ನಾಳೆ ಮೈಸೂರು ವಿವಿ 104ನೇ ಘಟಿಕೋತ್ಸವ: 32249 ಮಂದಿಗೆ ಪದವಿ ಪ್ರದಾನ

| Published : Mar 02 2024, 01:48 AM IST

ಸಾರಾಂಶ

ಘಟಿಕೋತ್ಸವದಲ್ಲಿ 19992 ಮಹಿಳೆಯರು (ಶೇ.61.99), 12257 ಪುರುಷರು (ಶೇ.38) ಸೇರಿದಂತೆ ಒಟ್ಟು 32249 ವಿದ್ಯಾರ್ಥಿಗಳು ವಿವಿಧ ಪದವಿ ಪಡೆದುಕೊಳ್ಳಲಿದ್ದಾರೆ. 45 ಮಹಿಳೆಯರು ಮತ್ತು 55 ಪುರುಷರು ಸೇರಿದಂತೆ ಒಟ್ಟು 100 ಮಂದಿಗೆ ವಿವಿಧ ವಿಷಯಗಳಲ್ಲಿ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಗುವುದು. ಒಟ್ಟು 436 ಪದಕಗಳು ಮತ್ತು 266 ನಗದು ಬಹುಮಾನಗಳನ್ನು 252 ಅಭ್ಯರ್ಥಿಗಳು ಪಡೆದುಕೊಂಡಿದ್ದು, ಅವರಲ್ಲಿ 174 ಮಹಿಳೆಯರೇ ಇದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ವಿಶ್ವವಿದ್ಯಾನಿಲಯದ 104ನೇ ಘಟಿಕೋತ್ಸವವು ಮಾ.3ರ ಬೆಳಗ್ಗೆ 10ಕ್ಕೆ ಕ್ರಾಫರ್ಡ್ ಭವನದಲ್ಲಿ ಆಯೋಜಿಸಿದ್ದು, 32249 ವಿದ್ಯಾರ್ಥಿಗಳಿಗೆ ವಿವಿಧ ಪದವಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ತಿಳಿಸಿದರು.

ಕ್ರಾಫರ್ಡ್ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯಪಾಲ ಥಾವರ್‌ ಚಂದ್ ಗೆಹ್ಲೋತ್ ಅಧ್ಯಕ್ಷತೆ ವಹಿಸುವರು. ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ಮಾಜಿ ನಿರ್ದೇಶಕ ಡಾ.ಸಿ.ಎನ್. ಮಂಜುನಾಥ್ ಘಟಿಕೋತ್ಸವ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್ ಉಪಸ್ಥಿತರಿರುವರು ಎಂದರು.

ಈ ಬಾರಿಯ ಘಟಿಕೋತ್ಸವದಲ್ಲಿ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಮೈಸೂರಿನ ಸುದರ್ಶನ ನರಸಿಂಹ ಕ್ಷೇತ್ರದ ಪೀಠಾಧಿಪತಿ ನಾಡೋಜ ಭಾಷ್ಯಂಸ್ವಾಮಿ ಮತ್ತು ಡಾ.ಎಂ.ಎಸ್.ರಾಮಯ್ಯ ಅವರ ಪುತ್ರ, ಮಾಜಿ ಸಚಿವ ಎಂ.ಆರ್. ಸೀತಾರಾಂ ಅವರಿಗೆ ಗೌರವ ಡಾಕ್ಟರೇಟ್ ಪದವಿಯನ್ನು ನೀಡಿ ಗೌರವಿಸಲಾಗುವುದು ಎಂದರು.

ಮಹಿಳೆಯರೇ ಮೇಲುಗೈ:

