ಲಕ್ಷ ಲಕ್ಷ ಭಕ್ತರನ್ನು ಸೆಳೆಯುತ್ತಿರುವ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿಗೆ ಕೇಂದ್ರದಿಂದ ₹100 ಕೋಟಿ

| N/A | Published : Feb 01 2025, 12:01 AM IST / Updated: Feb 01 2025, 12:57 PM IST

ಲಕ್ಷ ಲಕ್ಷ ಭಕ್ತರನ್ನು ಸೆಳೆಯುತ್ತಿರುವ ಹುಲಿಗೆಮ್ಮ ದೇವಸ್ಥಾನ ಅಭಿವೃದ್ಧಿಗೆ ಕೇಂದ್ರದಿಂದ ₹100 ಕೋಟಿ
Share this Article
  • FB
  • TW
  • Linkdin
  • Email

ಸಾರಾಂಶ

ಲಕ್ಷ ಲಕ್ಷ ಭಕ್ತರನ್ನು ಸೆಳೆಯುತ್ತಿರುವ ಹಾಗೂ ಕೋಟಿ ಕೋಟಿ ಆದಾಯ ತಂದುಕೊಡುತ್ತಿರುವ ಹುಲಿಗೆಮ್ಮ ದೇವಸ್ಥಾನವನ್ನು ಮಾಸ್ಟರ್ ಪ್ಲಾನ್‌ನಂತೆ ಅಭಿವೃದ್ಧಿ ಮಾಡುವುದಕ್ಕೆ ಕೇಂದ್ರ ಸರ್ಕಾರ ₹100 ಕೋಟಿ ಅನುದಾನ ನೀಡಲು ತಾತ್ಕಾಲಿಕ ಅನುಮೋದನೆ ನೀಡಿದ್ದು, ಶೀಘ್ರದಲ್ಲಿಯೇ ಅನುದಾನ ಬಿಡುಗಡೆ ಆದೇಶವೂ ಆಗಬಹುದು.

ಸೋಮರಡ್ಡಿ ಅಳವಂಡಿ

ಕೊಪ್ಪಳ: ಲಕ್ಷ ಲಕ್ಷ ಭಕ್ತರನ್ನು ಸೆಳೆಯುತ್ತಿರುವ ಹಾಗೂ ಕೋಟಿ ಕೋಟಿ ಆದಾಯ ತಂದುಕೊಡುತ್ತಿರುವ ಹುಲಿಗೆಮ್ಮ ದೇವಸ್ಥಾನವನ್ನು ಮಾಸ್ಟರ್ ಪ್ಲಾನ್‌ನಂತೆ ಅಭಿವೃದ್ಧಿ ಮಾಡುವುದಕ್ಕೆ ಕೇಂದ್ರ ಸರ್ಕಾರ ₹100 ಕೋಟಿ ಅನುದಾನ ನೀಡಲು ತಾತ್ಕಾಲಿಕ ಅನುಮೋದನೆ ನೀಡಿದ್ದು, ಶೀಘ್ರದಲ್ಲಿಯೇ ಅನುದಾನ ಬಿಡುಗಡೆ ಆದೇಶವೂ ಆಗಬಹುದು.

ಸಂಸದ ರಾಜಶೇಖರ ಹಿಟ್ನಾಳ ಅವರು ಕೇಂದ್ರ ಸರ್ಕಾರಕ್ಕೆ ಮಾಡಿದ್ದ ಮನವಿಗೆ ಸ್ಪಂದಿಸಿರುವ ಕೇಂದ್ರ ಸರ್ಕಾರ ತಕ್ಷಣ ಡಿಪಿಆರ್ ಕಳುಹಿಸಿಕೊಟ್ಟರೆ ₹100 ಕೋಟಿ ನೀಡುವುದಾಗಿ ಹೇಳಿದೆ. ಹೀಗಾಗಿ, ಬಹುದಿನಗಳ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ.

ಹುಲಿಗೆಮ್ಮ ದೇವಸ್ಥಾನಕ್ಕೆ ಭಕ್ತರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದ್ದು, ನಾಡಿನ ಸುಪ್ರಸಿದ್ಧ ದೇವಾಲಯಗಳಂತೆಯೇ ಇಲ್ಲೂ ಭಕ್ತರಿಂದ ಕಾಣಿಕೆ ಹರಿದು ಬರುತ್ತಿದೆ. ಕೇವಲ 40 ದಿನಗಳಲ್ಲಿ ಕಾಣಿಕೆ ಹುಂಡಿಯಲ್ಲಿ ₹73 ಲಕ್ಷ ಬಂದಿದ್ದರೆ, 50 ಗ್ರಾಂ ಚಿನ್ನ ಹಾಗೂ 3500 ಗ್ರಾಂ ಬೆಳ್ಳಿ ಬಂದಿದೆ. ಇದರ ಲೆಕ್ಕಾಚಾರದಲ್ಲಿ ವಾರ್ಷಿಕವಾಗಿ ಐದಾರು ಕೋಟಿ ರು. ಕಾಣಿಕೆ ಬರುತ್ತಿದೆ. ಈಗಾಗಲೇ ದೇವಸ್ಥಾನದ ಬಳಿಯೇ ₹75 ಕೋಟಿಗೂ ಅಧಿಕ ಹಣ ಇದೆ.

