ಶ್ರೀರಂಗಪಟ್ಟಣ ಪ್ರವಾಸೋದ್ಯಮಕ್ಕೆ 100 ಕೋಟಿ ರು. ಡಿಪಿಆರ್‌ ಸಿದ್ಧ: ಡೀಸಿ ಡಾ.ಕುಮಾರ್

| Published : Nov 29 2024, 01:01 AM IST

ಶ್ರೀರಂಗಪಟ್ಟಣ ಪ್ರವಾಸೋದ್ಯಮಕ್ಕೆ 100 ಕೋಟಿ ರು. ಡಿಪಿಆರ್‌ ಸಿದ್ಧ: ಡೀಸಿ ಡಾ.ಕುಮಾರ್
Share this Article
  • FB
  • TW
  • Linkdin
  • Email

ಸಾರಾಂಶ

ಈ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ ಹಲವಾರು ಉದ್ಯೋಗಗಳನ್ನು ಸೃಷ್ಟಿಸಬಹುದು. ಬಹಳಷ್ಟು ಕೊಳಗಳು ಹಾಗೂ ಸ್ಥಳಗಳಲ್ಲಿ ಬರುವ ಆದಾಯದಿಂದ ಸ್ವಚ್ಛತೆಯನ್ನು ಕಾಪಾಡಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಶ್ರೀರಂಗಪಟ್ಟಣ ಪ್ರವಾಸೋದ್ಯಮವನ್ನು ಅಭಿವೃದ್ಧಿಪಡಿಸಲು 100 ಕೋಟಿ ರು. ವೆಚ್ಚದಲ್ಲಿ ಡಿಪಿಆರ್ ಸಿದ್ಧಪಡಿಸಿ ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿ, ಶ್ರೀ ರಂಗನಾಥ ಸ್ವಾಮಿ ದೇವಾಲಯವನ್ನು ಕೇಂದ್ರವಾಗಿರಿಸಿಕೊಂಡು ಇದರ ಸುತ್ತಲಿನ 5.5 ಕಿ.ಮೀ.ನಲ್ಲಿ ಬರುವ ಪ್ರವಾಸಿ ತಾಣಗಳಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಹೇಳಿದರು.

ಇದರಲ್ಲಿ ಒಡೆಯರ್ ಅವರ ಜನ್ಮಸ್ಥಳ, ಪುರಾತನ ಗೇಟ್‌ಗಳ ಸಂರಕ್ಷಣೆ, ವಿವಿಧ ರೀತಿಯ ಸೂಚನಾ ಫಲಕಗಳು, ಪುರಾತನ ಕಾಲದಲ್ಲಿ ಯುದ್ಧದಲ್ಲಿ ಉಪಯೋಗಿಸುತ್ತಿದ್ದ ಶಸ್ತ್ರಾಸ್ತ್ರಗಳು, ಕಲ್ಯಾಣಿಗಳು, ಮಂಟಪಗಳು, ರಸ್ತೆಗಳು ಸೇರಿದಂತೆ ವಿವಿಧ ರೀತಿಯ ಯೋಜನೆಗಳಿಗೆ ಪ್ರಾಮುಖ್ಯತೆ ನೀಡಲಾಗಿದೆ ಎಂದರು.

ಈ ಯೋಜನೆ ಸಂಪೂರ್ಣವಾಗಿ ಸಿದ್ಧವಾದ ನಂತರ ಶ್ರೀರಂಗಪಟ್ಟಣ ಶಾಸಕರೊಂದಿಗೆ ಸಭೆ ನಡೆಸಿ, ನಂತರ ಪ್ರಸ್ತಾವನೆಯನ್ನು ಸಲ್ಲಿಸಬೇಕಿದೆ. ಅಧಿಕಾರಿಗಳಿಗೆ ಸಿದ್ಧತೆ ನಡೆಸುವಂತೆ ತಿಳಿಸಿದರು.