ಘಟಿಕೋತ್ಸವದಲ್ಲಿ 19992 ಮಹಿಳೆಯರು (ಶೇ.61.99), 12257 ಪುರುಷರು (ಶೇ.38) ಸೇರಿದಂತೆ ಒಟ್ಟು 32249 ವಿದ್ಯಾರ್ಥಿಗಳು ವಿವಿಧ ಪದವಿ ಪಡೆದುಕೊಳ್ಳಲಿದ್ದಾರೆ. 45 ಮಹಿಳೆಯರು ಮತ್ತು 55 ಪುರುಷರು ಸೇರಿದಂತೆ ಒಟ್ಟು 100 ಮಂದಿಗೆ ವಿವಿಧ ವಿಷಯಗಳಲ್ಲಿ ಪಿಎಚ್‌.ಡಿ ಪದವಿ ಪ್ರದಾನ ಮಾಡಲಾಗುವುದು. ಒಟ್ಟು 436 ಪದಕಗಳು ಮತ್ತು 266 ನಗದು ಬಹುಮಾನಗಳನ್ನು 252 ಅಭ್ಯರ್ಥಿಗಳು ಪಡೆದುಕೊಂಡಿದ್ದು, ಅವರಲ್ಲಿ 174 ಮಹಿಳೆಯರೇ ಇದ್ದಾರೆ. 4039 ಮಹಿಳೆಯರು (ಶೇ.65.73) ಸೇರಿದಂತೆ 6144 ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಗೆ ಹಾಗೂ 15910 (ಶೇ.61.17) ಮಹಿಳೆಯರು ಸೇರಿದಂತೆ 26009 ಅಭ್ಯರ್ಥಿಗಳು ಸ್ನಾತಕ ಪದವಿಗೆ ಅರ್ಹರಾಗಿದ್ದಾರೆ. ಎಲ್ಲಾ ವಿಭಾಗದಲ್ಲೂ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ ಎಂದು ಅವರು ವಿವರಿಸಿದರು.

ಮೇಘನಾಗೆ 15 ಚಿನ್ನದ ಪದಕ:

ಎಂ.ಎಸ್ಸಿ ಕೆಮಿಸ್ಟ್ರಿ ವಿಷಯದಲ್ಲಿ ಎಚ್.ಎಸ್. ಮೇಘನಾ 15 ಚಿನ್ನದ ಪದಕ ಹಾಗೂ 5 ನಗದು ಬಹುಮಾನಗಳನ್ನು ಪಡೆದಿದ್ದು, ಎಂ.ಎ ಕನ್ನಡ ವಿಷಯದಲ್ಲಿ ವಿ. ತೇಜಸ್ವಿನಿ 10 ಚಿನ್ನದ ಪದಕ ಮತ್ತು 4 ಬಹುಮಾನ ಪಡೆದುಕೊಂಡಿದ್ದಾರೆ. ಎಂ.ಎಸ್ಸಿ ಗಣಿತದಲ್ಲಿ ಡಿ. ದರ್ಶನ್ 5 ಚಿನ್ನದ ಪದಕ, 3 ಬಹುಮಾನ, ಬಿಎ ವಿಭಾಗದಲ್ಲಿ ಎಂ. ಸುಮಾ 5 ಚಿನ್ನದ ಪದಕ, 3 ಬಹುಮಾನ, ಬಿ. ನಂದೀಶ 4 ಚಿನ್ನ ಹಾಗೂ 10 ಬಹುಮಾನ, ಬಿ.ಕಾಂ. ನಲ್ಲಿ ವೈ.ವೈ. ಸಿಂಧು 1 ಚಿನ್ನದ ಪದಕ ಹಾಗೂ 2 ಬಹುಮಾನ ಪಡೆದಿದ್ದಾರೆ. ಬಿ.ಇಡಿ.ಯಲ್ಲಿ ಎಂ. ಮಾನಸಾ ಹಾಗೂ ಕೆ. ರಂಜಿತಾ ತಲಾ 2 ಚಿನ್ನದ ಪದಕ, 2 ನಗದು ಬಹುಮಾನ, ಎಂಬಿಎ ಅಗ್ರಿ ಬ್ಯುಸಿನೆಸ್‌ ನಲ್ಲಿ ಎಸ್. ಲಿಖಿತಾ 5 ಚಿನ್ನದ ಪದಕ, ಎಂ.ಕಾಂ.ನಲ್ಲಿ ಪಿ.ಬಿ. ಭಾಗ್ಯಶ್ರೀ ಭಟ್ 4 ಚಿನ್ನ, 2 ಬಹುಮಾನ ತಮ್ಮದಾಗಿಸಿಕೊಂಡಿದ್ದಾರೆ ಎಂದರು.

