ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದ ಯುವ ರೈತ ಉಲ್ಲಾಸ್ ಗೌಡ ಸಾಕಿದ್ದ ಬಂಡೂರು ತಳಿಯ 11 ತಿಂಗಳ ಟಗರು ಅನ್ನು 1.35 ಲಕ್ಷ ರು. ದಾಖಲೆಯ ಬೆಲೆಗೆ ಬೆಂಗಳೂರಿನ ಎಂಜಿನಿಯರ್ ಹರೀಶ್ ಖರೀದಿ ಮಾಡಿದ್ದಾರೆ.
ಕನ್ನಡಪ್ರಭ ವಾರ್ತೆ ಮಳವಳ್ಳಿ
ತಾಲೂಕಿನ ಕಿರುಗಾವಲು ಗ್ರಾಮದ ಯುವ ರೈತ ಉಲ್ಲಾಸ್ ಗೌಡ ಸಾಕಿದ್ದ ಬಂಡೂರು ತಳಿಯ 11 ತಿಂಗಳ ಟಗರು ಅನ್ನು 1.35 ಲಕ್ಷ ರು. ದಾಖಲೆಯ ಬೆಲೆಗೆ ಬೆಂಗಳೂರಿನ ಎಂಜಿನಿಯರ್ ಹರೀಶ್ ಖರೀದಿ ಮಾಡಿದ್ದಾರೆ.ಕಳೆದ ಹಲವು ವರ್ಷಗಳಿಂದ ವಿದ್ಯಾಭ್ಯಾಸದೊಂದಿಗೆ ಕುರಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿರುವ ಯುವ ರೈತ ಉಲ್ಲಾಸ್ ಗೌಡ ಕಳೆದ ವರ್ಷವೂ ಬಂಡೂರು ತಳಿಯ ಟಗರನ್ನು 1.48 ಲಕ್ಷ ರು.ಗೆ ಮಾರಾಟ ಮಾಡಿ ಗಮನ ಸೆಳೆದಿದ್ದರು.
ಕಳೆದ ಕೆಲ ತಿಂಗಳ ಹಿಂದೆ ಬೆಂಗಳೂರಿನಿಂದ 50 ಸಾವಿರ ರು.ನೀಡಿ ತಂದಿದ್ದ ರೈತ ಅದನ್ನು ಉತ್ತಮವಾಗಿ ಸಾಕಾಣಿಕೆ ಮಾಡಿದ್ದರು. ಇದೀಗ ಟಗರು ಅನ್ನು 1.35 ಲಕ್ಷ ರು. ನೀಡಿ ಬೆಂಗಳೂರು ಮೂಲದ ಹರೀಶ್ ಖರೀದಿಸಿದ್ದಾರೆ.ಉತ್ತಮ ಪೋಷಣೆ, ತಳಿ ಶುದ್ಧತೆ ಹಾಗೂ ದೇಹದ ತೂಕದ ಕಾರಣದಿಂದ ವಿಶೇಷ ಗಮನ ಸೆಳೆದಿರುವ ಈ ಬಂಡೂರು ಟಗರನ್ನು ತಳಿ ಕುರಿಗಳ ಅಭಿವೃದ್ಧಿ ಹಾಗೂ ಸಂರಕ್ಷಣೆ ಉದ್ದೇಶದಿಂದಲೇ ಖರೀದಿಸಿದ್ದಾರೆ. ಈಗಾಗಲೇ 25 ಬಂಡೂರು ತಳಿ ಹೆಣ್ಣು ಕುರಿಗಳನ್ನು ಸಾಕುತ್ತಿದ್ದು, ಬಂಡೂರು ತಳಿ ಕುರಿಗಳು ಅಪರೂಪವಾಗುತ್ತಿದ್ದು, ಅವುಗಳ ಅಭಿವೃದ್ಧಿಗೆ ಈ ರೀತಿಯ ಪ್ರಯತ್ನ ಅಗತ್ಯವೆಂದು ಹರೀಶ್ ಅಭಿಪ್ರಾಯಪಟ್ಟರು.
ಬಂಡೂರು ತಳಿ ಟಗರು ಉಳಿದ ಸಾಮಾನ್ಯ ಕುರಿಗಳಿಂದ ವಿಭಿನ್ನವಾಗಿ ಕಾಣಿಸುತ್ತದೆ. ನೋಡಲು ಅತ್ಯಂತ ಆಕರ್ಷಣೀಯವಾಗಿ ಸಾಮಾನ್ಯ ಕುರಿಗಿಂತ ಗಿಡ್ಡನೆಯ ಕಾಲು, ಉದ್ದವಾದ ದೇಹ ಹೊಂದಿದೆ. ಬಂಡೂರು ಕುರಿಯ ಮಾಂಸ ಸಾಮಾನ್ಯ ಕುರಿ ಹಾಗೂ ಮೇಕೆಗಳಿಗಿಂತ ಅತ್ಯುತ್ತಮ ರುಚಿ ನೀಡಲಿದೆ.ಈ ಮಾಂಸ ಮಾರಾಟ ತೀರ ಅಪರೂವಾಗಿದೆ. ಈ ತಳಿಯ ಕುರಿಗಳು ಇರುವುದು ಬೆರಳೆಣಿಕೆಯಷ್ಟು ಮಾತ್ರ ಹೀಗಾಗಿ ರೈತ ಉಲ್ಲಾಸ್ ಗೌಡ ಅವರ ತಂದೆ ಮನೋಹರ್ (ಮನು) ಗ್ರಾಮೀಣ ಭಾಗದಲ್ಲಿ ಹುಡುಕಿ ಬಂಡೂರು ತಳಿಯ ಕುರಿ ಮರಿಗಳನ್ನು ತಂದು ಸಾಕಾಣಿಕೆ ಮಾಡುತ್ತಿದ್ದಾರೆ. ಟಗರು ಖರೀದಿ ಮಾಡಿರುವ ಎಂಜಿನಿಯರ್ ಹರೀಶ್ ಅವರನ್ನು ಉಲ್ಲಾಸ್ ಗೌಡ ಅಭಿನಂದಿಸಿದರು.