ಆರ್‌ಎಸ್‌ಎಸ್‌ನ 100ನೇ ವರ್ಷದ ಅಂಗವಾಗಿ ಹಾಗೂ ಹಿಂದು ಸಮಾಜ ಜಾಗೃತಿಗಾಗಿ ಫೆ.10ರಂದು ಶ್ರೀರಂಗಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ, ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಯಾತ್ರೆಯಲ್ಲಿ ಮಂಗಳ ವ್ಯಾದ್ಯದೊಂದಿಗೆ ಪೂರ್ಣ ಕುಂಭಹೊತ್ತ ಮಹಿಳೆಯರು ಹಾಗೂ ಹಳ್ಳಿಕಾರ್ ಎತ್ತುಗಳ ಮೆರವಣಿಗೆ ನಡೆಸಲಾಗುವುದು.

ಶ್ರೀರಂಗಪಟ್ಟಣ:

ಆರ್‌ಎಸ್‌ಎಸ್‌ನ 100ನೇ ವರ್ಷದ ಅಂಗವಾಗಿ ಹಾಗೂ ಹಿಂದು ಸಮಾಜ ಜಾಗೃತಿಗಾಗಿ ಫೆ.10ರಂದು ಪಟ್ಟಣದಲ್ಲಿ ಹಿಂದೂ ಸಮಾಜೋತ್ಸವ, ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಹಿಂದೂ ಸಮಾಜೋತ್ಸವ ಸಮಿತಿ ಮುಖಂಡ ಚಂದನ್ ಹೇಳಿದರು.

ಪಟ್ಟಣದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಮಧ್ಯಾಹ್ನ 4 ಗಂಟೆಗೆ ಪಟ್ಟಣದ ಕುವೆಂಪು ವೃತ್ತದಿಂದ ಮುಖ್ಯ ರಸ್ತೆ ಮೂಲಕ ಶ್ರೀರಂಗನಾಥ ಕಲ್ಯಾಣ ಮಂಟಪದ ವರೆಗೆ ಬೃಹತ್ ಶೋಭಾಯಾತ್ರೆ ನಡೆಯಲಿದೆ ಎಂದರು.

ಯಾತ್ರೆಯಲ್ಲಿ ಮಂಗಳ ವ್ಯಾದ್ಯದೊಂದಿಗೆ ಪೂರ್ಣ ಕುಂಭಹೊತ್ತ ಮಹಿಳೆಯರು ಹಾಗೂ ಹಳ್ಳಿಕಾರ್ ಎತ್ತುಗಳ ಮೆರವಣಿಗೆ ನಡೆಸಲಾಗುವುದು. ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಸೇರಿದಂತೆ ಸುಮಾರು 1 ಸಾವಿರ ಮಂದಿ ಸೇರುವ ನಿರೀಕ್ಷೆ ಇದೆ ಎಂದರು.

ಶೋಭಾಯಾತ್ರೆ ಬಳಿಕ ಶ್ರೀರಂಗನಾಥ ಕಲ್ಯಾಣ ಮಂಟಪ ಮುಂಭಾಗ ಸಭಾ ಕಾರ್ಯಕ್ರಮ ನಡೆಯಲಿದೆ. ತೆಂಡೆಕೆರೆ ಬಾಳೆಹೊನ್ನೂರು ಶಾಖಾ ಮಠದ ಶ್ರೀಗಂಗಾಧರ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ದೇವಸ್ಥಾನ ಸಂವರ್ಧನಾ ಸಮಿತಿ ಸಂಯೋಜಕ ಮನೋಹರ್ ಮಠದ್ ಅವರು ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಬಳಿಕ ಪ್ರಸಾದ ವಿನಿಯೋಗ ನಡೆಯಲಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿ ಸದಸ್ಯರಾದ ಲೋಕೇಶ್, ಹೇಮಂತ್‌ಕುಮಾರ್, ಶಂಕರ್, ಮಂಜುನಾಥ್, ಕಿರಣ್‌ಕುಮಾರ್ ಸಿಂಗ್ ಸೇರಿದಂತೆ ಇತರರು ಇದ್ದರು.

