116 ಡೆಂಘೀ ಕೇಸ್‌ ಪತ್ತೆ; ಸಕಾಲದಲ್ಲಿ ಚಿಕಿತ್ಸೆ ಪಡೀರಿ: ಡಿಎಚ್‌ಒ ಡಾ.ಅಶ್ವತ್‌ಬಾಬು

| Published : May 19 2024, 01:47 AM IST

116 ಡೆಂಘೀ ಕೇಸ್‌ ಪತ್ತೆ; ಸಕಾಲದಲ್ಲಿ ಚಿಕಿತ್ಸೆ ಪಡೀರಿ: ಡಿಎಚ್‌ಒ ಡಾ.ಅಶ್ವತ್‌ಬಾಬು
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಅಶ್ವತ್‌ ಬಾಬು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಚಿಕ್ಕಮಗಳೂರು

ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಈವರೆಗೆ 116 ಡೆಂಘೀ ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿದ್ದು, ಕಳೆದ ಒಂದು ತಿಂಗಳಲ್ಲಿ ಈ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇದರಿಂದ ಯಾವುದೇ ಸಾವು ಸಂಭವಿಸಿಲ್ಲ, ಸಕಾಲದಲ್ಲಿ ಚಿಕಿತ್ಸೆ ಪಡೆದರೆ ಆರೋಗ್ಯ ಸರಿ ಹೋಗುತ್ತದೆ. ಜ್ವರ ಬಂದಿದ್ದರೆ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಅಶ್ವತ್‌ಬಾಬು ಹೇಳಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದು ತಿಂಗಳಲ್ಲಿ 46 ಪ್ರಕರಣ ಪತ್ತೆಯಾಗಿವೆ. ಚಿಕ್ಕಮಗಳೂರು ತಾಲೂಕಿನಲ್ಲಿ 79 ಪ್ರಕರಣ ಪತ್ತೆಯಾಗಿದ್ದರೆ, ಕಡೂರಿನಲ್ಲಿ 6, ತರೀಕೆರೆಯಲ್ಲಿ 10, ಎನ್‌.ಆರ್‌.ಪುರದಲ್ಲಿ 2, ಕೊಪ್ಪದಲ್ಲಿ 5, ಶೃಂಗೇರಿಯಲ್ಲಿ 12 ಹಾಗೂ ಮೂಡಿಗೆರೆಯಲ್ಲಿ 2 ಡೆಂಗ್ಯೂ ಪಾಸಿಟಿವ್‌ ಪ್ರಕರಣ ಪತ್ತೆಯಾಗಿವೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿರುವ 578064 ಮನೆಗಳಲ್ಲಿ 3403183 ಪ್ರದೇಶಗಳಲ್ಲಿ ಲಾರ್ವಾ ಸಮೀಕ್ಷೆ ನಡೆಸಲಾಗಿದ್ದು, ಈ ಪೈಕಿ 7723 ಮನೆಗಳ 9133 ಪ್ರದೇಶಗಳಲ್ಲಿ ಲಾರ್ವಾ ಕಂಡು ಬಂದಿದ್ದು, ಇದನ್ನು ನಿರ್ಮೂಲನೆ ಮಾಡಲಾಗಿದೆ. ನಿರಂತರ ಲಾರ್ವಾ ಸಮೀಕ್ಷೆ ಜತೆಗೆ 6 ವಾರಗಳ ವಿಶೇಷ ಲಾರ್ವಾ ಸಮೀಕ್ಷೆ ಹಾಗೂ ಸೊಳ್ಳೆ ಉತ್ಪತ್ತಿ ತಾಣಗಳನ್ನು ನಾಶಪಡಿಸಲಾಗುತ್ತಿದೆ ಎಂದು ಹೇಳಿದರು.

ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಕ್ಷಿಪ್ರ ಕಾರ್ಯ ತಂಡ ರಚಿಸಿಕೊಂಡು ಜ್ವರ ಕಂಡು ಬಂದ ಹಾಗೂ ಪ್ರಕರಣಗಳು ಕಂಡು ಬಂದ ಹಳ್ಳಿಗಳಿಗೆ ತಕ್ಷಣ ಭೇಟಿ ನೀಡಿ ಮುಂಜಾಗ್ರತಾ ಮತ್ತು ನಿಯಂತ್ರಣ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮಲೇರಿಯಾ ಹರಡುವ ಅನಾಫಿಲಿಸ್‌ ಸೊಳ್ಳೆಗಳ ನಿಯಂತ್ರಣಕ್ಕಾಗಿ ಸ್ಥಳೀಯ ಗ್ರಾಮ ಪಂಚಾಯ್ತಿ ಅಧಿಕಾರಿಗಳ ಸಹಕಾರದೊಂದಿಗೆ ಇದುವರೆಗೆ 3571 ತಾಣ ಗುರುತಿಸಿ 2022ನೇ ಸಾಲಿನಲ್ಲಿ 623 ಹಾಗೂ 2023ನೇ ಸಾಲಿನಲ್ಲಿ 2827 ತಾಣಗಳಲ್ಲಿ ಲಾರ್ವಾಹಾರಿ ಮೀನು ಮರಿಗಳನ್ನು ಬಿಡಲಾಗಿದೆ. ಪ್ರಸಕ್ತ ಸಾಲಿನಲ್ಲಿ ಕ್ರಿಯಾ ಯೋಜನೆ ಸಿದ್ಧಪಡಿಸಿಕೊಂಡು ಮೀನು ಮರಿ ಬಿಡಲು ಆಯೋಜಿಸಲಾಗಿದೆ ಎಂದರು.

ಇದುವರೆಗೆ 667 ವಲಸೆ ಜನರಿಗೆ ಮಲೇರಿಯಾ ಮತ್ತು 590 ವಲಸೆ ಜನ ಮತ್ತು 198 ಮೂಲ ನಿವಾಸಿಗಳಿಗೆ ಸಂಶಯಾತ್ಮಕ ಫೈಲೇರಿಯಾ ಪರೀಕ್ಷೆ ಮಾಡಿಸಲಾಗಿದೆ ಎಂದರು.

ಜ್ವರ ಬಂದಿದ್ದರೆ ಕೂಡಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದುಕೊಳ್ಳಬೇಕು. ಇಲ್ಲದೆ ಹೋದರೆ ದೇಹದಲ್ಲಿ ಒಂದಕ್ಕೊಂದು ಸಮಸ್ಯೆ ಹೆಚ್ಚಾಗುತ್ತಾ ಹೋಗುತ್ತದೆ. ಇದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಹೇಳಿದರು.

ಜಿಲ್ಲಾ ಸಾರ್ವಜನಿಕ ಆಸ್ಪತ್ರೆಯ ಸರ್ಜನ್‌ ಡಾ. ಮೋಹನ್‌ಕುಮಾರ್‌ ಮಾತನಾಡಿ, ಜ್ವರ ಬಂದ ತಕ್ಷಣ ಡೆಂಘೀ ಎಂದು ಆತಂಕ ಪಡುವ ಅಗತ್ಯ ಇಲ್ಲ, ಆಗಾಗ ಮಳೆ, ಬಿಸಿಲಿನ ವಾತಾವರಣ ಇದ್ದರೆ ಆರೋಗ್ಯದಲ್ಲಿ ಏರುಪೇರಾಗಿ ಜ್ವರ ಬರುವ ಸಾಧ್ಯತೆ ಇರುತ್ತದೆ. ಸಕಾಲದಲ್ಲಿ ಚಿಕಿತ್ಸೆ ಪಡೆದುಕೊಂಡರೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಇಂಡಿಯನ್‌ ಮೆಡಿಕಲ್ ಅಸೋಸಿಯೇಷನ್‌ ಜಿಲ್ಲಾಧ್ಯಕ್ಷ ಡಾ. ಪ್ಯಾಟ್ರಿಕ್‌, ಸರ್ಕಾರಿ ಮೆಡಿಕಲ್ ಕಾಲೇಜಿನ ಮೆಡಿಷನ್‌ ವಿಭಾಗದ ಮುಖ್ಯಸ್ಥರಾದ ಶ್ರೀಚರಣ್‌, ಡಾ. ಯೋಗೇಶ್‌, ಡಾ. ಬಾಲಕೃಷ್ಣ, ಡಾ. ಭರತ್‌ ಉಪಸ್ಥಿತರಿದ್ದರು.