ಮೈಸೂರು ವಿವಿ ಕುಲಸಚಿವೆ ವಿ.ಆರ್. ಶೈಲಜಾ, ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎಂ. ಮಹದೇವನ್, ಹಣಕಾಸು ಅಧಿಕಾರಿ ಕೆ.ಎಸ್. ರೇಖಾ ಇದ್ದರು.

ವಿವಿ ವಿಭಜನೆಯಿಂದ ನಿರ್ವಹಣೆಯೇ ಸವಾಲು

ಮೈಸೂರು ವಿವಿ ವಿಭಜನೆಯಾಗಿದ್ದರೂ ಈ ಬಾರಿಯ ಘಟಿಕೋತ್ಸವದಲ್ಲಿ ಮೈಸೂರು, ಮಂಡ್ಯ, ಹಾಸನ ಹಾಗೂ ಚಾಮರಾಜನಗರ ಜಿಲ್ಲೆಗಳ ವಿದ್ಯಾರ್ಥಿಗಳು ಪದವಿ ಪಡೆದುಕೊಳ್ಳಲಿದ್ದಾರೆ. ವಿಭಜನೆಗೆ ಮುನ್ನ ಮೈಸೂರು ವಿವಿ ವ್ಯಾಪ್ತಿಯಲ್ಲಿ 236 ಕಾಲೇಜುಗಳು ಇದ್ದವು. ಪ್ರಸ್ತುತ 111 ಇವೆ. ಮೈಸೂರು ಜಿಲ್ಲೆಯ ವ್ಯಾಪ್ತಿಯಷ್ಟೇ ಈಗ ಹೊಂದಲಾಗಿದೆ. ಇದರಿಂದಾಗಿ ಆರ್ಥಿಕ ಸಂಕಷ್ಟ ಎದುರಾಗಿದೆ. ನಿರ್ವಹಣೆಯೂ ಸವಾಲಾಗಿ ಪರಿಣಮಿಸಿದೆ ಎಂದು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್ ತಿಳಿಸಿದರು.

2007ರ ನಂತರ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಕಾಯಂ ಬೋಧಕರ ನೇಮಕಾತಿ ನಡೆದಿಲ್ಲ. ಅತಿಥಿ ಉಪನ್ಯಾಸಕರು ಹಾಗೂ ಹೊರ ಗುತ್ತಿಗೆ ನೌಕರರನ್ನು ನೇಮಿಸಿಕೊಂಡು ದೈನಂದಿನ ಚಟುವಟಿಕೆಗಳನ್ನು ನಿರ್ವಹಿಸಲಾಗುತ್ತಿದೆ. ಶೇ.43 ರಷ್ಟು ಹುದ್ದೆಗಳು ಖಾಲಿ ಇವೆ. ಭರ್ತಿ ಮಾಡಿಕೊಡುವಂತೆ ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆಯಲಾಗಿದೆ.

- ಪ್ರೊ.ಎನ್.ಕೆ. ಲೋಕನಾಥ್, ಕುಲಪತಿ, ಮೈಸೂರು ವಿವಿ

ಮೈಸೂರು ವಿವಿಗೆ 664 ಬೋಧಕರ ಹುದ್ದೆಗಳು ಮಂಜೂರಾಗಿದ್ದು, ಪ್ರಸ್ತುತ 290 ಕಾಯಂ ಬೋಧಕರು ಮಾತ್ರ ಇದ್ದಾರೆ. ನಿವೃತ್ತಿಯಾದವರ ಸ್ಥಾನಕ್ಕೂ ಭರ್ತಿ ಮಾಡಿಕೊಳ್ಳಲಾಗುತ್ತಿಲ್ಲ. 1349 ಬೋಧಕೇತರ ಹುದ್ದೆಗಳು ಮಂಜೂರಾಗಿದ್ದು, ಈ ಪೈಕಿ 500 ಕಡಿಮೆ ಸಿಬ್ಬಂದಿ ಇದ್ದಾರೆ. 850 ಮಂದಿ ಅತಿಥಿ ಉಪನ್ಯಾಸಕರನ್ನು ಬಳಸಿಕೊಳ್ಳಲಾಗುತ್ತಿದೆ.

- ವಿ.ಆರ್. ಶೈಲಜಾ, ಕುಲಸಚಿವೆ, ಮೈಸೂರು ವಿವಿ