕ್ಷರ ನೇಮಕಕ್ಕೆ ಈ ಸಲ ಹೊರರಾಜ್ಯಗಳ ಮುಖಂಡರನ್ನು ವೀಕ್ಷಕರನ್ನಾಗಿ ಎಐಸಿಸಿ ನೇಮಿಸಿದೆ. ಅವರಿಗೆ ಸಹಾಯ ಮಾಡಲು ಉಪಾಧ್ಯಕ್ಷರು, ನಿಗಮ ಮಂಡಳಿಗಳ ಅಧ್ಯಕ್ಷರನ್ನು ನಿಯೋಜಿಸಿದೆ. ಬ್ಲಾಕ್ ಮಟ್ಟದಲ್ಲಿ ಸಭೆ ನಡೆಸಿ ಎಐಸಿಸಿಗೆ ಪಟ್ಟಿ ಸಿದ್ಧಪಡಿಸಿ ಕೊಡಲಿದೆ. ಬಳಿಕ ಎಐಸಿಸಿ ಜಿಲ್ಲಾಧ್ಯಕ್ಷರ ನೇಮಕ ಪ್ರಕಟಿಸಲಿದೆ.
ಶಾಕೀರ ಸನದಿ, ಕಾಂಗ್ರೆಸ್ ಮುಖಂಡರು,ಜಿಲ್ಲಾಧ್ಯಕ್ಷರ ನೇಮಕಕ್ಕೆ ಈ ಸಲ ಹೊರರಾಜ್ಯದವರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಅವರೇ ಬಂದು ಯಾರ್‍ಯಾರು ಅರ್ಜಿ ಸಲ್ಲಿಸಿರುತ್ತಾರೋ ಅವರ ಬಗ್ಗೆ 10-15 ದಿನ ಇಲ್ಲೇ ಉಳಿದು ಅಭಿಪ್ರಾಯ ಪಡೆದು ಎಐಸಿಸಿಗೆ ಪಟ್ಟಿ ಕಳುಹಿಸುತ್ತಾರೆ. ಈ ಸಲ ಜಿಲ್ಲಾಧ್ಯಕ್ಷರ ನೇಮಕದಲ್ಲಿ ಕೆಪಿಸಿಸಿ ಪಾತ್ರ ಅಷ್ಟೇನು ಇಲ್ಲ. ಎಐಸಿಸಿಯೇ ನೇರವಾಗಿ ಮಾಡುತ್ತಿದೆ.
ಅನಿಲಕುಮಾರ ಪಾಟೀಲ, ಕಾಂಗ್ರೆಸ್ ಧಾರವಾಡ ಗ್ರಾಮೀಣ ಜಿಲ್ಲಾಧ್ಯಕ್ಷ