ಮಕ್ಕಳು ತಪ್ಪು ಮಾಡಿದಾಗ, ಓದದಿದ್ದಾಗ ಮಕ್ಕಳಿಗೆ ಒಡೆಯುವುದನ್ನು ನಿಲ್ಲಿಸಬೇಕು. ಅದರ ಬದಲು ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಮಾತನಾಡಿ ಮಕ್ಕಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು. ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಹೆಚ್ಚು.

ಕನ್ನಡಪ್ರಭ ವಾರ್ತೆ ಪಾಂಡವಪುರ

ಪೋಷಕರು ಮಕ್ಕಳ ಎದುರು ಸುಸಂಸ್ಕೃತ ಮಾತುಗಳನಾಡುವ ಜತೆಗೆ ಸಭ್ಯ ನಡೆ-ನುಡಿಯನ್ನು ಅನುರಿಸಬೇಕು ಎಂದು ತೆಂಡೆಕೆರೆ ಮಠದ ಶ್ರೀಗಂಗಾಧರ ಶಿವಾಚಾರ್ಯ ಹೇಳಿದರು.

ತಾಲೂಕಿನ ಚಿನಕುರಳಿಯ ಬಿಜಿಎಸ್ ಶಾಲೆಯಲ್ಲಿ ನಡೆದ ಶಾಲಾ ವಾರ್ಷಿಕೋತ್ಸವದ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ತಾಯಿಯೇ ಮೊದಲ ಗುರು ಎಂಬ ನಾಣುಡಿ ಇದೆ. ಅದೇ ರೀತಿ ಮನೆಗಳಲ್ಲಿ ಪೋಷಕರಾದವರು ಮಕ್ಕಳ ಎದುರು ಸಭ್ಯ ನಡೆಗಳನ್ನು ಅನುಸರಿಸಬೇಕು ಎಂದರು.

ಮಕ್ಕಳು ಕೇಳಿ ಕಲಿಯುವುದಕ್ಕಿಂತ ನೋಡಿ ಕಲಿಯುವುದು ಹೆಚ್ಚು. ಹಾಗಾಗಿ ಮನೆಗಳಲ್ಲಿ ಮಕ್ಕಳನ್ನು ಓದಲು ಬಿಟ್ಟು ಪೋಷಕರು ಮಕ್ಕಳ ಎದುರು ಮೊಬೈಲ್, ಟಿವಿ ನೋಡುವುದನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.

ಮಕ್ಕಳು ತಪ್ಪು ಮಾಡಿದಾಗ, ಓದದಿದ್ದಾಗ ಮಕ್ಕಳಿಗೆ ಒಡೆಯುವುದನ್ನು ನಿಲ್ಲಿಸಬೇಕು. ಅದರ ಬದಲು ಮಕ್ಕಳ ಮನಸ್ಸಿಗೆ ನಾಟುವ ರೀತಿಯಲ್ಲಿ ಮಾತನಾಡಿ ಮಕ್ಕಳನ್ನು ಸರಿದಾರಿಗೆ ತರುವ ಪ್ರಯತ್ನ ಮಾಡಬೇಕು ಎಂದು ಸಲಹೆ ನೀಡಿದರು.

ಹಿರಿಯ ಚಿತ್ರನಟ ರಾಮಕೃಷ್ಣ ಮಾತನಾಡಿ, ಚುಂಚನಗಿರಿ ಮಠದ ಡಾ.ಶ್ರೀಬಾಲಗಂಗಾಧರನಾಥ ಮಹಾಸ್ವಾಮೀಜಿಗಳು ದೇಶದ ಬಹುದೊಡ್ಡ ಆಸ್ತಿಯಾಗಿದ್ದರು. ಅವರೊಬ್ಬ ತ್ಯಾಗಜೀವಿ ಸಮಾಜದ ಒಳಿತಿಗಾಗಿ ಸನಾತನ ಹಿಂದೂ ಧರ್ಮದ ಉಳಿವಿಗೆ, ವನ ಸಂವೃದ್ದಿ, ಜನರ ಸುಖ ಜೀವನಕ್ಕಾಗಿ ಅನೇಕ ಕೆಲಸಗಳನ್ನು ಮಾಡಿದ್ದಾರೆ ಎಂದರು.

ಇದೇ ವೇಳೆ ಶಾಲೆಯ ಡೈರಿ ಹಾಗೂ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮಗಳು ಮೂಡಿಬಂದವು. ಪೋಷಕರು, ಸಾರ್ವಜನಿಕರು ನೋಡಿ ಸಂಭ್ರಮಿಸಿದರು.

ಕಾರ್ಯಕ್ರಮದಲ್ಲಿ ಸಂಸ್ಥೆ ಕಾರ್ಯದರ್ಶಿ ಡಾ.ಜೆ.ಎನ್.ರಾಮಕೃಷ್ಣೇಗೌಡ, ಹಿರಿಯ ನಟಿ ಪದ್ಮವಾಸಂತಿ, ಜಿಪಂ ಮಾಜಿ ಸದಸ್ಯೆ ಶಾಂತಲ ರಾಮಕೃಷ್ಣೇಗೌಡ, ಚಿನಕುರಳಿ ಸೊಸೈಟಿ ಅಧ್ಯಕ್ಷ ಸಿ.ಎಸ್.ಗೋಪಾಲಗೌಡ, ಗ್ರಾಪಂ ಅಧ್ಯಕ್ಷೆ ಧನಲಕ್ಷ್ಮಿವಸಂತ್ ಕುಮಾರ್, ಜೂನಿಯರ್ ಪುನೀತ್ ರಾಜ್ ಕುಮಾರ್, ಪ್ರಾಂಶುಪಾಲ ಚಿದಂಬರ್ ಸೇರಿದಂತೆ ಶಿಕ್ಷಕರು, ಸಿಬ್ಬಂದಿಗಳು ಹಾಜರಿದ್ದರು.