ಸಾರಾಂಶ
ರೋಣ: ಅರ್ಧಕ್ಕೆ ನಿಂತಿರುವ ಶೌಚಾಲಯ ಕಾಮಗಾರಿ ಪೂರ್ಣಗೊಳಿಸಿ, ಸಮರ್ಪಕ ನೀರು ಮತ್ತು ಸ್ವಚ್ಛತೆಗೆ ವ್ಯವಸ್ಥೆ ಕಲ್ಪಿಸಿ, ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಸುಸಜ್ಜಿತ ಶೌಚಾಲಯ ನಿರ್ಮಿಸಿ ಎಂದು ಆಗ್ರಹಿಸಿ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರಿಗೆ( ಡಿಡಿಪಿಐ) ಶತಮಾನ ಕಂಡಿರುವ ರೋಣ ತಾಲೂಕಿನ ಹೊಸಳ್ಳಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯರು ಹಾಗೂ ವಿದ್ಯಾರ್ಥಿಗಳು 101 ತೆರೆದ ಅಂಚೆ ಪತ್ರ ಬರೆಯುವ ಮೂಲಕ ಮಂಗಳವಾರ ವಿನೂತನವಾಗಿ ಪ್ರತಿಭಟಿಸಿದರು.
ಶಾಲೆಯಲ್ಲಿ ಶೌಚಾಲಯ ನಿರ್ಮಿಸುವುದು ನಿಮ್ಮ (ಸರ್ಕಾರದ) ಕರ್ತವ್ಯ, ಅದನ್ನು ಕೇಳುವುದು ನಮ್ಮ ಹಕ್ಕು, ಶಾಲೆಯಲ್ಲೊಂದು ಸುಸಜ್ಜಿತ ಶೌಚಾಲಯವಿರಲಿ, ಹೆಣ್ಣು ಮಕ್ಕಳು ಎದುರಿಸುವ ಮುಜುಗರ ತಪ್ಪಿಸಿ ಎಂಬ ಘೋಷಣೆ ಕೂಗುತ್ತಾ ಗ್ರಾಮದಾದ್ಯಂತ ಸಂಚರಿಸಿದ ವಿದ್ಯಾರ್ಥಿಗಳು, ಬಳಿಕ ಗ್ರಾಮದಲ್ಲಿನ ಅಂಚೆ ಕಚೇರಿಗೆ ತೆರಳಿ ತೆರೆದ ಅಂಚೆ ಪತ್ರಗಳನ್ನು ಗದಗ ಜಿಲ್ಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರಿಗೆ ರವಾನಿಸಿದರು.ಶೌಚಾಲಯ ನಿರ್ಮಿಸುವಂತೆ ಕಳೆದೆರಡು ವರ್ಷಗಳಿಂದ ವಿದ್ಯಾರ್ಥಿಗಳು ಆಗ್ರಹಿಸುತ್ತಾ ಬಂದಿದ್ದರೂ ಶಿಕ್ಷಣ ಇಲಾಖೆಯಾಗಲಿ, ಸ್ಥಳೀಯ ಗ್ರಾಪಂ ಗಮನ ಹರಿಸದೇ ಇರುವುದರಿಂದ ಬೇಸತ್ತ ವಿದ್ಯಾರ್ಥಿಗಳು ಪತ್ರ ಚಳವಳಿ ಮೂಲಕ ಆಗ್ರಹಿಸಿದರು.
ಈ ವೇಳೆ ವಿದ್ಯಾರ್ಥಿನಿಯರಾದ ಕವಿತಾ ಕುರಿ, ಯಲ್ಲವ್ವ ಮಾದರ, ಸೃಷ್ಟಿ ಅಬ್ಬಿಗೇರಿ, ಕೀರ್ತಿ ರಡ್ಡೇರ ಮಾತನಾಡಿ, ನಮ್ಮ ಶಾಲೆಯಲ್ಲಿ ಶೌಚಾಲಯ ಹೆಸರಿಗೆ ಮಾತ್ರ ಇದ್ದು, ನೀರು, ಸ್ವಚ್ಛತೆ, ಬೆಳಕು ಇಲ್ಲ. ಬೆಳಗ್ಗೆ ಶಾಲೆಗೆ ಬಂದು ವಾಪಸ್ ಮನೆಗೆ ಹೋಗುವವರೆಗೂ ಶೌಚಾಲಯಕ್ಕೆ ಹೋಗದೇ ತೊಂದರೆ ಅನುಭವಿಸುತ್ತಿದ್ದೇವೆ. ಶಾಲೆಯಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಿಸುವಂತೆ ಶಿಕ್ಷಕರಿಗೆ, ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಹಾಗೂ ಈ ಹಿಂದಿನ ಶಾಲಾ ಸುಧಾರಣಾ ಸಮಿತಿಗೆ ವಿನಂತಿಸುತ್ತಾ ಬಂದಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಮ್ಮ ಕೂಗಿಗೆ ಜಿಲ್ಲಾ ಉಪನಿರ್ದೇಶಕರು ಸ್ಪಂದಿಸುತ್ತಾರೆ ಎಂಬ ನಂಬಿಕೆಯಿಂದ ಪತ್ರದ ಮೂಲಕ ಆಗ್ರಹಿಸಿದ್ದೇವೆ. ಕೂಡಲೇ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ತರಗತಿ ಬಹಿಷ್ಕಾರದ ಎಚ್ಚರಿಕೆ: ಶೀಘ್ರದಲ್ಲಿಯೇ ನಮ್ಮ ಬೇಡಿಕೆಗೆ ಸಂಬಂಧಿಸಿದವರು ಸ್ಪಂದಿಸದೇ ವಿಳಂಬ ಮಾಡಿದಲ್ಲಿ ತರಗತಿಗಳನ್ನು ಬಹಿಷ್ಕರಿಸಿ ಬೀದಿಗಿಳಿದು ಹೋರಾಟ ಮಾಡುತ್ತೇವೆ ಎಂದು ವಿದ್ಯಾರ್ಥಿಗಳು ಎಚ್ಚರಿಸಿದರು. 2021ರಲ್ಲಿ ಶಾಲೆಯಲ್ಲಿ ನಿರ್ಮಿಸಲಾಗಿದ್ದ ಶೌಚಾಲಯ ಕಾಮಗಾರಿ ಅರ್ಧಕ್ಕೆ ನಿಂತಿದೆ. ಇಲ್ಲಿ ಶೌಚಾಲಯವಿದೆ ಎಂಬುದು ದಾಖಲೆಯಲ್ಲಿ ಮಾತ್ರವಿದೆ. ವಾಸ್ತವವಾಗಿ ಅದು ಬಳಕೆಗೆ ಯೋಗ್ಯವಾಗಿಲ್ಲ. ಶಾಲಾ ಸುಧಾರಣಾ ಸಮಿತಿಯು ವಿದ್ಯಾರ್ಥಿಗಳ ಹೋರಾಟಕ್ಕೆ ಸಂಪೂರ್ಣ ಬೆಂಬಲಿಸುತ್ತದೆ ಎಸ್‌ಡಿಎಂಸಿ ಅಧ್ಯಕ್ಷ ಶಿವನಗೌಡ ಜುಮ್ಮನಗೌಡ್ರ ಹೇಳಿದರು.
ನರೇಗಾ ಯೋಜನೆಯಡಿ ಶೌಚಾಲಯ ನಿರ್ಮಿಸುವಂತೆ ತಾಒಂ ಇಒ ಅವರಿಗೆ ಪ್ರಸ್ತಾವನೆ ಸಲ್ಲಿಸಲಾಗುವದು. ಅರ್ಧಕ್ಕೆ ನಿಂತಿರುವ ಶೌಚಾಲಯ ಕಾಮಗಾರಿ ಪೂರ್ಣಗೊಳಿಸುವಲ್ಲಿ ಕ್ರಮ ಕೈಗೊಳ್ಳಲಾಗುವದು ರೋಣ ತಾಲೂಕು ಬಿಇಒ ರುದ್ರಪ್ಪ ಹುರಳಿ ಹೇಳಿದರು.