ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸ್ವೀಕೃತಗೊಂಡಿದ್ದ ಅರ್ಜಿಗಳ ಕುರಿತಂತೆ ಸಾರ್ವಜನಿಕರಿಗೆ ಅರ್ಜಿಯ ಕುರಿತು ಕೈಗೊಂಡಿರುವ ಕ್ರಮಗಳ ಕುರಿತಂತೆ ತಪ್ಪದೇ ಹಿಂಬರಹ ನೀಡಬೇಕು.
ಕಾರವಾರ: ಜಿಲ್ಲೆಯಲ್ಲಿ ಸೆ. 5ರಂದು ನಡೆದ ಮೊದಲನೇ ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸ್ವೀಕೃತಗೊಂಡಿದ್ದ ಒಟ್ಟು 1641 ಅರ್ಜಿಗಳಲ್ಲಿ ಇಂದಿನವರೆಗೆ 1163 ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಬಾಕಿ ಇರುವ 478 ಅರ್ಜಿಗಳಲ್ಲಿ ಇನ್ನು 2 ದಿನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿಲೇವಾರಿ ಮಾಡುವಂತೆ ಸಂಬಂಧಪಟ್ಟ ಇಲಾಖಾಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ನಿರ್ದೇಶನ ನೀಡಿದರು.ಬುಧವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ, ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸ್ವೀಕೃತಗೊಂಡ ಅರ್ಜಿಗಳ ಪ್ರಗತಿ ಕುರಿತು ನಡೆದ ಸಭೆಯ ಅಧ್ಯಕ್ಷೆ ವಹಿಸಿ ಮಾತನಾಡಿದರು.ಪ್ರಜಾಸೇವೆ ಆಂದೋಲನ ಸಭೆಯಲ್ಲಿ ಸ್ವೀಕೃತಗೊಂಡಿದ್ದ ಅರ್ಜಿಗಳ ಕುರಿತಂತೆ ಸಾರ್ವಜನಿಕರಿಗೆ ಅರ್ಜಿಯ ಕುರಿತು ಕೈಗೊಂಡಿರುವ ಕ್ರಮಗಳ ಕುರಿತಂತೆ ತಪ್ಪದೇ ಹಿಂಬರಹ ನೀಡಬೇಕು. ಅರ್ಜಿಗಳ ಕುರಿತಂತೆ ಸೌಲಭ್ಯಗಳನ್ನು ಒದಗಿಸಿದ್ದಲ್ಲಿ ಈ ಬಗ್ಗೆ ಮುಂದಿನ ಪ್ರಜಾಸೇವೆ ಸಭೆಯಲ್ಲಿ ಫಲಾನುಭವಿಗಳಿಗೆ ಸವಲತ್ತು ವಿತರಣೆ ಮಾಡಬೇಕು ಎಂದರು. ಸಾರ್ವಜನಿಕರ ಎಲ್ಲ ಅರ್ಜಿಗಳನ್ನು ಗಂಭೀರವಾಗಿ ಪರಿಗಣಿಸಿ, ಅರ್ಜಿಯ ಕುರಿತು ಕ್ರಮ ಕೈಗೊಂಡ ನಂತರವೇ ಹಿಂಬರಹ ನೀಡಬೇಕು. ಅರ್ಜಿಯಲ್ಲಿನ ಕಾಮಗಾರಿಗೆ ಕೇಂದ್ರ ಕಚೇರಿಯಿಂದ ಹೆಚ್ಚಿನ ಅನುದಾನವನ್ನು ಕೋರಿದ್ದಲ್ಲಿ ಅಥವಾ ಪ್ರಸ್ತಾವನೆ ಸಲ್ಲಿಸಿದ್ದಲ್ಲಿ ಅಥವಾ ಮುಂದಿನ ಕ್ರಿಯಾಯೋಜನೆಯಲ್ಲಿ ಸೇರ್ಪೆಡೆ ಮಾಡಿಕೊಂಡಿದ್ದಲ್ಲಿ ಅದರ ದಾಖಲೆಯನ್ನು ಅರ್ಜಿದಾರರಿಗೆ ನೀಡಬೇಕು ಎಂದರು.ಮುಂದಿನ ಪ್ರಜಾಸೇವೆ ಸಭೆ ನಡೆಯುವ ಸ್ಥಳದಲ್ಲಿ ಆಧಾರ್ ನೋಂದಣಿ ಕೇಂದ್ರವನ್ನು ಮತ್ತು ಆಹಾರ ಇಲಾಖೆಯ ಇ ಕೆವೈಸಿ ಮಾಡುವ ಕೇಂದ್ರವನ್ನು ತೆರೆಯುವಂತೆ ಸೂಚಿಸಿದರು.ಸೆ. 19ರಂದು ಕುಮಟಾದ ದೀವಗಿಯ ಹಾಲಕ್ಕಿ ಒಕ್ಕಲಿಗರ ಸಭಾಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಅಧ್ಯಕ್ಷತೆಯಲ್ಲಿ ಪ್ರಜಾಸೇವೆ ಆಂದೋಲನ ಸಭೆ ನಡೆಯಲಿದ್ದು, ಎಲ್ಲ ಜಿಲ್ಲಾಮಟ್ಟದ ಅಧಿಕಾರಿಗಳು ಮತ್ತು ಕುಮಟಾ ತಾಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಭಾಗವಹಿಸುವಂತೆ ತಿಳಿಸಿದರು.ಸಭೆಯಲ್ಲಿ ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ, ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ ಹಾಗೂ ಜಿಲ್ಲಾ ಮಟ್ಟದ ಇಲಾಖಾಧಿಕಾರಿಗಳು ಇದ್ದರು.