ಬೇಕು ₹300 ಕೋಟಿ: ಭಕ್ತರ ಸಂಖ್ಯೆಯನ್ನಾಧರಿಸಿ ಯೋಜನೆ ರೂಪಿಸುವ ತುರ್ತು ಅಗತ್ಯವಿದೆ. ಲಕ್ಷ ಲಕ್ಷ ಭಕ್ತರು ಬರುವ ಶ್ರೀ ಹುಲಿಗೆಮ್ಮ ದೇವಸ್ಥಾನದ ಮಾಸ್ಟರ್ ಪ್ಲಾನ್ ಅಡಿಯಲ್ಲಿ ಅಭಿವೃದ್ಧಿಪಡಿಸಲು ₹300 ಕೋಟಿ ಅಗತ್ಯವಿದೆ. ಇದರಡಿಯಲ್ಲಿಯೇ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರದ ಮುಜರಾಯಿ ಖಾತೆ ಸಚಿವ ರಾಮಲಿಂಗಾರಡ್ಡಿ ಅಸ್ತು ಎಂದಿದ್ದಾರೆ. ಇದರ ಆಧಾರದಲ್ಲಿಯೇ ಹುಲಿಗೆಮ್ಮ ದೇವಸ್ಥಾನದ ಅಭಿವೃದ್ಧಿಗೆ ಅನುದಾನ ನೀಡುವಂತೆ ಸಂಸದ ರಾಜಶೇಖರ ಹಿಟ್ನಾಳ ಅವರು ರಾಜ್ಯ ಸರ್ಕಾರದ ಮೂಲಕ ಕೇಂದ್ರಕ್ಕೆ ಮನವಿ ಸಲ್ಲಿಸಿದ್ದರು. ಈಗ ಇದಕ್ಕೆ ಸ್ಪಂದಿಸಿರುವ ಕೇಂದ್ರ ಸರ್ಕಾರ ₹100 ಕೋಟಿ ಅನುದಾನವನ್ನು ಪ್ರಥಮ ಹಂತದಲ್ಲಿಯೇ ಬಿಡುಗಡೆ ಮಾಡಲಾಗುವುದು, ತುರ್ತಾಗಿ ಡಿಪಿಆರ್ ಕಳುಹಿಸಿಕೊಡುವಂತೆ ಸೂಚಿಸಿದೆ.

ಹೀಗಾಗಿ, ಈಗ ಮುಜರಾಯಿ ಇಲಾಖೆ ಡಿಪಿಆರ್ ಕಳುಹಿಸಿಕೊಡಬೇಕಾಗಿದೆ. ಕೇಂದ್ರದಿಂದ ನೂರು ಕೋಟಿ ಬಂದರೆ ಹಾಗೂ ದೇವಸ್ಥಾನದ ಬಳಿ ಇರುವ ₹75 ಕೋಟಿ ಬಳಸಿದರೆ ಮಾಸ್ಟರ್ ಪ್ಲಾನ್ ಅಡಿಯಲ್ಲಿಯೇ ಅಭಿವೃದ್ಧಿಪಡಿಸುವ ಬಹುದಿನಗಳ ಕನಸು ನನಸಾಗಬಹುದು.

ಡಿಪಿಆರ್‌ ಕಳುಹಿಸಲಾಗುವುದು: ಕೇಂದ್ರಕ್ಕೆ ಮಾಡಿದ್ದ ಮನವಿಗೆ ಸ್ಪಂದನೆ ಸಿಕ್ಕಿದ್ದು, ₹100 ಕೋಟಿ ಕೊಡುವುದಾಗಿ ತಾತ್ಕಾಲಿಕ ಅನುಮೋದನೆ ನೀಡಿದ್ದು, ಡಿಪಿಆರ್ ಕಳುಹಿಸಿಕೊಡುವಂತೆ ಕೋರಿದ್ದಾರೆ. ತಕ್ಷಣ ರಾಜ್ಯ ಸರ್ಕಾರದ ಮೂಲಕ ಕಳುಹಿಸಿಕೊಡಲಾಗುವುದು ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.