ಬರದ ಹಿನ್ನಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕಿಡಾಗಿದ್ದು ಸದ್ಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಾಲೂಕಿಗೆ ತಲಾ1 ಕೋಟಿಯಂತೆ ಜಿಲ್ಲೆಗೆ 11ಕೋಟಿ ಹಣ ಬಿಡುಗಡೆಯಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಪಾವಗಡ

ಬರದ ಹಿನ್ನಲೆಯಲ್ಲಿ ರೈತರು ತೀವ್ರ ಸಂಕಷ್ಟಕ್ಕಿಡಾಗಿದ್ದು ಸದ್ಯ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ತಾಲೂಕಿಗೆ ತಲಾ1 ಕೋಟಿಯಂತೆ ಜಿಲ್ಲೆಗೆ 11ಕೋಟಿ ಹಣ ಬಿಡುಗಡೆಯಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಜಿ.ಪರಮೇಶ್ವರ್‌ ಹೇಳಿದರು.ಅವರು ಪ್ರಸಕ್ತ ಸಾಲಿನ ಬರ ಪರಿಸ್ಥಿತಿಯ ಪರಿಶೀಲನೆಗಾಗಿ ಸೋಮವಾರ ಪಾವಗಡಕ್ಕೆಆಗಮಿಸಿ ತುಮುಲ್‌ ಉಪಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮೇವಿನ ಕಿಟ್‌ ಹಾಗೂ ಮರಣಹೊಂದಿದ್ದ ಹಸುಗಳಿಗೆ 75ಲಕ್ಷ ವಿಮೆ ಹಣದ ಚೆಕ್‌ ರೈತರಿಗೆ ವಿತರಿಸಿ ಮಾತನಾಡಿದರು.

ಪ್ರಕೃತಿ ವಿಕೋಪದ ಪರಿಣಾಮ ಮಳೆಯ ಅಭಾವದಿಂದ ಜಿಲ್ಲೆ ಸೇರಿದಂತೆ ರಾಜ್ಯಾದ್ಯತ ರೈತರು ಕಷ್ಟ ಎದುರಿಸುತ್ತಿದ್ದಾರೆ. ಬಳ್ಳಾರಿ ವಿಜಯನಗರ ಹಾಗೂ ಉತ್ತರ ಕರ್ನಾಟಕದ ಕೆಲ ಭಾಗಗಳಲ್ಲಿ ಕಾರ್ಮಿಕರು ವಲಸೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಗಂಭೀರವಾಗಿ ಪರಿಗಣಿಸಿ, ಬರ ಸಮಸ್ಯೆ ನಿವಾರಣೆಗೆ ಹೆಚ್ಚು ಅದ್ಯತೆ ನೀಡಲು ಮುಂದಾಗಿದೆ ಎಂದರು.

ಪ್ರಸಕ್ತ ಸಾಲಿಗೆ ತಾಲೂಕಿನಲ್ಲಿ 19ಸಾವಿರ ಹೆಕ್ಟೇರ್‌ ಪೈಕಿ 4ಸಾವಿರ ಹೆಕ್ಟೇರು ಪ್ರದೇಶದಲ್ಲಿ ಶೇಂಗಾ ಬಿತ್ತನೆ ಕಾರ್ಯ ನಡೆದಿದ್ದು, ವಾಡಿಕೆ ಮಳೆಯ ಅಭಾವದಿಂದ ಬೆಳೆ ಸಂಪೂರ್ಣ ಒಣಗಿಹೋಗಿದೆ. ಇದೇ ರೀತಿ ತಾಲೂಕಿನಾದ್ಯಂತ ಕುಡಿಯುವ ನೀರಿನ ಅಭಾವ ಸೃಷ್ಟಿಯಾಗಿದೆ. ಮುಂಜಾಗ್ರತ ಕ್ರಮವಾಗಿ ಅಭಾವ ಪರಿಗಣಿಸಿ ಜಿಲ್ಲೆಯ 11 ತಾಲೂಕುಗಳಿಗೆ ತಲಾ 1ಕೋಟಿ ಹಣ ಜಿಲ್ಲಾಧಿಕಾರಿಗಳ ಖಾತೆಗೆ ಬಿಡುಗಡೆ ಮಾಡಲಾಗಿದೆ ಎಂದರು.

ಮೇವಿನ ಸಮಸ್ಯೆ ನಿವಾರಣೆಗೆ ಸಲಹೆ ನೀಡಿದ ಹಿನ್ನಲೆಯಲ್ಲಿ ಸ್ಪಂದಿಸಿ ಕೆಎಂಎಫ್‌ ನಿಂದ ತಾಲೂಕಿಗೆ 5ಸಾವಿರ ಕ್ವಿಂಟಾಲ್‌ ನಂತೆ 1ಲಕ್ಷ ಕೆಜಿ ಜೋಳದ ಬೀಜದ ಕಿಟ್‌ಗಳನ್ನು ರೈತರಿಗೆ ವಿತರಿಸಲಾಗುತ್ತಿದೆ. ನೀರಾವರಿ ಜಮೀನುಗಳಲ್ಲಿ ಬಿತ್ತನೆ ಮಾಡುವ ಮೂಲಕ ಜಾನುವಾರುಗಳ ಮೇವಿನ ಸಮಸ್ಯೆ ನಿವಾರಣೆ ಸಾಧ್ಯವಾಗಲಿದೆ ಎಂದರು. ಇದಕ್ಕೂ ಮುನ್ನ ತಾಲೂಕಿನ ಸಿ.ಕೆ.ಪುರ,ಕಿರ್ಲಾಲಹಳ್ಳಿ ರಾಜವಂತಿ ಗ್ರಾಮಗಳಿಗೆ ಅಗಮಿಸಿ,ರೈತರ ಜಮೀನುಗಳಲ್ಲಿ ಶೇಂಗಾ ಬೆಳೆಯ ಪರಿಶೀಲನೆ ನಡೆಸಿದರು. ಈ ವೇಳೆ ಶಾಸಕ,ತುಮುಲ್‌ ಅಧ್ಯಕ್ಷ ಎಚ್‌.ವಿ.ವೆಂಕಟೇಶ್‌, ಚನ್ನಮಲ್ಲಯ್ಯ, ಡಿಸಿ ಶುಭಕಲ್ಯಾಣ್‌, ಎಸಿ ಗುಟೂರು ಶಿವಪ್ಪ ಇತರರಿದ್ದರು.