ಹುಚ್ಚಲಮ್ಮ, ಚಿಕ್ಕಮ್ಮದೇಗುಲ ಲೋಕಾರ್ಪಣೆ

ಕಿಕ್ಕೇರಿ:

ಗಡಿಭಾಗ ಗೂಡೇಹೊಸಹಳ್ಳಿಯ ಹುಚ್ಚಲಮ್ಮ, ಚಿಕ್ಕಮ್ಮದೇಗುಲಗಳನ್ನು ಭಕ್ತರ ಸಮಾಗಮದೊಂದಿಗೆ ಲೋಕಾರ್ಪಣೆ ಮಾಡಲಾಯಿತು.

ಎರಡು ದಿನಗಳ ಕಾಲ ಗ್ರಾಮದ ಎಲ್ಲ ಮನೆಗಳಲ್ಲಿ ಹಬ್ಬದ ವಾತಾವರಣೆ ಸೃಷ್ಟಿಯಾಗಿತ್ತು. ಮನೆ ಮುಂದೆ ವರ್ಣರಂಜಿತ ರಂಗೋಲಿ, ತಳಿರು ತೋರಣಗಳಿಂದ ಶೃಂಗರಿಸಲಾಗಿತ್ತು. ಬೆಳಗ್ಗೆ ಗ್ರಾಮದ ಮಹಿಳೆಯರು ಮುಖಂಡರೊಂದಿಗೆ ಜೊತೆಗೂಡಿ ವೇದಘೋಷ, ಮಂಗಳವಾದ್ಯದೊಂದಿಗೆ ಸಮೀಪದಲ್ಲಿ ಹೇಮಾವತಿ ನದಿಯಿಂದ ಪವಿತ್ರಗಂಗೆಯನ್ನು ಪೂರ್ಣಕುಂಭದೊಂದಿಗೆ ಮೆರವಣಿಗೆ ಮೂಲಕ ತಂದರು.

ದೇವಿ ಮೂರ್ತಿಗೆ ಪೂರ್ಣಕುಂಭ ಜಲಾಭಿಷೇಕ ನೆರವೇರಿಸಲಾಯಿತು. ಪೂಜಾ ಕೈಂಕರ್ಯದಲ್ಲಿ ಪುಣ್ಯಾಹ್ನ ವಾಚನ, ದೇವನಂದಿ ಕಂಕಣಧಾರೆ, ಕೃಚ್ಛಾರಣೆ, ಗೋಪೂಜೆ, ಮಹಾ ಸಂಕಲ್ಪ, ಗ್ರಾಮ, ಸಭಾ ಪೂಜೆ, ವೇದಪಾರಾಯಣ, ಕಳಶ ಪೂಜೆ, ರಾಕ್ಷೆಘ್ನ, ದೀಕ್ಷಕಾಲ ಬಲಿ, ಆದಿವಾಸ ಬಂಧಶುದ್ಧ, ಪರಿವಾರ, ವಾಸ್ತು, ರುದ್ರ, ಕಲಾ, ಅಘೋರರುದ್ರ ಹೋಮ, ಪ್ರಸಾದ ವಾಸ್ತು ಪೂಜೆ, ಮಹಾ ಪೂರ್ಣಾಹುತಿ, ರಾಜಾರ್ಶೀವಾದ ನೆರವೇರಿತು.

ವಿಮಾನಗೋಪುರ ಕಳಶ ಪ್ರತಿಷ್ಟಾಪನೆ, ಕಲಾಕರ್ಷಣೆ, ಕಲಶಾಭಿಷೇಕ, ಬಿಂಬ ಪೂಜೆ, ಈಶ್ವರ ಲಿಂಗ ಪ್ರಾಣ ಪ್ರತಿಷ್ಟಾಪನಾ ಮಹೋತ್ಸವಅಂತಿಮವಾಗಿ ನಡೆಯಿತು.

ಭಕ್ತಾದಿಗಳು ಸರತಿಯಲ್ಲಿ ನಿಂತು ದೇವರ ದರ್ಶನ ಪಡೆದು ಪುನೀತರಾದರು. ಮಹಾ ಮಂಗಳಾರತಿ, ತೀರ್ಥ ಪ್ರಸಾದ ಸ್ವೀಕರಿಸಿದರು. ಸಾಮೂಹಿಕ ಅನ್ನದಾಸೋಹ ನಡೆಯಿತು. ಗ್ರಾಮದ ಮುಖಂಡರು, ಸುತ್ತಮುತ್ತಲ ಗ್ರಾಮಸ್ಥರು ಇದ್ದರು.