ಬಿಜೆಪಿಯಿಂದ 100 ಕೋಟಿ ರು. ಆಮಿಷ : ಕಾಂಗ್ರೆಸ್‌ ಶಾಸಕ ಬಾಂಬ್‌ - ಮತ್ತೆ ‘ಆಪರೇಷನ್‌ ಕಮಲ’ದ ಆರೋಪ

| Published : Aug 26 2024, 01:37 AM IST / Updated: Aug 26 2024, 07:33 AM IST

bjp flag
ಬಿಜೆಪಿಯಿಂದ 100 ಕೋಟಿ ರು. ಆಮಿಷ : ಕಾಂಗ್ರೆಸ್‌ ಶಾಸಕ ಬಾಂಬ್‌ - ಮತ್ತೆ ‘ಆಪರೇಷನ್‌ ಕಮಲ’ದ ಆರೋಪ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ ಮಂಡ್ಯ ಶಾಸಕ ಪಿ.ರವಿಕುಮಾರ್‌(ಗಣಿಗ ರವಿ) ಅವರು ಬಿಜೆಪಿ ವಿರುದ್ಧ ಮತ್ತೆ ‘ಆಪರೇಷನ್‌ ಕಮಲ’ದ ಆರೋಪ ಮಾಡಿದ್ದಾರೆ.

 ಮಂಡ್ಯ :  ಕಾಂಗ್ರೆಸ್‌ ಮಂಡ್ಯ ಶಾಸಕ ಪಿ.ರವಿಕುಮಾರ್‌(ಗಣಿಗ ರವಿ) ಅವರು ಬಿಜೆಪಿ ವಿರುದ್ಧ ಮತ್ತೆ ‘ಆಪರೇಷನ್‌ ಕಮಲ’ದ ಆರೋಪ ಮಾಡಿದ್ದಾರೆ. ಬಿಜೆಪಿ ಬ್ರೋಕರ್‌ಗಳು ಪ್ರತಿನಿತ್ಯ ಕಾಂಗ್ರೆಸ್ ಶಾಸಕರನ್ನು ಸಂಪರ್ಕಿಸಿ 50 ರಿಂದ 100 ಕೋಟಿ ರುಪಾಯಿ ಆಫರ್ ನೀಡಿ ‘ಆಪರೇಷನ್ ಕಮಲ’ಕ್ಕೆ ಮುಂದಾಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕಾಂಗ್ರೆಸ್ ಸರ್ಕಾರ ಕೆಡವಲು ಮುಂದಾಗಿರುವ ಬಿಜೆಪಿಯು ಕಾಂಗ್ರೆಸ್ ಶಾಸಕರಿಗೆ ಕೋಟಿ ಕೋಟಿ ರುಪಾಯಿ ಆಫರ್ ನೀಡುತ್ತಿದೆ. ಸುಮಾರು 50 ಮಂದಿ ಶಾಸಕರನ್ನು ಖರೀದಿಸಲು ಯತ್ನಿಸುತ್ತಿದೆ ಎಂದರು.

ಮೊನ್ನೆಯೂ ಕೆಲ ಕಾಂಗ್ರೆಸ್ ಶಾಸಕರಿಗೆ ಕರೆ ಬಂದಿದೆ. ನನಗೂ ಯಾರೋ ಒಬ್ಬ ಫೋನ್‌ ಮಾಡಿ 100 ಕೋಟಿ ರುಪಾಯಿ ರೆಡಿ ಇದೆ ಎಂದು ಹೇಳಿದ. ಆಗ ನಾನು ನೂರು ಕೋಟಿ ನೀನೇ ಇಟ್ಕೊಳ್ಳಯ್ಯ, ನಿನ್ನನ್ನು ಯಾರೂ ಇ.ಡಿ.ಯವರು ಹಿಡಿಯುತ್ತಿಲ್ವಾ? ಎಂದು ಕೇಳಿದ್ದೇನೆ. ಈ ಕುರಿತು ಇ.ಡಿ.ಯವರಿಗೆ ದೂರು ಕೂಡಬೇಕು ಎಂದೂ ಚಿಂತಿಸಿದ್ದೆ‌ ಎಂದರು.

ಕಾಂಗ್ರೆಸ್ ಸರ್ಕಾರ ಬೀಳಿಸಲು ದಿನನಿತ್ಯ ಪ್ರಯತ್ನ ನಡೆಯುತ್ತಿದೆ. ಸಂತೋಷ್ ಜೀ, ಶೋಭಾ ಕರಂದ್ಲಾಜೆ, ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಇವರೆಲ್ಲ ಒಂದು ಗ್ಯಾಂಗ್ ಆಗಿದ್ದಾರೆ‌‌. ಸರ್ಕಾರ ಅಸ್ಥಿರಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಈ ಗ್ಯಾಂಗ್ ಸರ್ಕಾರ ಬೀಳಿಸುವುದಾಗಿ ಪ್ರಧಾನಿ ಮೋದಿಗೆ ಮಾತು ಕೊಟ್ಟಿದ್ದಾರೆ‌ ಎಂದು ದೂರಿದರು.

ಕರೆ ಮಾಡಿ ಆಫರ್ ಮಾಡಿರುವ ಕುರಿತು ಆಡಿಯೋ ಇದೆ. ಸರಿಯಾದ ಸಮಯದಲ್ಲಿ ಅದನ್ನು ರಿಲೀಸ್ ಮಾಡುತ್ತೇವೆ. ಆಪರೇಷನ್ ಕಮಲದ ಬಗ್ಗೆ ಮತ್ತಷ್ಟು ಮಾಹಿತಿ ಕಲೆ ಹಾಕುತ್ತಿದ್ದೇವೆ. ಸಾಕ್ಷಿ ಸಮೇತ ಐಟಿ, ಇ.ಡಿ.ಗೆ ರೆಡ್ ಹ್ಯಾಂಡ್ ಆಗಿ ಹಿಡಿದು ಕೊಡುತ್ತೇವೆ. ನಮ್ಮದು 136 ಶಾಸಕರಿರುವ ಬಂಡೆಯಂಥ ಸರ್ಕಾರ. ನಮ್ಮ ಶಾಸಕರು ಆಮಿಷಗಳಿಗೆ ಬಲಿಯಾಗಲ್ಲ‌, ಸರ್ಕಾರ ಕೆಡವಲು ಯಾರಿಂದಲೂ ಸಾಧ್ಯವಿಲ್ಲ ಎಂದು ಇದೇ ವೇಳೆ ತಿಳಿಸಿದರು.