ಜನಶ್ರೇಯೋಭಿವೃದ್ಧಿ ಸಹಕಾರ ಸಂಘಕ್ಕೆ 11 ಲಕ್ಷ ರು. ನಿವ್ವಳ ಲಾಭ: ಎಚ್.ವಿ.ಅಶ್ವಿನ್ ಕುಮಾರ್

| Published : Sep 23 2024, 01:32 AM IST

ಸಾರಾಂಶ

ಕಳೆದ ಸಾಲಿನಲ್ಲಿ 8.80 ಕೋಟಿ ರು. ವಹಿವಾಟು ನಡೆಸಲಾಗಿದೆ. ಈ ಬಾರಿ 11 ಲಕ್ಷ ರು.ನಿವ್ವಳ ಲಾಭ ಬಂದಿದೆ. ಸಂಸ್ಥೆಯಲ್ಲಿ ವ್ಯವಹಾರವನ್ನು ಕಂಪ್ಯೂಟರಿಕರಣ ಮಾಡಲಾಗಿದೆ. ಅತಿ ಶೀಘ್ರದಲ್ಲೇ ಸ್ವಂತ ಕಟ್ಟಡಕ್ಕಾಗಿ ನಿವೇಶನ ಖರೀದಿಸುವ ಬಗ್ಗೆ ಸದಸ್ಯರು ತೀರ್ಮಾನಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಹಲಗೂರು

ಹಲಗೂರು ಹೋಬಳಿ ಜನಶ್ರೇಯೋಭಿವೃದ್ಧಿ ಸಹಕಾರ ಸಂಘಕ್ಕೆ ಪ್ರಸಕ್ತ ವರ್ಷ 11,40,137 ರು. ನಿವ್ವಳ ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಎಚ್.ವಿ.ಅಶ್ವಿನ್ ಕುಮಾರ್ ತಿಳಿಸಿದರು.

ಬಿಕೆ ಕಾಂಪ್ಲೆಕ್ಸ್‌ನ ಆವರಣದಲ್ಲಿ ನಡೆದ ಸರ್ವ ಸದಸ್ಯರ ವಾರ್ಷಿಕ ಮಹಾ ಸಭೆಯಲ್ಲಿ ಮಾತನಾಡಿದ ಅವರು, ಸಂಘ ಪ್ರಾರಂಭವಾಗಿ ಎಂಟು ವರ್ಷಗಳಾಗಿವೆ. ಕಳೆದ ಸಾಲಿನಲ್ಲಿ 8.80 ಕೋಟಿ ರು. ವಹಿವಾಟು ನಡೆಸಲಾಗಿದೆ. ಈ ಬಾರಿ 11 ಲಕ್ಷ ರು.ನಿವ್ವಳ ಲಾಭ ಬಂದಿದೆ. ಸಂಸ್ಥೆಯಲ್ಲಿ ವ್ಯವಹಾರವನ್ನು ಕಂಪ್ಯೂಟರಿಕರಣ ಮಾಡಲಾಗಿದೆ. ಅತಿ ಶೀಘ್ರದಲ್ಲೇ ಸ್ವಂತ ಕಟ್ಟಡಕ್ಕಾಗಿ ನಿವೇಶನ ಖರೀದಿಸುವ ಬಗ್ಗೆ ಸದಸ್ಯರು ತೀರ್ಮಾನಿಸಿದ್ದಾರೆ ಎಂದರು.

ಸಂಘದ ನಿರ್ದೇಶಕ ತಮ್ಮಣ್ಣೆಗೌಡ ಮಾತನಾಡಿ, ಸಂಘದಲ್ಲಿ ಸಾಲ ಪಡೆದವರು ಸಕಾಲಕ್ಕೆ ಪಾವತಿಸಿ ಅವರ ಆರ್ಥಿಕ ಮುಗ್ಗಟ್ಟುಗಳನ್ನು ನಿವಾರಿಸಿಕೊಂಡಿದ್ದಾರೆ. ಮುಂದೆಯೂ ಸಹ ಈ ಸಂಸ್ಥೆ ಇನ್ನೂ ಉತ್ತಮ ರೀತಿಯಲ್ಲಿ ಬೆಳೆಯಲಿ ಎಂದು ಆಶಿಸಿದರು.

ಇದೇ ವೇಳೆ ಸಂಘದಿಂದ ದಳವಾಯಿ ಕೋಡಿಹಳ್ಳಿಯ ಕುಮಾರ್ ಮತ್ತು ಅಶೋಕ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದು, ಅವರು ಡಯಾಲಿಸ್ ನಡೆಸಿಕೊಳ್ಳುತ್ತಿದ್ದಾರೆ. ಇವರಿಗೆ ತಲಾ 7,500 ರು. ಸೇರಿ 15,000 ರು. ಗಳ ಚೆಕ್ಕನ್ನು ನೀಡಲಾಯಿತು.

ಕಾರ್ಯಕ್ರಮವನ್ನು ಸಂಘದ ಉಪಾಧ್ಯಕ್ಷ ಪುಟ್ಟಲಿಂಗೇಗೌಡ ಉದ್ಘಾಟಿಸಿದರು. ನಿರ್ದೇಶಕರಾದ ಅನೂಪ್ ರಾಜಶೇಖರ್, ವಿರೂಪಾಕ್ಷ, ಜೀವನ್ ಕುಮಾರ್ ,ತಮ್ಮಣ್ಣೇಗೌಡ, ಬಿ.ಕೆ.ಸುರೇಶ್, ಎಚ್.ಆರ್. ರವಿ, ಎಚ್.ಎನ್.ಶ್ರೀಧರ್, ಎನ್.ಪ್ರವೀಣಾ, ಎಂ.ಎನ್. ಶೋಭಾ, ಜಿ.ಕೆ.ಕವಿತಾ ಸೇರಿದಂತೆ ಮುಖ್ಯ ಕಾರ್ಯನಿರ್ವಾಹಕಿ ಎಚ್.ಎಮ್.ರಶ್ಮಿ, ನಗದು ಗುಮಾಸ್ತರಾದ ನಾಗವೇಣಿ, ಕಂಪ್ಯೂಟರ್ ಆಪರೇಟರ್ ಮನೋಜ್ ಎಚ್.ಎನ್‌ ಹಾಗೂ ಪಿಗ್ಮಿ ಸಂಗ್ರಹ ಕರಾದ ಪರಮೇಶ, ಸತೀಶ್ ಇದ್ದರು.