ಈ ಯೋಜನೆಯಿಂದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವುದರ ಜೊತೆಗೆ ಹಲವಾರು ಉದ್ಯೋಗಗಳನ್ನು ಸೃಷ್ಟಿಸಬಹುದು. ಬಹಳಷ್ಟು ಕೊಳಗಳು ಹಾಗೂ ಸ್ಥಳಗಳಲ್ಲಿ ಬರುವ ಆದಾಯದಿಂದ ಸ್ವಚ್ಛತೆಯನ್ನು ಕಾಪಾಡಬಹುದು ಎಂದರು.

ರಾಜ್ಯ ಪುರಾತತ್ವ ಇಲಾಖೆಯ ಆಯುಕ್ತರಾದ ದೇವರಾಜ್ ಮಾತನಾಡಿ, ಶ್ರೀರಂಗನಾಥ ಸ್ವಾಮಿ ದೇವಸ್ಥಾನದಲ್ಲಿ ಕೆಲವು ದುರಸ್ತಿ ಕಾಮಗಾರಿಗಳು ನಡೆಯಬೇಕಿದ್ದು, ಇದಕ್ಕೆ ಅನುದಾನ ಪುರಾತತ್ವ ಇಲಾಖೆಯಲ್ಲಿ ಲಭ್ಯವಿಲ್ಲದಿದ್ದಲ್ಲಿ ದೇವಸ್ಥಾನದಿಂದ ಅನುದಾನ ಪಡೆದು ಕಾಮಗಾರಿ ನಡೆಸುವ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ತಿಳಿಸಿದರು.

ಸಭೆಯಲ್ಲಿ ಭಾರತ ಸರ್ಕಾರದ ಭಾರೀ ಕೈಗಾರಿಕೆ ಮತ್ತು ಉಕ್ಕು ಕೇಂದ್ರ ಸಚಿವರ ವಿಶೇಷಾಧಿಕಾರಿ ಬಿ.ಎನ್. ಕೃಷ್ಣಯ್ಯ, ಪುರಾತತ್ವ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ರಾಘವೇಂದ್ರ, ಶ್ರೀರಂಗನಾಥಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಉಮಾ, ಶ್ರೀ ನಿಮಿಷಾಂಭ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಶ್ರೀರಂಗಪಟ್ಟಣ ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಪುರಾತತ್ವ ಸಂರಕ್ಷಣಾ ಸಹಾಯಕ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.

28ಕೆಎಂಎನ್‌ಡಿ-4

ಮಂಡ್ಯದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶ್ರೀರಂಗಪಟ್ಟಣ ಪ್ರವಾಸೋದ್ಯಮ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಡಾ.ಕುಮಾರ ಅವರು ಅಧಿಕಾರಿಗಳ ಸಭೆ ನಡೆಸಿದರು.

ಮಾನವ ಸರಪಳಿಯಲ್ಲಿ ಮಂಡ್ಯ ಜಿಲ್ಲೆಗೆ ಪ್ರಥಮ ಸ್ಥಾನ:

ಕನ್ನಡಪ್ರಭ ವಾರ್ತೆ ಮಂಡ್ಯ

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಪ್ರಜಾಪ್ರಭುತ್ವ ಜಾಗೃತಿ ಮೂಡಿಸುವ ಸಲುವಾಗಿ ಬೀದರ್‌ನಿಂದ ಚಾಮರಾಜನಗರ ಜಿಲ್ಲೆಯವರೆಗೆ ಹಮ್ಮಿಕೊಂಡಿದ್ದ ಮಾನವ ಸರಪಳಿ ನಿರ್ಮಾಣದಲ್ಲಿ ಅತಿ ಹೆಚ್ಚು ಖಾಸಗಿ ಕಂಪನಿಗಳ ಭಾಗವಹಿಸುವಿಕೆ ವಿಭಾಗದಲ್ಲಿ ಮಂಡ್ಯ ಜಿಲ್ಲೆ ಪ್ರಥಮ ಸ್ಥಾನ ಪಡೆದಿದೆ. ಮಂಡ್ಯ ಜಿಲ್ಲಾಡಳಿತದ ವತಿಯಿಂದ ಜಿಲ್ಲಾಧಿಕಾರಿ ಡಾ. ಕುಮಾರ ಅವರು ಪ್ರಶಸ್ತಿ ಸ್ವೀಕರಿಸಿದ್ದಾರೆ.