ಸಾರಾಂಶ
ಶಿವಾನಂದ ಗೊಂಬಿ
ಹುಬ್ಬಳ್ಳಿ: ಯಾವುದೇ ಕೋಚಿಂಗ್ ಹೋಗದೇ ಆನ್‌ಲೈನ್‌ನಲ್ಲೇ ತರಬೇತಿ ಮತ್ತು ಮನೆಯಲ್ಲೇ ಅಧ್ಯಯನ ಮಾಡಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ನಗರದ ಯುವತಿ ವಿಜೇತಾ ಭೀಮಸೇನ ಹೊಸಮನಿ ರಾಷ್ಟ್ರಕ್ಕೆ 100 ರ್‍ಯಾಂಕ್ ಪಡೆದಿದ್ದಾರೆ.ಮೂಲತಃ ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ತಾಲೂಕಿನವರಾದ ವಿಜೇತಾ ಹೊಸಮನಿ, ಸದ್ಯ ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿನ ಸಿಲ್ವರ್‌ಟೌನ್‌ನಲ್ಲೇ ನೆಲೆಸಿದ್ದಾರೆ. ಮೂರು ಬಾರಿ ಪೂರ್ವಭಾವಿ ಪರೀಕ್ಷೆಯನ್ನೂ ಪಾಸಾಗಿರಲಿಲ್ಲ. ಆದರೂ ಧೃತಿಗೆಡದೇ ನಾಲ್ಕನೆಯ ಬಾರಿಗೆ ಯುಪಿಎಸ್‌ಸಿಯಲ್ಲಿ 100 ರ್‍ಯಾಂಕ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಎಲ್‌ಕೆಜಿಯಿಂದ 5ನೆಯ ತರಗತಿ ವರೆಗೆ ವಿಜಯಪುರದ ಸೈನಿಕ ಶಾಲೆಯ ಶಿಶುನಿಕೇತನ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿರುವ ಇವರು, 6ರಿಂದ 10ನೆಯ ತರಗತಿ ವರೆಗೆ ಬಾಗಲಕೋಟೆಯ ಬಸವೇಶ್ವರ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಕಲಿತಿದ್ದಾರೆ. ಪಿಯುಸಿ ವಿಜಯಪುರದಲ್ಲಿ ಮುಗಿಸಿ ಪ್ಲ್ಯಾಟ್ ಎಕ್ಸಾಂನಲ್ಲಿ ಉತ್ತೀರ್ಣವಾಗಿ ಗುಜರಾತಿನ ನ್ಯಾಷನಲ್ ಲಾ ಯುನಿವರ್ಸಿಟಿಯಲ್ಲಿ ಬಿಎಎಲ್‌ಎಲ್ ಪದವಿ ಮಾಡಿದ್ದಾರೆ. ಕ್ರಿಮಿನಲ್ ಲಾನಲ್ಲಿ ಗೋಲ್ಡ್ ಮೆಡಲ್ ಕೂಡ ಪಡೆದ ಪ್ರತಿಭಾವಂತೆ ವಿಜೇತಾ.ಯುಪಿಎಸ್‌ಸಿ ಪರೀಕ್ಷೆ ಪಾಸ್ ಮಾಡಬೇಕು ಎಂಬ ಉತ್ಕಟ ಬಯಕೆ ಇವರದ್ದಾಗಿತ್ತು. ಈ ಹಿನ್ನೆಲೆಯಲ್ಲಿ 2020ರಿಂದ ನಿರಂತರವಾಗಿ ಪ್ರಯತ್ನ ಪಡುತ್ತಿದ್ದರು. ಮೂರು ಬಾರಿಯೂ ವಿಫಲವಾಗಿದ್ದರು. ಆದರೂ ಧೃತಿಗೆಡದೆ ನಾಲ್ಕನೆಯ ಪ್ರಯತ್ನದಲ್ಲಿ ಯಶಸ್ವಿಯಾಗಿದ್ದಾರೆ. ಹಾಗಂತ ಇವರೇನು ಕೋಚಿಂಗ್ ಸೆಂಟರ್‌ನಲ್ಲೇನೂ ತರಬೇತಿ ಪಡೆದವರಲ್ಲ. ಮನೆಯಲ್ಲೇ ಕುಳಿತು ಆನ್‌ಲೈನ್‌ನಲ್ಲೇ ತರಬೇತಿ ಪಡೆಯುತ್ತಾ ತಯಾರಿ ಮಾಡಿಕೊಳ್ಳುತ್ತಿದ್ದರು.
ಇವರ ತಂದೆ ತಾಯಿ ಇಬ್ಬರು ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಉದ್ಯೋಗಿಗಳಾಗಿದ್ದರು. ಇದೀಗ ಸ್ವಯಂ ನಿವೃತ್ತಿ ಪಡೆದಿದ್ದಾರೆ.ಮನೆಯಲ್ಲಿ ಸಂಭ್ರಮ: ಇವರು ಯುಪಿಎಸ್ಸಿಯಲ್ಲಿ 100 ರ್‍ಯಾಂಕ್ ಬಂದಿರುವುದು ಕುಟುಂಬದಲ್ಲಿ ಸಂಭ್ರಮವನ್ನು ಹೆಚ್ಚಿಸಿದೆ. ಪರಸ್ಪರ ಸಿಹಿ ತಿನ್ನಿಸಿ ಸಂಭ್ರಮಿಸಿದ್ದಾರೆ. ಮಗಳು ಯುಪಿಎಸ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕೆಂಬ ಬಯಕೆ ಹೊಂದಿದ್ದಳು, ಅದಕ್ಕೆ ತುಂಬಾ ಕಷ್ಟಪಟ್ಟು ಅಭ್ಯಾಸ ಮಾಡಿದ್ದಳು. ಇದೀಗ ಮಗಳು ಉತ್ತೀರ್ಣವಾಗಿರುವುದು ಖುಷಿಯಾಗಿದೆ ಎಂದು ಪಾಲಕರು ಹರ್ಷ ವ್ಯಕ್ತಪಡಿಸುತ್ತಾರೆ.
ತುಂಬಾ ಸಂತೋಷವಾಗಿದೆ. ಸತತ ನಾಲ್ಕು ವರ್ಷದಿಂದ ಪ್ರಯತ್ನ ಪಡುತ್ತಿದ್ದೆ. ಮೂರು ಬಾರಿ ವಿಫಲವಾಗಿದ್ದೆ. ನಾಲ್ಕನೆಯ ಬಾರಿ ಯಶಸ್ಸು ಸಿಕ್ಕಿದೆ. ಯುಪಿಎಸ್ಸಿಯಲ್ಲಿ ಪಾಸಾಗಿರುವುದು ಬಹಳ ಸಂತೋಷವಾಗಿದೆ ಎಂದು ವಿಜೇತಾ ಹೊಸಮನಿ ಹೇಳಿದರು.