ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಸಿದ್ಧಗಂಗಮಠದ ಲಿಂಗೈಕ್ಯ ಡಾ.ಶಿವಕುಮಾರಸ್ವಾಮಿಗಳ 117 ನೇ ಜಯಂತ್ಯುತ್ಸವ ಪಟ್ಟಣದಲ್ಲಿ ಅದ್ಧೂರಿಯಾಗಿ ನಡೆಯಿತು.ತಾಲೂಕು ವೀರಶೈವ-ಲಿಂಗಾಯತ ಮಹಾಸಭಾದ ಅಧ್ಯಕ್ಷ ವಕೀಲ ವಿ.ಎಸ್.ಧನಂಜಯಕುಮಾರ್ ಅಧ್ಯಕ್ಷತೆಯಲ್ಲಿ ಪಟ್ಟಣದ ಮಹಾಸಭಾದ ಕಚೇರಿಯಲ್ಲಿ ಡಾ.ಶಿವಕುಮಾರ್ ಸ್ವಾಮೀಜಿಗಳ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಶ್ರೀಗಳ ಪುಣ್ಯಸ್ಮರಣೆ ಮಾಡಿದ ವೀರಶೈವ ಸಮಾಜದ ಮುಖಂಡರು ಪಟ್ಟಣದ ದುರ್ಗಾಭವನ್ ವೃತ್ತದಲ್ಲಿ ಅನ್ನದಾಸೋಹ ನಡೆಸಿದರು.
ಶ್ರೀಗಳ ಪುಣ್ಯ ಸ್ಮರಣೆ ನಂತರ ಮಾತನಾಡಿದ ವಿ.ಎಸ್.ಧನಂಜಯಕುಮಾರ್, ಕಾಯಕದ ಮೂಲಕವೇ ಕೈಲಾಸ ಕಂಡವರು ನಮ್ಮ ಶರಣರು. ಬಸವಾದಿ ಶರಣರು ಪ್ರತಿಪಾದಿಸಿದ ಕಾಯಕ ತತ್ವವನ್ನು ಅನುಸರಿಸಿ ಬದುಕಿದ್ದಾಗಲೇ ಭಕ್ತರ ಪಾಲಿಗೆ ನಡೆದಾಡುವ ದೇವರಾದವರು ನಮ್ಮ ಸಿದ್ಧಗಂಗಾ ಶ್ರೀಗಳೆಂದರು.ಗುರು-ಲಿಂಗ-ಜಂಗಮ ತತ್ವಗಳನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಂಡು ಭಕ್ತರಿಗೆ ಗುರುವಾಗಿ ಶರಣ ಮಾರ್ಗವನ್ನು ತೋರಿಸಿದ ಡಾ.ಶಿವಕುಮಾರ ಸ್ವಾಮೀಜಿಗಳು ಅನ್ನ ದಾಸೋಹ ಮತ್ತು ಅಕ್ಷರ ದಾಸೋಹದ ಮೂಲಕ ಬಡ ವಿದ್ಯಾರ್ಥಿಗಳ ಪಾಲಿನ ಕಾಮದೇನುವಾಗಿದ್ದರು ಎಂದರು.
ಎಲ್ಲ ಸಮುದಾಯದ ಮಕ್ಕಳಿಗೂ ವಸತಿ ಶಾಲೆಗಳನ್ನು ಆರಂಭಿಸಿ ಜ್ಞಾನ ದಾಸೋಹಕ್ಕೆ ಮುನ್ನಡಿ ಬರೆದ ಶ್ರೀಗಳು ಜಾತಿ ರಹಿತ ಸಮಾಜದ ನಿಮಾಣಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು ಎಂದರು.ಶ್ರೀಮಠವನ್ನು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕೇಂದ್ರವನ್ನಾಗಿ ಪರಿವರ್ತಿಸಿ ಸಮಸ್ತ ಭಾರತವನ್ನು ತಮ್ಮತ್ತ ಸೆಳೆದರು. ಮಠದ ಆಶ್ರಯದಲ್ಲಿ ಬೆಳೆದು ವಿದ್ಯಾವಂತ ಲಕ್ಷಾಂತರ ಮಂದಿ ದೇಶ ವಿದೇಶಗಳಲ್ಲಿ ನೆಲೆನಿಂತು ತಮ್ಮ ಬದುಕು ಕಟ್ಟಿಕೊಂಡಿದ್ದಾರೆ. ಶ್ರೀಗಳ ಪರಿಶ್ರಮಕ್ಕಾಗಿ ಕೇಂದ್ರ ಸರ್ಕಾರ ಬದುಕಿದ್ದಾಗಲೇ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಬೇಕಾಗಿತ್ತು ಎಂದರು.
ರಾಜ್ಯ ಸರ್ಕಾರ ಡಾ.ಶಿವಕುಮಾರ ಸ್ವಾಮೀಜಿಗಳ ಜಯಂತಿ ದಿನವನ್ನು ದಾಸೋಹ ದಿನವನ್ನಾಗಿ ಆಚರಿಸುವ ಮೂಲಕ ಶ್ರೀಗಳನ್ನು ಗೌರವಿಸಿದೆ. ಕೇಂದ್ರ ಸರ್ಕಾರ ಮರಣೋತ್ತರಾಗಿ ಭಾರತ ರತ್ನ ಪುರಸ್ಕಾರ ನೀಡಿ ಅವರ ಕಾಯಕ ಮೌಲ್ಯಗಳನ್ನು ಗೌರವಿಸುವಂತೆ ಆಗ್ರಹಿಸಿದರು.ಈ ವೇಳೆ ಮಹಾಸಭಾ ಕಾರ್ಯದರ್ಶಿ ಈರಪ್ಪ, ಸಮಾಜದ ಮುಖಂಡರಾದ ಕೆ.ಎಸ್.ರಾಜೇಶ್, ಶಿವಪ್ಪ, ಬ್ಯಾಂಕ್ ನಂಜುಂಡಪ್ಪ, ಬಸವಲಿಂಗಪ್ಪ, ತಾಲೂಕು ಬಿಜೆಪಿ ಪ್ರದಾನ ಕಾರ್ಯದರ್ಶಿ ಚೋಕನಹಳ್ಳಿ ಪ್ರಕಾಶ್, ಯೋಗಪಟು ಅಲ್ಲಮ ಪ್ರಭು ಸೇರಿದಂತೆ ಹಲವು ಮುಖಂಡರು ಮತ್ತು ವೀರಶೈವ ಮಹಾಸಭಾದ ನಿರ್ದೇಶಕರುಗಳು ಇದ್ದರು.