ಸಾರಾಂಶ
ಬೆಳಗಾವಿ : ಬೆಳಗಾವಿಯ ಸುವರ್ಣಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮೂರನೇ ದಿನವಾದ ಗುರುವಾರವೂ ಪ್ರತಿಭಟನೆಗಳ ಅಬ್ಬರ ಜೋರಾಗಿತ್ತು. ಗುರುವಾರ ಸುಮಾರು 11 ಸಂಘಟನೆಗಳು ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುವರ್ಣ ವಿಧಾನಸೌಧದ ಬಳಿ ಪ್ರತಿಭಟನೆ ನಡೆಸಿದವು.
ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಪ್ರತಿಭಟನೆ ನಡೆಸಿ, ಮಾಜಿ ಸೈನಿಕರಿಗೆ ರಾಜ್ಯ ಸರ್ಕಾರದ ಹುದ್ದೆಗಳಲ್ಲಿ ಶೇ.10ರಷ್ಟು ಮೀಸಲಾತಿ ಕಡ್ಡಾಯ ಜಾರಿಗೊಳಿಸಬೇಕು. ಮಾಜಿ ಸೈನಿಕರ ನಿಗಮ ಅಥವಾ ಮಂಡಳಿ ರಚಿಸಬೇಕು. ಚುನಾವಣೆಯಲ್ಲಿ ಮಾಜಿ ಸೈನಿಕರಿಗೂ ಮೀಸಲಾತಿ ನಿಗದಿ ಮಾಡಬೇಕು ಎಂಬುದು ಸೇರಿ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿತು.
ಇದೇ ವೇಳೆ, ಸಂಘಟಿತ ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಕನಿಷ್ಠ ವೇತನ ಜಾರಿ, ಅಂಗನವಾಡಿ, ಆಶಾ, ಬಿಸಿಯೂಟ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿ ಎಐಟಿಯುಸಿ ಪ್ರತಿಭಟಿಸಿತು. ಸಮಾನ ಕೆಲಸಕ್ಕೆ ಸಮಾನ ವೇತನ ಸೇರಿ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯತ ಮಟ್ಟದ ಮುಖ್ಯ ಪುಸ್ತಕ ಬರಹಗಾರರ ಮತ್ತು ಸ್ಥಳೀಯ ಸಮುದಾಯ ಸಂಪನ್ಮೂಲ ವ್ಯಕ್ತಿಗಳ, ಸಖಿಯರ ಮಹಾ ಒಕ್ಕೂಟ ಧರಣಿ ನಡೆಸಿತು.
ಅಲ್ಲದೆ, ರಾಜ್ಯದಲ್ಲಿ ನಡೆದ ವಿವಿಧ ಪ್ರಕರಣಗಳಲ್ಲಿ ಠೇವಣಿದಾರರ ಹಣ ನುಂಗಿದ ವಂಚಕರಿಗೆ ಮರಣ ದಂಡನೆ ವಿಧಿಸುವಂತೆ ಆಗ್ರಹಿಸಿ ವಂಚನೆ ಸಂತ್ರಸ್ತ ಠೇವಣಿದಾರರ ಕುಟುಂಬದ ಸದಸ್ಯರು ಪ್ರತಿಭಟನೆ ನಡೆಸಿದರು.
ಟೇಲರಿಂಗ್ ನಂಬಿಕೊಂಡು ಜೀವನ ನಡೆಸುತ್ತಿರುವವರಿಗೆ ಸಾಮಾಜಿಕ ಭದ್ರತೆ ನೀಡಬೇಕು, ಕೇರಳ ಸರ್ಕಾರದ ಮಾದರಿಯಲ್ಲಿ ಟೇಲರ್ಸ್ ಕ್ಷೇಮನಿಧಿ ಸ್ಥಾಪಿಸಬೇಕು ಎಂದು ಆಗ್ರಹಿಸಿ ಅಖಿಲ ಕರ್ನಾಟಕ ಟೇಲರಿಂಗ್ ಸಂಘಟನೆಯ ಸದಸ್ಯರು ಧರಣಿ ನಡೆಸಿದರು. ಅಲ್ಲದೆ, ಭೀಮವಾದ ದಲಿತ ಸಂಘರ್ಷ ಸಮಿತಿ, ಕರ್ನಾಟಕ ರಾಜ್ಯ ಪರವಾನಗಿ ಪಡೆದ ಭೂಮಾಪಕರ ಸಂಘ, ಸ್ವಾತಂತ್ರ್ಯ ಯೋಧರ ಉತ್ತರಾಧಿಕಾರಿಗಳ ಸಂಘ, ರಾಜ್ಯ ಅನುದಾನರಹಿತ ಶಾಲಾ- ಕಾಲೇಜುಗಳ ಆಡಳಿತ ಮಂಡಳಿಗಳ ಮತ್ತು ನೌಕರರ ಒಕ್ಕೂಟ, ಕರ್ನಾಟಕ ಕಬ್ಬು ಬೆಳೆಗಾರರ ಸಂಘ, ರಾಜ್ಯ ನೇರಗುತ್ತಿಗೆ ವಿಶೇಷ ಸಂಪನ್ಮೂಲ ಶಿಕ್ಷಕರ ಸಂಘಗಳು ಕೂಡ ಪ್ರತಿಭಟನೆ ನಡೆಸಿ, ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದವು.