ಸಾರಾಂಶ
ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದಲೂ ಪ್ರತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು.
ಕನ್ನಡಪ್ರಭ ವಾರ್ತೆ ಬೆಳ್ತಂಗಡಿ
ಬೆಳಾಲು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಪ್ರೌಢಶಾಲೆ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದು, ಈ ಸಾಧನೆಗೆ ಕಾರಣವಾದ ಎಲ್ಲ ವಿದ್ಯಾರ್ಥಿಗಳನ್ನು ಅಭಿನಂದಿಸುವ ಸಮಾರಂಭ ನಡೆಯಿತು.ಮುಖ್ಯಶಿಕ್ಷಕ ರಾಮಕೃಷ್ಣ ಭಟ್ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ಬೆಳಾಲು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ವಿದ್ಯಾ ಗೌಡ, ವೈಯಕ್ತಿಕ ನೆಲೆಯಲ್ಲಿ ಪ್ರತೀ ವಿದ್ಯಾರ್ಥಿಗಳಿಗೆ ಸ್ಮರಣಿಕೆಯೊಂದಿಗೆ 1 ಸಾವಿರ ರು. ಪ್ರೋತ್ಸಾಹಧನ ನೀಡಿ ಸನ್ಮಾನಿಸಿದರು.
ಜೊತೆಗೆ ಶಿಕ್ಷಕ ರಕ್ಷಕ ಸಂಘ ಮತ್ತು ಹಳೆ ವಿದ್ಯಾರ್ಥಿ ಸಂಘದ ವತಿಯಿಂದಲೂ ಪ್ರತಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು.ಬಳಿಕ ಮಾತನಾಡಿದ ವಿದ್ಯಾಗೌಡ, ಬೆಳಾಲು ಪ್ರೌಢಶಾಲೆಯ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಶೇ.100 ಫಲಿತಾಂಶದ ಸಾಧನೆ ಮಾಡಿ ಊರಿಗೆ ಕೀರ್ತಿ ತಂದಿದ್ದಾರೆ. ತಮ್ಮ ಮುಂದಿನ ವಿದ್ಯಾಭ್ಯಾಸದಲ್ಲಿ ಉನ್ನತ ಗುರಿಯೊಂದಿಗೆ ಅಧ್ಯಯನದ ಮಾಡುವ ಮೂಲಕ ಉತ್ತಮ ಸ್ಥಾನ ಏರಬೇಕು ಎಂದರು.
ಅತಿಥಿಗಳಾದ ಶಿಕ್ಷಕ ರಕ್ಷಕ ಸಂಘ ಅಧ್ಯಕ್ಷ ಶೇಖರ ಗೌಡ ಕೊಲ್ಲಿಮಾರು, ಹಳೆ ವಿದ್ಯಾರ್ಥಿ ಸಂಘ ಅಧ್ಯಕ್ಷ ಗಣೇಶ ಕನಿಕ್ಕಿಲ ಮತ್ತು ಶಾಲೆಯ ಹಳೆ ವಿದ್ಯಾರ್ಥಿ, ಎಂಜಿನಿಯರಿಂಗ್ ಪದವೀಧರೆ ವಂದನಾ ಪರಂಗಜೆ ಶುಭಕೋರಿದರು.ವೇದಿಕೆಯಲ್ಲಿ ಪಂಚಾಯಿತಿ ವಾಚನಾಲಯ ಅಧಿಕಾರಿ ಡೀಕಯ್ಯ ಗೌಡ ಅರಣೆಮಾರು ಹಾಗೂ ಶಿಕ್ಷಕ, ಸಿಬ್ಬಂದಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಪರವಾಗಿ ಅಮೂಲ್ಯ ಮತ್ತು ಕೀರ್ತನಾ ಅಭಿಪ್ರಾಯ ಹಂಚಿಕೊಂಡರು. ಶಿಕ್ಷಕ ಸುಮನ್ ಸ್ವಾಗತಿಸಿದರು. ಸಮೀಕ್ಷಾ ವಂದಿಸಿದರು. ಇಂದುಮತಿ ಕಾರ್ಯಕ್ರಮ ನಿರೂಪಿಸಿದರು.