ಸಾರಾಂಶ
ಕೂಡ್ಲಿಗಿ: ದೇಶದಲ್ಲಿ ನರೇಂದ್ರ ಮೋದಿ ಅವರು 10 ವರ್ಷ ರಾಮ, ಪಾಕಿಸ್ತಾನದಂತಹ ಭಾವನಾತ್ಮಕ ವಿಷಯಗಳಲ್ಲಿ ಆಡಳಿತ ನಡೆಸಿ ಸುಳ್ಳಿನ ಸರಮಾಲೆಯಿಂದ ಜನತೆಯನ್ನು ವಂಚಿಸಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಆರೋಪಿಸಿದರು.
ಅವರು ಗುರುವಾರ ಸಂಜೆ ಪಟ್ಟಣದ ಶಾಸಕರ ಕಚೇರಿ ಆವರಣದಲ್ಲಿ ಬಳ್ಳಾರಿ ಲೋಕಸಭೆ ಕಾಂಗ್ರೆಸ್ ಅಭ್ಯರ್ಥಿ ತುಕಾರಾಂ ಪರ ಪ್ರಚಾರ ಸಭೆಯಲ್ಲಿ ಮಾತನಾಡಿದರು. ಜನರಿಗೆ ಸುಳ್ಳಿನ ಮಾತುಗಳಲ್ಲೇ ಕೋಟೆ ಕಟ್ಟುತ್ತಾ ದೇಶದಲ್ಲಿ ಅಭಿವೃದ್ಧಿ ಮಾಡದ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿಯನ್ನು ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ತಿರಸ್ಕರಿಸುವ ಮೂಲಕ ತಕ್ಕಪಾಠ ಕಲಿಸಬೇಕು ಎಂದು ತಿಳಿಸಿದರು.ನೆಹರು, ಇಂದಿರಾಗಾಂಧಿ, ಮನಮೋಹನ ಸಿಂಗ್ ಸೇರಿ ಕಾಂಗ್ರೆಸ್‌ನ ಎಲ್ಲ ಪ್ರಧಾನಿಗಳಿಂದ ದೇಶದಲ್ಲಿ ಬ್ಯಾಂಕ್ ರಾಷ್ಟ್ರೀಕರಣ, ಡ್ಯಾಂಗಳ ನಿರ್ಮಾಣ ಸೇರಿ ನಾನಾ ಅಭಿವೃದ್ಧಿಯಾಗಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ಅವರು ೧೦ ವರ್ಷಗಳ ಆಡಳಿತ ನಡೆಸಿದ್ದರೂ ಬರೀ ಸುಳ್ಳು ಹೇಳುವುದಲ್ಲದೆ, ರಾಮ, ಪಾಕಿಸ್ತಾನ ಸೇರಿ ನಾನಾ ಭಾವನಾತ್ಮಕ ವಿಷಯಗಳಲ್ಲೇ ಆಡಳಿತ ನಡೆಸಿರುವುದು ದುರ್ದೈವ ಎಂದು ಟೀಕಿಸಿದರು.
ಕೂಡ್ಲಿಗಿ ಶಾಸಕ ಡಾ. ಎನ್.ಟಿ. ಶ್ರೀನಿವಾಸ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿ ಮಾಡಿದ್ದು, ಕೂಡ್ಲಿಗಿ ಕ್ಷೇತ್ರದಲ್ಲೂ ಡಾಕ್ಟರ್ ಗ್ಯಾರಂಟಿ ಎಂದೆಂದೂ ಇರಲಿದೆ. ಅತ್ಯಂತ ಹಿಂದುಳಿದ ತಾಲೂಕನ್ನು ಮಾದರಿ ಕ್ಷೇತ್ರವಾಗಿಸುವುದೇ ನನ್ನ ಗುರಿ ಎಂದರು.ಬಳ್ಳಾರಿ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈ. ತುಕಾರಾಂ, ಕೆಎಂಎಫ್ ಅಧ್ಯಕ್ಷ ಭೀಮಾನಾಯ್ಕ, ಮಾಜಿ ಸಚಿವ ಎನ್.ಎಂ. ನಬಿಸಾಬ್ ಮಾತನಾಡಿದರು. ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ಬಿ.ವಿ. ಶಿವಯೋಗಿ, ಬಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಗುಂಡುಮುಣುಗು ತಿಪ್ಪೇಸ್ವಾಮಿ, ಮುಖಂಡರಾದ ಎನ್.ಟಿ. ತಮ್ಮಣ್ಣ, ನಾಗಮಣಿ ಜಿಂಕಲ್, ಕಾವಲಿ ಶಿವಪ್ಪನಾಯಕ, ಹಿರೇಕುಂಬಳಗುಂಟೆ ಉಮೇಶ್, ಕೋಗಳಿ ಮಂಜುನಾಥ, ಕೆ.ಎಂ. ಶಶಿಧರ, ಬಣವಿಕಲ್ಲು ಎರಿಸ್ವಾಮಿ ಇದ್ದರು.