ಉದ್ಯಾವರದಲ್ಲಿ ರೋಗಿ 2 ಗಂಟೆ ಕಾದರೂ 108 ಸೇವೆ ಲಭ್ಯವಾಗದೆ ಸಮಾಜಸೇವಕ ವಿಶು ಶೆಟ್ಟಿ ಅವರು ರೋಗಿಯನ್ನು ಗೂಡ್ಸ್ ವಾಹನದಲ್ಲಿ ಕರೆ ತಂದ ಘಟನೆ ಅತ್ಯಂತ ದುರದೃಷ್ಟಕರ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉಡುಪಿ: ಉದ್ಯಾವರದಲ್ಲಿ ರೋಗಿ 2 ಗಂಟೆ ಕಾದರೂ 108 ಸೇವೆ ಲಭ್ಯವಾಗದೆ ಸಮಾಜಸೇವಕ ವಿಶು ಶೆಟ್ಟಿ ಅವರು ರೋಗಿಯನ್ನು ಗೂಡ್ಸ್ ವಾಹನದಲ್ಲಿ ಕರೆ ತಂದ ಘಟನೆ ಅತ್ಯಂತ ದುರದೃಷ್ಟಕರ, ರಾಜ್ಯ ಸರ್ಕಾರ ಜಿಲ್ಲೆಯ ಆರೋಗ್ಯ ಸಮಸ್ಯೆಗಳ ಬಗ್ಗೆ ಮಲ ತಾಯಿ ಧೋರಣೆ ನಡೆಸುತ್ತಿದ್ದು ರೋಗಿಗಳ ಜೀವದ ಜೊತೆ ಚೆಲ್ಲಾಟವಾಡುತ್ತಿದೆ ಎಂದು ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಕಳೆದ 2 ವರ್ಷಗಳಲ್ಲಿ 108 ಸೇವೆ ವ್ಯತ್ಯಯವಾಗಿ ರೋಗಿಗಳು ಸಮಸ್ಯೆ ಎದುರಿಸುತಿದ್ದು,ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೆ ತಂದರೂ ಗಂಭೀರವಾಗಿ ಪರಿಗಣಿಸಿಲ್ಲ. 108 ಚಾಲಕರಿಗೆ ಅವೈಜ್ಞಾನಿಕ ಶಿಫ್ಟ್ ವ್ಯವಸ್ಥೆ, ವಾಹನಗಳ ಕಳಪೆ ನಿರ್ವಹಣೆ, ವೇತನ ಬಾಕಿ, ವಸತಿ ಸೌಲಭ್ಯ ಕೊರತೆ ಮುಂತಾದ ಗಂಭೀರ ಸಮಸ್ಯೆಗಳ ಬಗ್ಗೆ ಹಲವು ಬಾರಿ ಪತ್ರ ಬರೆದರೂ ರಾಜ್ಯ ಸರ್ಕಾರ ಪರಿಹಾರ ಕಲ್ಪಿಸಿಲ್ಲ. ಆರೋಗ್ಯಕ್ಕೆ ವಿಶೇಷ ಮಹತ್ವ ನೀಡುವ ಜಿಲ್ಲೆಯಲ್ಲಿ ಇಂತಹ ಘಟನೆಗಳು ವರದಿಯಾಗುತ್ತಿರುವುದು ರಾಜ್ಯ ಸರ್ಕಾರದ ವೈಫಲ್ಯಕ್ಕೆ ಜೀವಂತ ಸಾಕ್ಷಿಯಾಗಿದೆ ಎಂದವರು ಹೇಳಿದ್ದಾರೆ.
ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ತಕ್ಷಣ ಆದ್ಯತೆಯ ಮೇರೆಗೆ 108 ಸೇವೆಯನ್ನು ವ್ಯವಸ್ಥಿತವಾಗಿ ಒದಗಿಸಲು ಹಾಗೂ ಜಿಲ್ಲಾಸ್ಪತ್ರೆ ಕಾಮಗಾರಿ ಪೂರ್ಣಗೊಳಿಸಿ ಜಿಲ್ಲೆಯ ಜನತೆಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಕ್ರಮವಹಿಸುವಂತೆ ಯಶ್ ಪಾಲ್ ಸುವರ್ಣ ಆಗ್ರಹಿಸಿದ್ದಾರೆ.